ಕಚೇರಿಯ ಬೋರ್ಡ್ ತೆರವು – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?

ಬಳ್ಳಾರಿ: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಇದೀಗ ಅಸಮಾಧಾನದಿಂದ ತಮ್ಮ ಶಾಸಕರ ಕಚೇರಿಯ ಬೋರ್ಡ್ ತೆರವುಗೊಳಿಸುತ್ತಿದ್ದಾರೆ.

ಪ್ರವಾಸೋದ್ಯಮ ಖಾತೆ ನೀಡಿದ ಹಿನ್ನೆಲೆ ಆನಂದ್ ಸಿಂಗ್ ಅಸಮಾಧಾನಗೊಂಡಿದ್ದು, ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ ಈ ವೇಳೆ ಸಿಎಂ ಎರಡು ದಿನ ಸಮಯ ಕೇಳಿದ್ದರು ಎನ್ನಲಾಗಿದೆ. ಇದೀಗ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆ ಕಳೆದ 14 ವರ್ಷದಿಂದ ಹೊಸಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ಹೊಸಪೇಟೆ ಶಾಸಕರ ಕಚೇರಿ ಬೋರ್ಡ್ ತೆರವುಗೊಳಿಸುತ್ತಿದ್ದು, ಸಂಪೂರ್ಣ ಕಚೇರಿ ಬಂದ್ ಮಾಡಲು ಆನಂದ್ ಸಿಂಗ್ ಮುಂದಾಗಿದ್ದಾರೆ. ಕ್ರೇನ್ ಮೂಲಕ ಕಚೇರಿಯನ್ನು ತೆರವುಗೊಳಿಸುತ್ತಿದ್ದಾರೆ. ಈ ಹಿಂದೆಯೂ ಸಮ್ಮಿಶ್ರ ಸರ್ಕಾರದಲ್ಲಿ ಮುನಿಸಿಕೊಂಡು ಆನಂದ ಸಿಂಗ್ ರಾಜೀನಾಮೆ ನೀಡಿದ್ದರು. ಇದೀಗ ಆನಂದ್ ಸಿಂಗ್ ನಡೆಯಿಂದ ಬಿಜೆಪಿಯಲ್ಲಿ ಅತಂಕ ಜೊತೆ ಭಿನ್ನಮತೀಯ ಚಟುವಟಿಕೆ ಜೋರಾಗುವ ಸುಳಿವು ಸಿಕ್ಕಿದೆ.

blank

ಭಾನುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆನಂದ್ ಸಿಂಗ್ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದ್ದರು. ಆದ್ರೆ ಭೇಟಿ ವೇಳೆ ಆನಂದ್ ಸಿಂಗ್ ಮನವೊಲಿಸಲು ಸಿಎಂ ವಿಫಲರಾಗಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಭೇಟಿಯ ಬಳಿಕ ಆನಂದ್ ಸಿಂಗ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹಿಂದಿರುಗಿದ್ದರು. ಆನಂದ್ ಸಿಂಗ್ ಬೆನ್ನಲ್ಲೇ ಮತ್ತೋರ್ವ ಅಸಮಧಾನಿತ ಸಚಿವ ಎಂಟಿಬಿ ನಾಗರಾಜ್ ಸಹ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿ, ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸುವದಾಗಿ ಹೇಳಿ ಖಾತೆ ಹಂಚಿಕೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

Source: publictv.in Source link