ಅಪ್ರಾಪ್ತ ವಿದ್ಯಾರ್ಥಿನಿ ಮೇಲೆಯೇ ಶಿಕ್ಷನ ಲೈಂಗಿಕ ದೌರ್ಜನ್ಯ ಆರೋಪ; ನ್ಯಾಯಕ್ಕಾಗಿ ಪ್ರತಿಭಟನೆ

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆಯೇ ಶಿಕ್ಷನ ಲೈಂಗಿಕ ದೌರ್ಜನ್ಯ ಆರೋಪ; ನ್ಯಾಯಕ್ಕಾಗಿ ಪ್ರತಿಭಟನೆ

ಮಂಗಳೂರು: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಶಾಲೆಯೊಂದರ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಶಿಕ್ಷಕನ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಬಂಧಿತನಾಗಿರುವ ಶಿಕ್ಷಕ ಗುರುರಾಜ್ ಕುರಿತು ಸಮಗ್ರ ತನಿಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅರೆಸ್ಟ್ ಆಗಿದ್ದ ಶಿಕ್ಷಕ ಜಾಮೀನು ಪಡೆದು ಹೊರ ಬಂದಿದ್ದಾನೆ ಎಂದೂ ಕೂಡ ಹೇಳಲಾಗ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೈಸ್ಕೂಲ್‌ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಗುರುರಾಜ್‌ ಎಂಬಾತನ ವಿರುದ್ಧ ಕಾಲೇಜು ವಠಾರದಲ್ಲಿ ಸಾರ್ವಜನಿಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರ ಆರೋಪ ಹೊತ್ತಿರುವ ಶಿಕ್ಷಕನ ವಜಾ ಮಾಡಬೇಕು ಹಾಗೂ ಆತನ ಮೊದಲನೇ ಮದುವೆಯಾದಲ್ಲಿಂದಲೇ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಶಿಕ್ಷಕ ಗುರುರಾಜ್‌ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಜೆಕ್ಟ್‌ ಕೆಲಸ ಹಾಗೂ ಟ್ಯೂಷನ್‌ ನೆಪದಲ್ಲಿ ಮನೆಗೆ ಕರೆಯಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ವಿದ್ಯಾರ್ಥನಿಯ ತಾಯಿ ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತನಿಖೆನಡೆಸಿದ್ದ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಶಿಕ್ಷಕ ಗುರುರಾಜ್‌ ಫೋಕ್ಸೋ ಕಾಯಿದೆಯನ್ವಯ ಅಪ್ತಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿದ ಬಗ್ಗೆ ಕೇಸು ದಾಖಲಾಗಿತ್ತು. ಆರೋಪಿ ಶಿಕ್ಷಕ ಗುರುರಾಜ್‌ ಮೊದಲ ಪತ್ನಿ ಮೃತಪಟ್ಟಿದ್ದು ಎರಡನೇ ಮದುವೆಯಾಗಿದ್ದಾನೆ. ಹೀಗಾಗಿ ಮೊದಲನೇ ಪತ್ನಿ ಮೃತಪಟ್ಟಲ್ಲಿಂದಲೇ ತನಿಖೆಯಾಗಬೇಕು, ಈ ಶಿಕ್ಷಕ ಇಂತಹದ್ದೇ ಹಲವಾರು ಕೃತ್ಯ ಎಸಗಿರುವ ಬಗ್ಗೆ ಶಂಕೆ ಇದೆ ಎಂದು ಪ್ರತಿಭಟನಾಕಾರರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

 

Source: newsfirstlive.com Source link