ರಾಜ್ಯ ಸಭೆಯಲ್ಲಿ ಇಂದು ಒಬಿಸಿ ಬಿಲ್ ಮಂಡನೆ -ಏನಿದು ಮಸೂದೆ? ಏನೆಲ್ಲಾ ಲಾಭ?

ರಾಜ್ಯ ಸಭೆಯಲ್ಲಿ ಇಂದು ಒಬಿಸಿ ಬಿಲ್ ಮಂಡನೆ -ಏನಿದು ಮಸೂದೆ? ಏನೆಲ್ಲಾ ಲಾಭ?

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಗಳ ಅಧಿಕಾರವನ್ನ ಮರಳಿಸುವ ಒಬಿಸಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಅಲ್ಲದೇ ಈ ಮಸೂದೆ ಇಂದು ರಾಜ್ಯ ಸಭೆಯಲ್ಲಿ ಮಂಡನೆಯಾಗಲಿದೆ. ಈ ಮೂಲಕ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಬೇಕೆಂಬ ಹಲವು ಜಾತಿಗಳ ಹೋರಾಟದ ಹಾದಿ ಸುಗಮವಾಗಲಿದೆ. ಹಾಗಾದ್ರೆ ಏನಿದು ಒಬಿಸಿ ಮಸೂದೆ? ಇದ್ರಿಂದ ರಾಜ್ಯಸರ್ಕಾರಗಳಿಗೆ ಏನೆಲ್ಲಾ ಲಾಭ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜ್ಯಗಳಿಗೆ ಒಬಿಸಿ ಮೀಸಲು ಅಧಿಕಾರ ಮರಳಿಸುವ ಮಸೂದೆ ಸಂಸತ್ತಲ್ಲಿ ಮಂಡನೆಯಾಗಿದೆ. ಈಗಾಗಲೇ ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿದೆ. ಇದೀಗ ರಾಜ್ಯಸಭೆಯಲ್ಲಿ ಇಂದು ಒಬಿಸಿ ಮಸೂದೆ ಮಂಡನೆಯಾಗಲಿದೆ. ಈ ಮೂಲಕ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪಟ್ಟಿಯನ್ನು ತಯಾರಿಸುವ ಹಕ್ಕನ್ನು ರಾಜ್ಯಗಳಿಗೆ ಮರಳಿಸುವ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ.

ಇಂದು ಅಥವಾ ನಾಳೆ ಒಬಿಸಿ ಮಸೂದೆ ಅಂಗೀಕಾರ?
127 ನೇ ತಿದ್ದುಪಡಿ ಮಸೂದೆಯನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವುದಾಗಿ 15 ವಿಪಕ್ಷಗಳು ಕೂಡ ಘೋಷಿಸಿವೆ. ಹೀಗಾಗಿ ಒಬಿಸಿ ಮಸೂದೆ ಇಂದು ಅಥವಾ ನಾಳೆ ಅಂಗೀಕಾರಗೊಂಡು ಕಾಯ್ದೆ ಸ್ವರೂಪ ಪಡೆಯುವ ಭರವಸೆ ಇದೆ. ಹಾಗಾದ್ರೆ ಏನಿದು ಮಸೂದೆ ಅಂತಾ ನೋಡೋದಾದ್ರೆ..

ಏನಿದು ಒಬಿಸಿ ಮಸೂದೆ?
ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಅನ್ವಯ ರಾಜ್ಯ ಸರ್ಕಾರಗಳಿಗೆ ಸಾಮಾಜಿಕ, ಶೈಕ್ಷಣಿಕ, ಮತ್ತು ಉದ್ಯೋಗ ಸೇರಿ ಈ ಮೂರು ಮೀಸಲಾತಿಗಳನ್ನ ಹಿಂದುಳಿದ ವರ್ಗಗಳಿಗೆ ಪ್ರವೇಶ ನೀಡುವ ಹಕ್ಕು ಇರುವುದಿಲ್ಲ. ಸಂವಿಧಾನದ 102ನೇ ತಿದ್ದುಪಡಿಯಲ್ಲೂ ಇದರ ಉಲ್ಲೇಖವಿದೆ. ಇದೀಗ ಈ ಸಂವಿಧಾನದ 102ನೇ ತಿದ್ದುಪಡಿಯ ನಿಬಂಧನೆಗಳನ್ನು ಸ್ಪಷ್ಟಪಡಿಸಲು ಈ ಮಸೂದೆಯನ್ನ ಮಂಡಿಸಲಾಗುತ್ತಿದೆ. ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಮೂಲಕ ಮಂಡನೆಯಾಗಿದೆ. ಈ ಮಸೂದೆ ಮಂಡನೆಯಾದ್ರೆ ರಾಜ್ಯಗಳಿಗೆ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಹಕ್ಕು ಸಿಗಲಿದೆ. ಮಸೂದೆ ಅಂಗೀಕಾರವಾದ ಬಳಿಕ ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶದಿಂದ ಪ್ರತ್ಯೇಕ ಪಟ್ಟಿಗಳನ್ನ ಮಾಡಲಾಗುತ್ತದೆ.

ಇನ್ನು ಮಸೂದೆ ಅಂಗೀಕಾರವಾದ್ರೆ, ಕರ್ನಾಟಕ ಮಹಾರಾಷ್ಟ್ರ ಗುಜರಾತ್‌, ರಾಜಸ್ಥಾನದಲ್ಲಿ ಕೆಲ ಜಾತಿಗಳ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟದ ಹಾದಿ ಸುಗಮವಾಗಲಿದೆ.

ಮೀಸಲಾತಿ ಹಾದಿ ಸುಗಮ
ಕರ್ನಾಟಕದಲ್ಲಿ ಪಂಚಮಸಾಲಿ ಲಿಂಗಾಯತರ 2ಎ ಮೀಸಲಾತಿ ಹೋರಾಟ ಸುಗಮವಾಗಲಿದೆ. ಜೊತೆಗೆ ಹರಿಯಾಣದಲ್ಲಿ ಜಾಟರು, ರಾಜಸ್ಥಾನದಲ್ಲಿ ಗುಜ್ಜರು, ಮಹಾರಾಷ್ಟ್ರದಲ್ಲಿ ಮರಾಠರು, ಗುಜರಾತಿನಲ್ಲಿ ಪಟೇಲರು ಈ ಜಾತಿಗಳ ಮೀಸಲಾತಿ ಹೋರಾಟದ ಹಾದಿ ಸುಗಮವಾಗಲಿದೆ.

ಒಟ್ಟಾರೆ, ಒಬಿಸಿ ಮಸೂದೆ ಇಂದು ಅಥವಾ ನಾಳೆ ಅಂಗೀಕಾರವಾಗಲಿದೆ. ಅದೇನೆ ಇರ್ಲಿ ಈ ಮಸೂದೆ ಬಳಸಿ ಕೆಲವು ಜಾತಿಗಳನ್ನ ಒಬಿಸಿ ಸೇರಿಸುವ ಮೂಲಕ ರಾಜ್ಯ ಸರ್ಕಾರಗಳು ಚುನಾವಣಾ ಲಾಭ ಪಡೆಯಲು ಹವಣಿಸೋದಂತೂ ಪಕ್ಕಾ ಎಂಬ ಮಾತು ಕೇಳಿ ಬಂದಿದೆ.

Source: newsfirstlive.com Source link