ಪಾರಿವಾಳ ಹಿಡಿಯಲು ಹೋಗಿ ನಾಲ್ಕನೇ ಮಹಡಿಯಿಂದ ಬಿದ್ದು ಯುವಕ ಸಾವು

ಬೆಂಗಳೂರು: ಯುವಕನೊಬ್ಬ ರಾತ್ರಿ ವೇಳೆ ಅಪಾರ್ಟ್ ಮೆಂಟ್ ಮೇಲೆ ಪಾರಿವಾಳ ಹಿಡಿಯಲು ಹೋಗಿ, ಕಾಲು ಜಾರಿ ನಾಲ್ಕನೇ ಮಹಡಿಯಿಂದ ಬಿದ್ದು ಸಾವವನ್ನಪ್ಪಿರುವ ಘಟನೆ ಸಂಜಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಮರ್ ಫಾರೂಕ್(19) ಪ್ರಾಣ ಕಳೆದುಕೊಂಡ ಯುವಕ. ವಿದ್ಯಾರ್ಥಿಯಾಗಿದ್ದ ಉಮರ್ ಕೊರೊನಾ ಬಿಕ್ಕಟ್ಟಿನಿಂದ ಭೂಪಸಂದ್ರದ ಮನೆಯಲ್ಲೇ ಉಳಿದುಕೊಂಡಿದ್ದ. ಮನೆ ಬಳಿ ಪಾರಿವಾಳ ಸಾಕುವ ವಿಪರೀತ ಹುಚ್ಚು ಬೆಳೆಸಿಕೊಂಡಿದ್ದ. ಮನೆ ಹತ್ತಿರದ ಅಪಾರ್ಟ್ ಮೆಂಟ್ ಬಳಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳ ಬರುತ್ತಿದ್ದವು. ಇದನ್ನು ಮನಗಂಡು ಹೇಗಾದರೂ ಮಾಡಿ ಪಾರಿವಾಳ ಹಿಡಿಯುವ ಹಪಾಹಪಿಗೆ ಉಮರ್ ಮುಂದಾಗಿದ್ದ.

ನಿನ್ನೆ ರಾತ್ರಿ ಸ್ನೇಹಿತರಿಗೆ ಪಾರಿವಾಳ ಹಿಡಿದುಕೊಂಡು ಬರುವುದಾಗಿ ಹೇಳಿ ಅಪಾರ್ಟ್ ಮೆಂಟ್ ಪಕ್ಕದಲ್ಲಿರುವ ಬೃಂದಾವನ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಹತ್ತಿದ್ದಾನೆ. ಅಲ್ಲಿಂದ ಪಕ್ಕದಲ್ಲಿರುವ ಅಪಾರ್ಟ್ ಮೆಂಟ್ ಗೆ ಹತ್ತುವಾಗ ಕಾಲು ಜಾರಿ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Source: publictv.in Source link