ದೆಹಲಿಯಲ್ಲಿ ಜಾರಕಿಹೊಳಿ, ಯೋಗೇಶ್ವರ್, ರೇಣುಕಾಚಾರ್ಯ ಲಾಬಿ

ನವದೆಹಲಿ: ಬಿಜೆಪಿಯಲ್ಲಿ ಸದ್ಯಕ್ಕೆ ಭಿನ್ನಮತ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಬೊಮ್ಮಾಯಿ ಕ್ಯಾಬಿನೆಟ್ ರಚನೆಯಾಗುತ್ತಿದ್ದಂತೆಯೇ ಹಲವರಲ್ಲಿ ಅಸಮಾಧಾನ ಉಂಟಾಗಿದ್ದು, ಸಚಿವರಿಂದ ಖಾತೆ ಕ್ಯಾತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ದೆಹಲಿಯಲ್ಲಿ ಲಾಬಿ ನಡೆಸಲಾಗುತ್ತಿದೆ.

ಹೌದು. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿಗೆ ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಯತ್ನಿಸುತ್ತಿದ್ದಾರೆ. ನಾಯಕರು ಕಳೆದ 2 ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸಿ.ಪಿ ಯೋಗೇಶ್ವರ್ ಅವರು ಈಗಾಗಲೇ ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದೇ ವೇಳೆ ಸಿಪಿವೈ ಅವರು ಸಚಿವ ಸ್ಥಾನ ಸಿಗದೇ ಇರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿಯವರು, ನನಗೆ ಮತ್ತೊಂದು ಚಾನ್ಸ್ ಕೊಡಿ ಎನ್ನುತ್ತಿದ್ದಾರೆ. ರಾಜಕೀಯ ದ್ವೇಷದ ಕಾರಣ ಸಿಡಿಯಾಗಿದೆ. ಹೀಗಾಗಿ ಮತ್ತೊಂದು ಅವಕಾಶ ನೀಡಿ ಅಂತ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ದೆಹಲಿಯಲ್ಲಿ ಜಾರಕಿಹೊಳಿ, ಯೋಗೇಶ್ವರ್ ಲಾಬಿ ಮಾಡುತ್ತಿದ್ದಂತೆಯೇ ಇತ್ತ ರೇಣುಕಾಚಾರ್ಯ ಕೂಡ ದೆಹಲಿಗೆ ಹಾರಿದ್ದಾರೆ. ನಿನ್ನೆಯೇ ದೆಹಲಿಗೆ ಹೋಗಿರೋ ರೇಣುಕಾಚಾರ್ಯ, ಸಚಿವ ಸ್ಥಾನಕ್ಕೆ ವರಿಷ್ಠರ ಎದುರು ಬೇಡಿಕೆ ಇಡಲು ಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಖಾತೆ ಕ್ಯಾತೆ – ಭಿನ್ನಮತದ ರಿಪೋರ್ಟ್ ಪಡೆದ ಉಸ್ತುವಾರಿ ಅರುಣ್ ಸಿಂಗ್

Source: publictv.in Source link