ಮುಳುಗುತ್ತಿದ್ದ ಬಾಲಕನ ರಕ್ಷಿಸಿ, ನದಿಯಲ್ಲಿ ಕೊಚ್ಚಿ ಹೋದ ಯುವಕ

ಚಿಕ್ಕೋಡಿ/ಬೆಳಗಾವಿ: ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ ಮಾಡಲು ಹೋಗಿ ನೀರಲ್ಲಿ ಮುಳುಗಿ ಯುವಕ ಕಣ್ಮರೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.

ನೋಡ ನೋಡುತ್ತಿದ್ದಂತೆ ನೀರಲ್ಲಿ ಕೊಚ್ಚಿ ಹೋದ ಯುವಕನನ್ನು ಹುಕ್ಕೇರಿ ಪಟ್ಟಣದ ಶರೀಫ್ ಖಾನಜಾದೆ(34) ಎಂದು ಗುರುತಿಸಲಾಗಿದೆ. ಸ್ನಾನ ಮಾಡಲು ಬಂದಿದ್ದ 10 ವರ್ಷದ ಬಾಲಕ ಆಯತಪ್ಪಿ ನದಿಗೆ ಬಿದ್ದಿದ್ದ. ಇದನ್ನು ಕಂಡ ಯುವಕ ಬಾಲಕನನ್ನು ರಕ್ಷಣೆ ಮಾಡಲು ಹೋಗಿದ್ದು, ಈ ವೇಳೆ ನೀರಲ್ಲಿ ಕೊಚ್ಚಿ ಹೋಗಿದ್ದಾನೆ.

10 ವರ್ಷದ ಬಾಲಕನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಶರೀಫ್ ಬಾಲಕನ ರಕ್ಷಣೆ ಮಾಡಿದ್ದು, ಬಳಿಕ ಶರೀಫ್ ನದಿಯಲ್ಲಿ ಕಣ್ಮರೆಯಾಗಿದ್ದಾನೆ. ಕಾಪಾಡಲು ಹೋದ ಶರೀಫ್ ನನ್ನು ಉಳಿಸಲು ಸ್ಥಳೀಯ ಯುವಕರು ಹರಸಾಹಸ ಪಟ್ಟರು. ಆದರೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಶರೀಫ್ ಹುಡುಕಾಟಕ್ಕಾಗಿ ಎನ್‍ಡಿಆರ್‍ಎಫ್ ತಂಡ ಹರಸಾಹಸ ಪಡುತ್ತಿದೆ.

blank

ಸ್ಥಳಕ್ಕೆ ಅಂಕಲಿ ಪೋಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶರೀಫ್ ಹುಡುಕಾಟಕ್ಕಾಗಿ ಇನ್ನೂ ಪ್ರಯತ್ನ ಮುಂದುವರಿದಿದೆ.

Source: publictv.in Source link