ದರ್ಶನ್ ಚಿತ್ರರಂಗಕ್ಕೆ ಬಂದು 24 ವರ್ಷ- ಅಭಿಮಾನಿಗಳಲ್ಲಿ ಮನೆ ಮಾಡಿದ ಸಂಭ್ರಮ

ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುಬೇಡಿಕೆಯ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಇದೀಗ ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 24 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ದಾಸನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಹೌದು. ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ 24 ವರ್ಷ ಸತತವಾಗಿ ದುಡಿದಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕೂಡ ಅವರು ಕಂಡಿದ್ದಾರೆ. ಈ ನಡುವೆ ಸ್ಯಾಂಡಲ್‍ವುಡ್ ನಲ್ಲಿಯೇ ಭದ್ರ ಬುನಾದಿ ಹಾಕಿಕೊಂಡಿರುವ ದರ್ಶನ್ ಸದ್ಯ ಮೇರು ನಟರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.

‘ಮೆಜೆಸ್ಟಿಕ್’ ದರ್ಶನ್ ಅವರ ಮೊದಲ ಸಿನಿಮಾ. ಈ ಸಿನಿಮಾದ ಮೂಲಕ ತಮ್ಮ ಕಲಾ ಬದುಕನ್ನು ಆರಂಭಿಸಿರುವ ದಾಸ, ಕರಿಯ, ಸುಂಟರಗಾಳಿ, ಅಯ್ಯ, ಯೋಧ, ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ, ರಾಬರ್ಟ್ ಹೀಗೆ ಸುಮಾರು 70ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ದರ್ಶನ್’ ಡಿ ಬಾಸ್’ ಅಂತಲೇ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

ಇನ್ನು ಕೇವಲ ನಟನೆ ಮಾತ್ರವಲ್ಲದೆ ದರ್ಶನ್ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಾಣಿಗಳನ್ನು ತುಂಬಾ ಪ್ರೀತಿಸುವ ಇವರು ಅವುಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಒಟ್ಟಿನಲ್ಲಿ ರೀಲ್ ನಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ ನಲ್ಲೂ ದರ್ಶನ್ ಪ್ರಧಾನ ಸೇವಕರಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಸಮಸ್ಯೆ ಇದೆ ಎಂದು ತಮ್ಮ ಎದುರು ಬಂದವರಿಗೆ ಸದಾ ಸಹಾಯದ ಹಸ್ತ ಚಾಚುತ್ತಾ ಬಂದಿದ್ದಾರೆ. ಈ ಮೂಲಕ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿ ಹೊರಹೊಮ್ಮಿದ್ದಾರೆ.

ಸದ್ಯ ಇವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಆಗಸ್ಟ್ 11ಕ್ಕೆ 24 ವರ್ಷಗಳು ತುಂಬಿವೆ. ಈ ಅದ್ಭುತ ದಿನವನ್ನು ದರ್ಶನ್ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಅಲ್ಲದೆ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಶೂಬಾಶಯಗಳನ್ನು ತಿಳಿಸಿದ್ದಾರೆ.

Source: publictv.in Source link