ಸುಮಲತಾ ಅಂಬರೀಶ್ ಯಾವ ಕೆಲಸವನ್ನು ಮಾಡುತ್ತಿಲ್ಲ: ರವೀಂದ್ರ ಶ್ರೀಕಂಠಯ್ಯ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಸಂಸದರು ಮಾಡುವ ಯಾವ ಕೆಲಸವನ್ನು ಮಾಡುತ್ತಿಲ್ಲ, ಬೇಡವಾದ ಕೆಲಸವನ್ನು ಮಾಡಿಕೊಂಡು ನಿಂತಿದ್ದಾರೆ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ದೂರಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಸುಮಲತಾ ಅವರು ಮಾಡಬೇಕಾದ ಯಾವುದೇ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಬೇಡವಾದ ವಿಚಾರವನ್ನು ಎತ್ತಿಕೊಂಡು ಕೆಆರ್‌ಎಸ್‌ ಉಳಿಸುತ್ತೀನಿ ಎಂದು ಹೋಗಿದ್ದಾರೆ. ಕೆಆರ್‌ಎಸ್‌ ಉಳಿಸೋಕೆ ಅಳಿದು ಹೋಗಿರೋದು ಏನು? ಡ್ಯಾಂ ಏನು ಆಗಿಲ್ಲ ಸುರಕ್ಷಿತವಾಗಿ ಇದೆ. ಸಾರ್ವಜಕರಲ್ಲಿ ಅನಾವಶ್ಯಕವಾಗಿ ಗೊಂದಲ ಉಂಟುಮಾಡುತ್ತಿದ್ದಾರೆ ಎಂದಿದ್ದಾರೆ.

ಸಂಸದರಿಂದ ಮಂಡ್ಯ ಜಿಲ್ಲೆಯಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಗಳಿಗೆ ಕಚ್ಚಾ ವಸ್ತುಗಳು ಪೂರೈಕೆ ಆಗುತ್ತಿಲ್ಲ. ಜನ ಸಾಮಾನ್ಯರಿಗೆ ಮನೆ ಕಟ್ಟಲು ಕಲ್ಲು, ಜೆಲ್ಲಿ, ಎಂ ಸ್ಯಾಂಡ್ ಸಿಗುತ್ತಿಲ್ಲ, ದುಪ್ಪಟ್ಟು ಹಣಕೊಟ್ಟು ಕೊಳ್ಳುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದ ವೇಳೆ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಬೇಕೆಂದು ಹೇಳಿದರು. ಆದರೆ ಅಧಿಕಾರಿಗಳು ರಾಜ್ಯಕ್ಕೆ ಒಂದು ಜಿಲ್ಲೆಗೆ ಒಂದು ಕಾನೂನು ಎಂಬಂತೆ ವರ್ತನೆ ಮಾಡುತ್ತಿದ್ದಾರೆ ಇದರಿಂದ ಜನರು ಆಕ್ರೋಶಗೊಂಡಿದ್ದಾರೆ ಎಂದರು.  ಇದನ್ನೂ ಓದಿ:  ಮುಳುಗಡೆಯಾಗಲಿದೆ ಮಂಗಳೂರು, ಮುಂಬೈ, ಚೆನ್ನೈ

ಸುಮಲತಾ ಅಂಬರೀಶ್ ಅವರು ಬೇಡಾವಾದ ಕೆಲಸ ಬಿಟ್ಟು ಅವರ ಕೆಲಸವನ್ನು ಸರಿಯಾಗಿ ಮಾಡಬೇಕು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಎಷ್ಟು ಅಂಡರ್ ಪಾಸ್ ಬೇಕು ಎಂದು ಗಡ್ಕರಿ ಅವರ ಬಳಿ ಮಾತನಾಡಲಿ. ಜಿಲ್ಲೆಯಲ್ಲಿ ಸಂಸದರ ಕೆಲಸವನ್ನು ಶಾಸಕರು ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಸದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Source: publictv.in Source link