ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು: ಈಶ್ವರಪ್ಪ

– ಸುಲಭ್ ಶೌಚಾಲಯಕ್ಕೆ ಮೋದಿ ಹೆಸರಿಡಿ ಎಂಬುದುನ್ನು ಕಾಂಗ್ರೆಸ್ ಒಪ್ಪುತ್ತಾ?

ಬೆಳಗಾವಿ: ನಾನು ಆ ಪದ ಬಳಸಬಾರದಿತ್ತು, ಆದರೆ ಬಳಸಿದ್ದೇನೆ. ಅದು ತಪ್ಪು, ಈ ಕುರಿತು ಕ್ಷಮೆಯನ್ನು ಯಾಚಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕಾಂಗ್ರೆಸ್‍ನವರ ವಿರುದ್ಧ ಅಶ್ಲೀಲ ಶಬ್ದ ಬಳಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು. ಸಿಟ್ಟಿನ ಭರದಲ್ಲಿ ಹೇಳಿ ಆ ಪದವನ್ನು ಹಿಂಪಡೆದುಕೊಂಡಿದ್ದೇನೆ. ಆದರೆ ಸುಲಭ್ ಶೌಚಾಲಯಕ್ಕೆ ನರೇಂದ್ರ ಮೋದಿ ಅವರ ಹೆಸರಿಡಬೇಕು ಎಂದು ಹೇಳಿದನ್ನು ಕಾಂಗ್ರೆಸ್ ಅವರು ಒಪ್ಪುತ್ತಾರಾ? ಕಾಂಗ್ರೆಸ್ ಅವರು ರಾಜಕಾರಣ ಮಾಡಲು ಕಾಯುತ್ತಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಅವಾಚ್ಯ ಪದ ಬಳಕೆಗೆ ಕ್ಷಮೆ ಯಾಚಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಬಾರಿ ಆಯಿತಲ್ಲ. ಬೆಳಗ್ಗೆಯಿಂದ ಸಂಜೆಯವರೆಗೂ ಅದೇ ಮಾಡಬೇಕಾ ಎಂದು ಮರು ಪ್ರಶ್ನೆ ಕೇಳಿದರು.

ನೆರೆ ಪೀಡಿತ ಬೆಳಗಾವಿ ಜಿಲ್ಲೆಗೆ ಇನ್ನೂ ಹಣ ಬಿಡುಗಡೆ ಮಾಡದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಷ್ಟೇ ಸರ್ಕಾರ ಬಂದಿದೆ. ಬರುತ್ತಿದ್ದ ಹಾಗೇ ನೆರೆಹಾನಿ, ಕೊರೊನಾ ಎಂಬ ಸಂಕಟಗಳು ಎದುರಾಗಿವೆ. ಈ ಬಗ್ಗೆ ಇನ್ನೂ ವರದಿ ಬಂದಿಲ್ಲ. ವರದಿ ಬಂದ ಮೇಲೆ ಎಷ್ಟು ನಷ್ಟವಾಗಿದೆ ಎಂದು ನೋಡಿ ಖಂಡಿತ ಹಣ ಬಿಡುಗಡೆ ಮಾಡುತ್ತೇವೆ. ಇಡೀ ಕರ್ನಾಟಕದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರು ವರದಿ ಕಳುಹಿಸುತ್ತಿದ್ದಾರೆ ಎಂದರು.

ಕಳೆದ ಬಾರಿ ಪ್ರವಾಹದ ವೇಳೆ 1,800 ಕೋಟಿ ರೂ. ರಸ್ತೆ ದುರಸ್ತಿಗಾಗಿ ಬಿಡುಗಡೆ ಮಾಡಿದ್ದೆವು. ಎಲ್ಲ ಜಿಲ್ಲೆಗಳಿಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಬೇಕೆಂಬ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೋಗಿ ಸಮೀಕ್ಷೆ ಮಾಡಿಕೊಂಡು ಬಂದಿದ್ದಾರೆ. ಉಸ್ತುವಾರಿ ಸಚಿವರು ವರದಿ ನೀಡುತ್ತಿದ್ದಂತೆ ಹಣ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.

Source: publictv.in Source link