ಒಲಿಂಪಿಕ್ಸ್​ಗೆ ಸೇರ್ಪಡೆಯಾಗುತ್ತಾ ಕ್ರಿಕೆಟ್? ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ರೌಂಡಪ್

ಒಲಿಂಪಿಕ್ಸ್​ಗೆ ಸೇರ್ಪಡೆಯಾಗುತ್ತಾ ಕ್ರಿಕೆಟ್? ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ರೌಂಡಪ್

1. ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಇಂದು ಸಿಎಂ ಸಭೆ

blank

ಲವ್ ಯೂ ರಚ್ಚೂ ಸಿನಿಮಾ ಶೂಟಿಂಗ್ ವೇಳೆ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಇಂದು ಸಿಎಂ ಬಸವರಾಜ್ ಬೊಮ್ಮಾಯಿ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಹಿರಿಯ ಕಲಾವಿದರ ಜೊತೆ ಸಭೆ ನಡೆಸಲಿದ್ದಾರೆ. ನಿಯಮಗಳನ್ನ ಪಾಲಿಸದೆ ಚಿತ್ರೀಕರಣ ಮಾಡಲಾಗ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4:30ಕ್ಕೆ ಸಿಎಂ ಸಭೆ ನಡೆಸಲಿದ್ದಾರೆ. ಹಿರಿಯ ಕಲಾವಿದರ ಅಭಿಪ್ರಾಯ ಪಡೆದು ಚಿತ್ರೀಕರಣಕ್ಕೆ ಸರ್ಕಾರ ಒಂದಷ್ಟು ಹೊಸ ನಿಯಮಗಳನ್ನ ರೂಪಿಸುವ ಸಾಧ್ಯತೆಯಿದೆ.

2. ‘ಈಶ್ವರಪ್ಪ ನುಡಿಗಳು ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬ’

blank

ಕಾಂಗ್ರೆಸ್ ಪಕ್ಷದ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿರುವ ಸಚಿವ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಕಾಂಗ್ರೆಸಿಗರ ವಿರುದ್ಧ ಸಚಿವ ಈಶ್ವರಪ್ಪ ಅವರ ಅವಾಚ್ಯ ನುಡಿಗಳು ಬಿಜೆಪಿ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಡೀ ರಾಜ್ಯ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತೇವೆ ಎಂದು ಪ್ರತಿಜ್ಞೆ ಮಾಡಿ, ಅದಕ್ಕೆ ಬದ್ಧರಾಗಿರದೇ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಅಂತಾ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

3. ದೆಹಲಿಗೆ ದೌಡಾಯಿಸಿದ ಶಾಸಕ ರೇಣುಕಾಚಾರ್ಯ

blank
ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ರಚನೆ ವೇಳೆ ರೇಣುಕಾಚಾರ್ಯ ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್​ ನಾಯಕರನ್ನು ಭೇಟಿಯಾಗಿ ಸಾಕಷ್ಟು ಲಾಬಿ ಮಾಡಿದ್ರು. ಆದರೂ ಸಹ ರೇಣುಕಾಚಾರ್ಯಗೆ ಸಚಿವ ಸ್ಥಾನ ಕೈತಪ್ಪಿತ್ತು. ಸಚಿವ ಸ್ಥಾನ ಸಿಗದಿದ್ದಕ್ಕೆ ರೇಣುಕಾಚಾರ್ಯ ಸಾಕಷ್ಟು ನಿರಾಶೆಗೊಂಡಿದ್ರು. ಈಗ ಮತ್ತೆ ರೇಣುಕಾಚಾರ್ಯ ಬಿಜೆಪಿ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

4. 2ಎ ಮೀಸಲಾತಿ ನೀಡಲು ಸೆಪ್ಟೆಂಬರ್ 31ರ ಗಡುವು
ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 31ರೊಳಗೆ 2ಎ ಮೀಸಲಾತಿಯನ್ನ ನೀಡಬೇಕು ಇಲ್ಲವಾದರೆ ಮತ್ತೆ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪಂಚಮಸಾಲಿ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಗಳ ಮೀಸಲಾತಿ ನೀಡುವ ಸ್ವಾತಂತ್ರ್ಯವನ್ನ ರಾಜ್ಯ ಸರ್ಕಾರಗಳಿಗೆ ನೀಡಿದೆ. ಪಂಚಮಸಾಲಿ ಹೋರಾಟ ನಡೆಸಿದಾಗ ಬೊಮ್ಮಾಯಿ ಅವರು ಮಾತು ಕೊಟ್ಟಿದ್ದರು. ಆಗಸ್ಟ್ 12 ಕ್ಕೆ ಪಂಚಮಸಾಲಿ ಸಮುದಾಯದ ಸಭೆ ನಡೆಸುತ್ತೇವೆ.. ಮತ್ತೆ 2ಎ ಮೀಸಲಾತಿ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ದಾವಣಗೆರೆಯಲ್ಲಿ ಪಂಚಮಸಾಲಿ ಶ್ರೀ ಹೇಳಿದ್ದಾರೆ.

5. ಒಬಿಸಿ ಅಧಿಕಾರ, ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
ತಮ್ಮದೇ ಆದ ಪ್ರತ್ಯೇಕ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡಿಕೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ವಿಪಕ್ಷಗಳು ಮಸೂದೆಗೆ ಬೆಂಬಲ ನೀಡಿದ್ದು, ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಗಿದೆ. ಮಸೂದೆಗೆ ಲೋಕಸಭೆಯ 385 ಸದಸ್ಯರ ಒಪ್ಪಿಗೆ ಸಿಕ್ಕಿತು. ಇನ್ನು ಇಂದು ರಾಜ್ಯಸಭೆಯಲ್ಲಿ ಅಂಗೀಕಾರ ಸಿಗಬೇಕಿದ್ದು, ವಿಪಕ್ಷಗಳು ಮಸೂದೆಯನ್ನು ಬೆಂಬಲಿಸಿರುವುದರಿಂದ ಮೇಲ್ಮನೆಯಲ್ಲೂ ಮಸೂದೆ ಸುಲಭವಾಗಿ ಅಂಗೀಕಾರಗೊಳ್ಳುವ ಸಾಧ್ಯತೆಯಿದೆ.

6. ‘ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸಿ’

blank

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಪುನರ್ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಶ್ರೀನಗರದಲ್ಲಿ ನೂತನ ಕಾಂಗ್ರೆಸ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ವಿಧಾನಸಭಾ ಚುನಾವಣೆ ನಡೆಯಬೇಕು. ರಾಜ್ಯದ ಸ್ಥಾನಮಾನ ಪುನರ್‌ ಸ್ಥಾಪನೆ ಮಾಡಬೇಕು ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಸಿಗೋವರೆಗೂ ನಾನು ಹೋರಾಟ ನಡೆಸುತ್ತೇನೆ ಎಂದಿದ್ದಾರೆ.

7. ದೇಶದ 37 ಜಿಲ್ಲೆಗಳಲ್ಲಿ ಕೊರೊನಾ ತೀವ್ರಗತಿಯಲ್ಲಿ ಏರಿಕೆ
ದೇಶದಲ್ಲಿ ಮಹಾಮಾರಿ ಕೊರೊನಾದ ಮೂರನೇ ಅಲೆ ಭೀತಿ ಹೇಚ್ಚಾಗಿದೆ.. ಕಳೆದ ಎರಡು ವಾರಗಳಿಂದ ಕೇರಳದ 11 ಜಿಲ್ಲೆಗಳು ಹಾಗೂ ತಮಿಳು ನಾಡಿನ ಏಳು ಜಿಲ್ಲೆಗಳು ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳ 37 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿವೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಲವ್ ಅಗರವಾಲ್ ತಿಳಿಸಿದ್ದಾರೆ. ಹಾಗೆ ಹನ್ನೊಂದು ರಾಜ್ಯಗಳ 44 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕಿಂತಲೂ ಜಾಸ್ತಿಯಿದೆ ಅಂತಾ ಮಾಹಿತಿ ನೀಡಿದ್ದಾರೆ.

8. ಗ್ರೆನೇಡ್ ಇಟ್ಟುಕೊಂಡಿದ್ದ ಪತ್ರಕರ್ತನ ಬಂಧನ

blank
ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸೆಕ್ಯೂರಿಟಿ ಫೋರ್ಸ್​ ನಿಲ್ಲಿಸಿದ್ದ ವಾಹನದ ಮೇಲೆ ಉಗ್ರರು ಗ್ರೇನೆಡ್ ದಾಳಿ ಮಾಡಿದ್ದು, 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಸ್ಫೋಟದ ಬೆನ್ನಲ್ಲೇ ಅನುಮಾನಾಸ್ಪದವಾಗಿ ಎರಡು ಗ್ರೆನೇಡ್​ಗಳನ್ನ ಇಟ್ಟುಕೊಂಡಿದ್ದ ಓರ್ವ ಪತ್ರಕರ್ತನನ್ನು​ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ಲಾಲ್​ಚೌಕ್ ಬಳಿ ಎರಡು ಗ್ರೆನೇಡ್​​ಗಳನ್ನ ಇಟ್ಕೊಂಡಿದ್ದ ಜರ್ನಲಿಸ್ಟ್​ನನ್ನ ಪೊಲೀಸರು ಬಂಧಿಸಿದ್ದಾರೆ. ಆದಿಲ್ ಫಾರೂಕ್ ಬಂಧಿತ ಆರೋಪಿ. ಗ್ರೆನೇಡ್ ದಾಳಿಯಾದ ಕೆಲವೇ ನಿಮಿಷಗಳಲ್ಲಿ ಈತನನ್ನ ಪೊಲೀಸರು ಬಂಧಿಸಿದ್ದಾರೆ.

9. ಪ್ರಕಾಶ್ ರಾಜ್‌ಗೆ ಹೈದರಾಬಾದ್‌ನಲ್ಲಿ ಶಸ್ತ್ರ ಚಿಕಿತ್ಸೆ

blank

ಚಿತ್ರೀಕರಣ ವೇಳೆ ಬಹುಭಾಷೆ ನಟ ಪ್ರಕಾಶ್ ರಾಜ್‌ ಗಾಯಗೊಂಡಿದ್ದಾರೆ ..ಚೆನ್ನೈನಲ್ಲಿ ಸಿನಿಮಾವೊಂದರ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಪ್ರಕಾಶ್‌ ರಾಜ್‌ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ನಂತರ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಪ್ರಕಾಶ್‌ ರಾಜ್‌ಗೆ ಗಾಯದ ವಿಷಯ ತಿಳಿಯುತ್ತಿದ್ದಂತೆ ನಟನ ಆಪ್ತರು ಮತ್ತು ಅಭಿಮಾನಿಗಳು ಆತಂಕಕ್ಕೆ ಒಳಗಾದ್ದಾರೆ. ನಂತರ ಟ್ವಿಟ್ಟರ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಪ್ರಕಾಶ್ ರಾಜ್, ಆತಂಕ ಪಡುವ ಅಗತ್ಯವಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ.

10. ‘ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಪ್ರಯತ್ನ’

blank
2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ತಿಳಿಸಿದೆ. ಒಂದೊಮ್ಮೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಂಡರೆ ಭಾರತ ತಂಡವನ್ನು ಕಳುಹಿಸಲು ನಾವು ಸಿದ್ಧ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್‌ ಶಾ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ ಐಸಿಸಿ ಈ ಹೇಳಿಕೆ ನೀಡಿದೆ. ಕ್ರಿಕೆಟ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ದಕ್ಷಿಣ ಏಷ್ಯಾದಲ್ಲಿ ಶೇ 92ರಷ್ಟು ಕ್ರಿಕೆಟ್‌ ಪ್ರಿಯರಿದ್ದಾರೆ. ತಮ್ಮ ತಂಡಗಳು ಒಲಂಪಿಕ್ಸ್​ನಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸುವುದನ್ನು ನೋಡಲು ಅವರೆಲ್ಲಾ ಕಾತರರಾಗಿದ್ದಾರೆ’ ಎಂದು ಐಸಿಸಿ ಮುಖ್ಯಸ್ಥ ಗ್ರೆಗ್‌ ಬಾರ್ಕ್ಲೆ ಹೇಳಿದ್ದಾರೆ .

Source: newsfirstlive.com Source link