ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕುಳಿತು ಅಧಿಕಾರ ಸ್ವೀಕರಿಸಿದ ಸಚಿವ ಸುನೀಲ್ ಕುಮಾರ್

ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕುಳಿತು ಅಧಿಕಾರ ಸ್ವೀಕರಿಸಿದ ಸಚಿವ ಸುನೀಲ್ ಕುಮಾರ್

ಬೆಂಗಳೂರು: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಶಾಸಕ ಸುನೀಲ್ ಕುಮಾರ್ ಅವರು ಇಂದು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು. ನಗರದ ರವೀಂದ್ರ ಕಲಾಕ್ಷೇತ್ರದ ಮುಂಭಾಗದ‌ ಮೆಟ್ಟಿಲು ‌ಮೇಲೆ‌ ಕುಳಿತು ಸಹಿ ಹಾಕುವ‌ ಮೂಲಕ ಸರಳವಾಗಿ ಸುನೀಲ್​ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ನಟಿ ಮಾಳವಿಕಾ, ನಟಿ ತಾರಾ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಭಾಗಿಯಾಗಿದ್ದರು. ಅಧಿಕಾರ ಸ್ವೀಕಾರ ಬಳಿಕ ಪುಸ್ತಕ ಮಳಿಗೆಗೆ ಭೇಟಿ ನೀಡಿದ ಸಚಿವ ಸುನೀಲ್ ಕುಮಾರ್ ಅವರು, ಕನಕದಾಸರ‌ ಕವಿತೆಗಳು, ಸಾಹಿತ್ಯ ಶ್ರೇಣಿ – ಶಿವರಾಂ ಕಾರಂತ ನಾಟಕ, ಡಿವಿಜಿ ನೆನಪಿನ ಚಿತ್ರಗಳು ಎಂಬ ಮೂರು ಪುಸ್ತಕಗಳನ್ನು ಖರೀದಿ ಮಾಡಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುನೀಲ್​ ಕುಮಾರ್ ಅವರು, ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ವಹಿಸಿದ ನನ್ನ ನಡುವಳಿಕೆ ನೋಡಿ ಇಂದು ಸಿಎಂ‌ ಕನ್ನಡ ಸಂಸ್ಕೃತಿ ನನ್ನ ಕೈಯಲ್ಲಿ ‌ಕೊಟ್ಟಿದ್ದಾರೆ. ಈ‌ ಇಲಾಖೆ‌ಯನ್ನು ಇನ್ನಷ್ಟು ಶ್ರೀಮಂತ‌ಗೊಳಿಸುವ ಕೆಲಸ ಮಾಡುತ್ತೇನೆ. ಕನ್ನಡ ಸಂಸ್ಕೃತಿ ಮತ್ತು ಇಂಧನ ನನ್ನ ಕೈಯಲ್ಲಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಪವರ್ ಬರಬೇಕು, ಇಂಧನ ಇಲಾಖೆಯಲ್ಲಿ ಸಂಸ್ಕೃತಿ ತರಬೇಕು.

ಪುಸ್ತಕ ಕೊಂಡುಕೊಳ್ಳುವ ಮೂಲಕ ಅಧಿಕೃತ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಪ್ರತಿಯೊಬ್ಬರೂ ತಿಂಗಳಿಗೊಂದು ಪುಸ್ತಕ ಖರೀದಿಸಿ, ಜನರು ಪ್ರತಿದಿನವೂ ಕನ್ನಡ ಪತ್ರಿಕೆ‌ ಓದಬೇಕು. ಕನ್ನಡ‌ ಸಿನಿಮಾ‌ ನೋಡಬೇಕು. ಈ ಹಿಂದಿನ‌ ಮಿನಿಸ್ಟರ್ ‌ಮಾಡುವ ಕೆಲಸಕ್ಕಿಂತ ಹೆಚ್ಚಾಗಿ ಕೆಲಸ‌ ಮಾಡಲು ಪ್ರಯತ್ನ ಮಾಡುತ್ತೇನೆ. ಕನ್ನಡ ಉಳಿಸುವ‌‌ ಕೆಲಸಕ್ಕೆ ಒಟ್ಟಾಗಿ ಹೋಗೋಣ ಎಂದರು.

Source: newsfirstlive.com Source link