ಆರೋಪಿ ಯುವರಾಜ್​ಗೂ ಆಗಿತ್ತು ಪ್ರೀತಿ, ಪ್ರೇಮ; ತನಿಖೆ ವೇಳೆ ಬಾಯ್ಬಿಟ್ಟ ಸ್ಫೋಟಕ ಸತ್ಯ

ಆರೋಪಿ ಯುವರಾಜ್​ಗೂ ಆಗಿತ್ತು ಪ್ರೀತಿ, ಪ್ರೇಮ; ತನಿಖೆ ವೇಳೆ ಬಾಯ್ಬಿಟ್ಟ ಸ್ಫೋಟಕ ಸತ್ಯ

ಬೆಂಗಳೂರು: ಆರ್​​ಎಸ್​ಎಸ್​ ಹಾಗೂ ರಾಜಕೀಯ ನಾಯಕರ ಹೆಸರನ್ನ ಹೇಳಿಕೊಂಡು ವಂಚಿಸಿದ ಆರೋಪದ ಮೇಲೆ ಯುವರಾಜ್ ಅಲಿಯಾಸ್​ ಸ್ವಾಮಿಯನ್ನ ಸಿಸಿಬಿ ಅಧಿಕಾರಿಗಳು ಬಂಧಿಸಿ ತನಿಖೆಯನ್ನ ನಡೆಸಿದ್ದಾರೆ. ಸುದೀರ್ಘವಾದ ತನಿಖೆಯನ್ನ ನಡೆಸಿರುವ ಪೊಲೀಸರು ನಿನ್ನೆ ಯುವರಾಜ್ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್​​ಶೀಟ್​​ನಲ್ಲಿ ಪೊಲೀಸರ ಮುಂದೆ ಯುವರಾಜ್ ತನ್ನ ಬದುಕಿನ ಕಥೆಯನ್ನ ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ. ಅದರ ಕಂಪ್ಲೀಟ್ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಅದರ ವಿವರ ಹೀಗಿದೆ..

ಸಿಸಿಬಿ ಮುಂದೆ ಸತ್ಯ ಯುವರಾಜ್ ಹೇಳಿದ್ದಾರೆ ಎನ್ನಲಾದ ಮಾಹಿತಿ: 

ನಾನು ಯುವರಾಜ್ @ ಯುವರಾಜ್ ಸ್ವಾಮಿ @ ರಮೇಶ್ ನಾಯ್ಕ್ ಬಿನ್ ರಾಮದಾಸ್. ನನಗೆ 48 ವರ್ಷ. ಬೆಂಗಳೂರಲ್ಲಿ  ವಾಸವಿದ್ದೇನೆ. ಸದ್ಯ ನಾನು ಎರಡು ಮೊಬೈಲ್ ನಂಬರ್​ಗಳನ್ನ ಬಳಕೆಗೆ ಇಟ್ಟುಕೊಂಡಿದ್ದೇನೆ.

blank

ಕಳೆದ ಮೂರು ವರ್ಷಗಳಿಂದ ಈ ವಿಳಾಸದ ಮನೆಯಲ್ಲಿ ವಾಸವಿದ್ದು, ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಅಂಚೆ ದೇವಪುರಹಟ್ಟಿ ಗ್ರಾಮದ ರಾಮದಾಸ್ & ಸೀತಮ್ಮ ದಂಪತಿಯ 3 ಮಕ್ಕಳಲ್ಲಿ ಮೊದಲನೆಯವನು.

‘ಪ್ರೀತಿಸಿ ಮದ್ವೆಯಾಗಿದ್ದೀನಿ ಸ್ವಾಮಿ..’
ನನ್ನ ಅಜ್ಜ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮದುವೆಯಾಗಿದ್ದರು. ಅದೇ ರೀತಿ ತನ್ನ ತಂದೆಯೂ ಸಹ ಬಂಜಾರ ಸಮುದಾಯಕ್ಕೆ ಸೇರಿದ ತನ್ನ ತಾಯಿ ಸೀತಮ್ಮರನ್ನು ಮದುವೆಯಾಗಿದ್ದರು. ಅದೇ ರೀತಿ ನಾನು 1995 ರಲ್ಲಿ ಪ್ರೀತಿ ಮಾಡಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಪ್ರೇಮಾಳನ್ನು ಮದುವೆಯಾಗಿದ್ದೇನೆ.

ನಾನು ಪಿಯುಸಿ ಫೇಲ್ ಆಗಿದ್ದೇನೆ. 1 & 2 ನೇ ಕ್ಲಾಸ್ ತನಕ ದೇವಪುರಹಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದೆ. ಆಮೇಲೆ 3 & 4 ನೇ ಕ್ಲಾಸ್ ಅನ್ನ ರಾಜಾಜಿನಗರದ ಸರ್ಕಾರಿ ಶಾಲೆಯಲ್ಲಿ ಓದಿದೆ. ಆಮೇಲೆ 5 ರಿಂದ 7 ನೇ ತರಗತಿಯನ್ನು ಚಿತ್ರದುರ್ಗ ತಾಲೂಕಿನ ಪಂಡರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಆನಂತರ 8 ರಿಂದ 10ನೇ ಕ್ಲಾಸ್ ಚಿತ್ರದುರ್ಗ ಟೌನ್ ಸಂಪಿಗೆ ಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಓದಿದ್ದೇನೆ. ಬಳಿಕ ಪಿಯುಸಿ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜ್​​ನಲ್ಲಿ ಓದಿರುತ್ತೇನೆ.

PUC ಫೇಲ್​, ಆಮೇಲೆ..?
ಫೇಲ್ ಆದ ಮೇಲೆ ತಿರುಪತಿ ಹಾತಿರಾಂಭವಾಜಿ ಮಠದ ದೇವಸ್ಥಾನದಲ್ಲಿ ಪೂಜಾರಿ ಹಾಗೂ ಜ್ಯೋತಿಷ್ಯ ಹೇಳಿಕೊಂಡು ಕೆಲಸ ಮಾಡಿಕೊಂಡಿದ್ದೇನು. ಆನಂತರ ಚಿತ್ರದುರ್ಗದ ಮುರುಘ ರಾಜೇಂದ್ರ ಮಠದ ಸ್ವಾಮಿಜಿಗಳು ನನ್ನನ್ನು ಬಸವ ತತ್ವ ಹಾಗೂ ಶ್ರೀ ಮಠದಲ್ಲಿ ಸ್ವಾಮಿಜೀಯಾಗಲು ಆಹ್ವಾನಿಸಿದ್ದರು. ನನಗೆ ಸನ್ಯಾಸಿ ಜೀವನ ಇಷ್ಟವಿಲ್ಲದ ಕಾರಣ ನಾನು ಅಲ್ಲಿಂದ ಬಿಟ್ಟು ಬಂದೆ. ಆಮೇಲೆ ಜ್ಯೋತಿಷ್ಯ ಹೇಳೋಕೆ ಶುರುಮಾಡಿದೆ. ಆಮೇಲೆ ಬಂಜಾರ ಸಮುದಾಯದವರು ನನಗೆ ಬೆಂಗಳೂರಲ್ಲಿ ಒಂದು ಕಾಲೇಜ್ ಶುರುಮಾಡೋಣ ಅಂತಾ ಬಂದರು. ಅದಕ್ಕೆ ನನ್ನನ್ನ ಗೌರ್ನಿಂಗ್ ಕೌನ್ಸಿಲ್ ಛೇರ್ಮನ್ ಆಗುವಂತೆ ಕೇಳಿದ್ರು. ನಾನು ಒಪ್ಪಿಕೊಳ್ಳಲಿಲ್ಲ. ಆಮೇಲೆ ಸಾಮಾಜಿಕ ಜೀವನ ಶುರುಮಾಡಿದೆ. ಧಾರ್ಮಿಕ, ಸಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದೇನೆ. ತನ್ನ ತಂದೆ ತಾಯಿ ಈಗ ಚಿತ್ರದುರ್ಗದ ದೇವಪುರಹಟ್ಟಿಯಲ್ಲಿದ್ದಾರೆ. ಅಮ್ಮ ಗೃಹಿಣಿ, ಅಪ್ಪ ಆ ಊರಲ್ಲಿ ವೆಂಕಟರಮಣ ದೇವಾಲಯದ ಆರ್ಚಕ & ಜ್ಯೋತಿಷ್ಯ ಹೇಳಿಕೊಂಡು ಇದ್ದಾರೆ.

ನಾನು ಹುಟ್ಟಿದ್ದು ‘ಮೂಲಾ ನಕ್ಷತ್ರ’
ನನ್ನ ತಮ್ಮ ಶಿವಕುಮಾರ್, ತಂದೆ ತಾಯಿ ಜೊತೆ ವ್ಯವಸಾಯ ಮಾಡಿಕೊಂಡಿದ್ದಾನೆ. ತಂಗಿ ನೇತ್ರಾವತಿ ದಾವಣೆಗೆ ಧೀರೇಶ್​ನ ಮದುವೆಯಾಗಿದ್ದಾಳೆ. ನಾನು ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ರಿಂದ ತಂದೆಗೆ ಸಾವು ಬರುತ್ತೆ ಅಂತಾ ನನ್ನನ್ನು ಶಿವಮೊಗ್ಗದ ಬ್ರಾಹ್ಮಣ ಸಮುದಾಯದ ಶ್ರೀನಿವಾಸ್ ಜೋಷಿಗೆ ದತ್ತು ಕೊಟ್ಟಿದ್ರು. ಆಮೇಲೆ ದತ್ತು ಪಡೆದ ಶ್ರೀನಿವಾಸ್ ಸತ್ತುಹೋದ್ರು.

ಇದನ್ನೂ ಓದಿ: RSS, BJP ನಾಯಕರ ಹೆಸರಲ್ಲಿ ವಂಚನೆ ಆರೋಪ: ಯುವರಾಜ್ ವಿರುದ್ಧ ಚಾರ್ಜ್​ಶೀಟ್

blank

ಆಮೇಲೆ ಪಿಯುಸಿ ಫೇಲ್ ಆದ ಮೇಲೆ ಚಿತ್ರದುರ್ಗದ ದೇವಸ್ಥಾನದಲ್ಲಿದ್ದೆ. ಅಲ್ಲಿ ಪೌರೋಹಿತ್ಯ & ಜ್ಯೋತೀಷ್ಯ ಹೇಳಲು ಮನೆ ಮನೆಗೆ ಹೋಗ್ತಿದ್ದೆ. ಈ ವೇಳೆ ಸರ್ಕಾರದ ಅಧಿಕಾರಿಗಳು, ದೊಡ್ಡ ದೊಡ್ಡ ರಾಜಕೀಯ ವ್ಯಕ್ರಿಗಳು ಪರಿಚಯವಾದರು. ಈ ವೇಳೆ ನನ್ನ ಲಿಂಕ್ ಹೊರ ರಾಜ್ಯಗಳಿಗೂ ವಿಸ್ತರಣೆ ಆಯ್ತು. ಮೊದಲು ಬೆಂಗಳೂರು, ಆಮೇಲೆ ದೆಹಲಿ, ಮುಂಬೈ, ಹೈದ್ರಾಬಾದ್​ನಲ್ಲಿ ನನ್ನ ಜ್ಯೋತಿಷ್ಯ ಕೇಳಲು ಕರೆಸುತ್ತಿದ್ದರು.

ಪ್ರೀತಿ, ‘ಪ್ರೇಮ’ ಆಗಿದ್ದು ಹೇಗೆ..?
1994 -95 ರಲ್ಲಿ ಬೆಂಗಳೂರಿಗೆ ಬಂದಿದ್ದು, ಮೊದಲು ಮೆಜೆಸ್ಟಿಕ್, ರಾಜಾಜಿನಗರ, ವಿಜಯನಗರ, ನಾಗರಬಾವಿ ಅಲ್ಲಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದೆ. ನಗರದ ಬೇರೆ ಬೇರೆ ಏರಿಯಾದ ಮನೆಗಳಿಗೆ ಜ್ಯೋತೀಷ್ಯ ಹೇಳಲು ಹೋಗುತ್ತಿದ್ದೆ. ಹೀಗೆ 1995 ರಲ್ಲಿ ಒಂದು ದಿನ ನಾನು ರಾಜಾಜಿನಗರದ ಮಿಲ್ಕ್ ಕಾಲೋನಿಯಲ್ಲಿ ಒಂದು ಮನೆಗೆ ಜ್ಯೋತಿಷ್ಯ ಹೇಳಲು ಹೋದಾಗ ಅಲ್ಲಿ ಮಂಡ್ಯ ಮೂಲದ ಪ್ರೇಮಾಳನ್ನು ನೋಡಿದೆ. ಮೊದಲು ಮಾತು ಆನಂತರ ಅನೇಕ ವರ್ಷ ಲವ್​ ಮಾಡಿದೆ. ಬಳಿಕ 2003ರಲ್ಲಿ ಒಕ್ಕಲಿಗ ಸಮುದಾಯದ ಪ್ರೇಮಾಳನ್ನು ಕಟ್ಟಿಕೊಂಡೆ. ಆಮೇಲೆ ಮೂರು ಜನ ಮಕ್ಕಳಾದ್ರು. ದೇವಿಕಾರಾಣಿ, ವೈಷ್ಣವಿ, ಭಾರ್ಗವ್ ಮೂರು ಮಕ್ಕಳಿದ್ದಾರೆ.

ಬೆಲೆ ಬಾಳುವ ಮನೆ ಕಟ್ಟಿಸಿದ್ದು ಹೇಗೆ
ಆಮೇಲೆ ಜ್ಯೋತಿಷ್ಯದಿಂದ ಬಂದ ಹಣದಿಂದ ಮೊದಲು 1997-98ರ ಸಾಲಿನಲ್ಲಿ ವಿಜಯನಗರದ ಆರ್ ಪಿಸಿ ಲೇಔಟ್​ನ 7ನೇ ಮುಖ್ಯರಸ್ತೆಯಲ್ಲಿ ಒಂದು ಹಳೆಯ ಮನೆಯನ್ನು ತನ್ನ ಪತ್ನಿ ಪ್ರೇಮ ಹೆಸರಲ್ಲಿ ತಗೊಂಡೆ. ಅಲ್ಲೇ ನಾವು ವಾಸ ಇದ್ವಿ. ಅದಾದ ನಂತರ ಆ ಮನೆಯನ್ನು ಬಾಡಿಗೆಗೆ ಕೊಟ್ಟು ಚಂದ್ರಲೇಔಟ್​ನಲ್ಲಿ ಒಂದು ಬಾಡಿಗೆ ಮನೆಗೆ ಶೀಫ್ಟ್ ಆದ್ವಿ. ಅಲ್ಲಿ 2005 ರಿಂದ 2012ರ ತನಕ ವಾಸವಿದ್ವಿ. ಈ ವೇಳೆ ನನಗೆ ಅನೇಕ ಮಂದಿಯಿಂದ ಹಣ ಬಂದು ಆಗ ನಾವು ನಾಗರಬಾವಿಯಲ್ಲಿ ಮನೆ ಕಟ್ಟಿಸಿದ್ವಿ. ಆದಾದ ನಂತರ ನಾಗರಬಾವಿಯಲ್ಲಿರುವ ಈ ಮನೆಗೆ 2016ರಲ್ಲಿ ಶಿಫ್ಟ್​ ಆಗಿ ಅಲ್ಲಿಯೇ ಇದ್ದೇವೆ.

ರಾಜಕಾರಣಿಗಳ ನಂಟು ಹೀಗೆ..
ನಾನು 1989 ರಿಂದ ಆರ್​​ಎಸ್​ಎಸ್​ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾ ಬಂದಿದ್ದೇನೆ. ಆರ್​ಪಿಸಿ ಲೇಔಟ್​್ಗೆ ಶಿಫ್ಟ್​ ಆದ ಬಳಿಕ ಅಲ್ಲೇ ಪಕ್ಕದಲ್ಲಿ ನಡೆಯತ್ತಿದ್ದ ಆರ್​ಎಸ್ಎಸ್​ ಕಾರ್ಯಕ್ರಮಗಳಲ್ಲಿ ಸೇರಿಕೊಂಡು ಸಕ್ರಿಯನಾದೆ. ಅಲ್ಲದೇ ಚಿತ್ರದುರ್ಗದ ಆರ್​ಎಸ್​ಎಸ್​ ಶಾಖೆಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಬಾಗಿಯಾಗುತ್ತಿದ್ದೆ. ಈ ವೇಳೆ ಜ್ಯೋತಿಷ್ಯ ಹಾಗೂ ಪೌರೋಹಿತ್ಯ ಗೊತ್ತಿದ್ದ ಕಾರಣ ನನಗೆ ಅನೇಕ ಬಿಜೆಪಿ ನಾಯಕರ ಪರಿಚಯ ಆಯಿತು. ಅದು ಬಿಜೆಪಿ ಪಕ್ಷದ ಜೊತೆ ಒಡನಾಟ ಹೆಚ್ಚಿಸಲು ಸಹಕಾರವಾಯಿತು.

ದಿ. ಅನಂತ್ ಕುಮಾರ್ ಪರಿಚಯ ಆಗಿದ್ದು ಹೀಗೆ..
ಚಿತ್ರದುರ್ಗದ ಆರ್​ಎಸ್​ಎಸ್ ಶಾಖೆಯ ಮುಖ್ಯಸ್ಥರಾದ ಚಂದ್ರಪ್ಪ & ವೀರಪ್ಪ ಗೌಡ ನನ್ನ ಮೇಲೆ ಗೌರವ ಇಟ್ಟಿದ್ದರು. ನಾನು ಹೇಳುತ್ತಿದ್ದ ಜ್ಯೋತೀಷ್ಯವನ್ನು ನಂಬಿ, ಆಗಾಗ ಕೇಳುತ್ತಿದ್ದರು. ಈ ವೇಳೆ ಒಂದು ದಿನ ಬೆಂಗಳೂರಿನಿಂದ ಬಂದಿದ್ದ ಬಿಜೆಪಿ ಹಿರಿಯ ಮುಖಂಡ ಅನಂತ್ ಕುಮಾರ್ ಅವರನ್ನ ನನಗೆ ಭೇಟಿ ಮಾಡಿಸಿದ್ರು. ಇವರು ಜ್ಯೋತಿಷಿ ಅಂತಾ ಅವರಿಗೆ ಪರಿಚಯ ಮಾಡಿಕೊಟ್ಟರು. ಆಗಿನಿಂದ ಅನಂತಕುಮಾರ್ ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೆ. ಈ ವೇಳೆ 1996 ರಲ್ಲಿ ಚಿತ್ರದುರ್ಗದಲ್ಲಿ ನಡೆದ ಱಲಿಗೆ ಬಿಜೆಪಿ ಮುಖಂಡ ಎಲ್​ಕೆ ಅಡ್ವಾಣಿ ಬಂದಿದ್ದರು. ಅವರ ಜೊತೆ ಪ್ರಮೋದ್ ಮಹಾಜನ್, ಬಂಗಾರು ಲಕ್ಷ್ಮಣ್ ಇನ್ನೂ ಸುಮಾರು ಜನ ಬಂದಿದ್ರು.

ಕಾಂಗ್ರೆಸ್​ ನಾಯಕರು ಸಂಪರ್ಕಕ್ಕೆ ಬಂದಿದ್ದು ಇಲ್ಲಿಂದ..
ಆ ವೇಳೆಯಲ್ಲಿ ಅನಂತ್ ಕುಮಾರ್ ನನ್ನನ್ನು ಜ್ಯೋತಿಷಿ ಅಂತಾ ಪರಿಚಯ ಮಾಡಿಕೊಟ್ಟರು. ಆಗ ನನಗೆ ಪ್ರಮೋದ್ ಮಹಾಜನ್ ಪರಿಚಯವಾದರು. ಅಲ್ಲಿಂದ ಅವರಿಗೆ ಜ್ಯೋತಿಷ್ಯ ಹೇಳಿ, ಹೇಳಿ ಅನೇಕ ಬಿಜೆಪಿ ನಾಯಕರು ನನಗೆ ಕ್ಲೋಸ್ ಆಗುತ್ತಾ ಹೋದರು. ಅದರಲ್ಲೂ ಪ್ರಮೋದ್ ಮಹಾಜನ್ ನನಗೆ ಆಗಾಗ ತಮ್ಮ ಮುಂಬೈನ ಮನೆಗೆ ಬನ್ನಿ ಎಂದು ಕರೆಸುತ್ತಿದ್ದರು. ಅಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು & ಅನೇಕ ಬಿಜೆಪಿ ಮುಖಂಡರಿಗೆ ನಾನು ಜ್ಯೋತೀಷ್ಯವನ್ನು ಹೇಳುತ್ತಿದ್ದೆ. ಇದೇ ವೇಳೆ ಅನೇಕ ಕಾಂಗ್ರೆಸ್ ಮುಖಂಡರು ಸಹ ನನಗೆ ಪರಿಚಯವಾಗಿ ಜ್ಯೋತಿಷ್ಯ ಕೇಳುತ್ತಿದ್ದರು. ಪ್ರಮುಖವಾಗಿ ಧರಂಸಿಂಗ್, ಬಂಗಾರಪ್ಪ, ವೀರಭದ್ರಪ್ಪ ಅವರು ಖುದ್ದು ಕರೆ ಮಾಡಿ ನನ್ನ ಕರೆಯಿಸಿ ಜ್ಯೋತಿಷ್ಯವನ್ನ ಕೇಳ್ತಿದ್ರು.

ಡೆಲ್ಲಿ, ಬಾಂಬೆಯಲ್ಲೂ ರಿಯಲ್ ಎಸ್ಟೇಟ್​​
ಹೀಗೆ ಬಂದ ಹಣವನ್ನು ತನ್ನ ಪತ್ನಿಯ ಮೂಲಕ ರಿಯಲ್ ಎಸ್ಟೇಟ್, ಪರಿಚಯದ ವ್ಯಕ್ತಿಗಳಿಗೆ ಸಾಲ ಕೊಡುವುದನ್ನ ಮಾಡುತ್ತಿದ್ದೆ. ಬೆಂಗಳೂರು ಮಾತ್ರವಲ್ಲದೇ ಬಾಂಬೆ, ಡೆಲ್ಲಿಯಲ್ಲೂ ಸಹ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ್ದೇನೆ. ಆದರೆ ಬಾಂಬೆ ಡೆಲ್ಲಿಯಲ್ಲಿ ಯಾವುದೇ ಆಸ್ತಿ ಖರೀದಿ ಮಾಡಿಲ್ಲ. ಬದಲಾಗಿ ಅವರಿಗೆ, ಇವರಿಗೆ ಕೊಡಿಸಿ ಕಮಿಷನ್ ವ್ಯವಹಾರ ಮಾಡಿದ್ದೇನೆ ಅಷ್ಟೇ.

blank

‘ಗೋಪಿನಾಥ್ ಮುಂಡೆ ಸಹಾಯ ಮಾಡುತ್ತಿದ್ದರು..’
ಮುಂಬೈಗೆ ಹೋಗುವಾಗ ಅಲ್ಲಿ ಗೋಪಿನಾಥ್ ಮುಂಡೆಯವರು ನನಗೆ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಅವರು ವ್ಯವಸ್ಥೆ ಮಾಡಿದ ಮನೆಯಲ್ಲಿ ಉಳಿದು ಹಣದ ವ್ಯವಹಾರ ಮಾಡಿಕೊಂಡು ಬರುತ್ತಿದ್ದೆ. ಕೆಲವೊಮ್ಮೆ ಗೋಪಿನಾಥ್ ಮುಂಡೆಯವರ ಮನೆಯಲ್ಲಿಯೇ ಉಳಿದುಕೊಂಡು ಬರುತ್ತಿದ್ದೆ. ಹೀಗೆ ಬಂದ ಹಣವನ್ನು ಇಷ್ಟು ಮಾತ್ರವಲ್ಲದೆ ಒಂದು ಸಿನಿಮಾ ಸಹ ನಿರ್ಮಾಣ ಮಾಡಿದ್ದೇನೆ. ಆ ಚಿತ್ರದ ಹೆಸರು ಹಳ್ಳಿ ಪಂಚಾಯ್ತಿ.

‘30ಕ್ಕೂ ಹೆಚ್ಚು ಬ್ಯಾಂಕ್​ ಅಕೌಂಟ್​ಗಳು ಇವೆ’
ಈಗ ನನ್ನ ಮೇಲೆ ಅನೇಕ ಕೇಸ್​ಗಳು ದಾಖಲಾಗಿವೆ. ನಾನು ಅವರಿಂದ ಮೆಡಿಕಲ್ ಸೀಟ್ ಕೊಡಿಸ್ತೀನಿ, ಉನ್ನತ ಹುದ್ದೆ ಕೊಡಿಸ್ತೀನಿ, ರಾಜಕೀಯ ಹುದ್ದೆ ಕೊಡಿಸ್ತೀನಿ, ಜಮೀನು ಕೊಡಿಸ್ತೀನಿ, ಸೈಟ್ ಕೊಡಿಸ್ತೀನಿ ಅಂತಾ ಹೇಳಿ ಹಣ ಸಂಪಾದನೆ ಮಾಡಿದ್ದೇನೆ. ಅದರಲ್ಲಿ ತನ್ನ ಪತ್ನಿ & ಮಕ್ಕಳ ಹೆಸರಲ್ಲಿ ಆಸ್ತಿ ಮಾಡಿದ್ದೇನೆ. ಹಾಸನದ ಅಗನಿ, ಮಂಡ್ಯದ ಕಾಡುಕೊತ್ತನಹಳ್ಳಿ ಹಾಗೂ ಬೆಂಗಳೂರಿನಲ್ಲಿ ಆಸ್ತಿ ಮಾಡಿದ್ದೇನೆ. ಕೆಲವಷ್ಟು ಹಣವನ್ನ ಮನೆ ಮಾಡಲು, ಜೊತೆಗೆ ಐಷಾರಾಮಿ ಕಾರುಗಳನ್ನು ಕೊಳ್ಳಲು ಬಳಕೆ ಮಾಡಿಕೊಂಡಿದ್ದೇನೆ. ನನಗೆ 30ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಇದೆ.

ವಿಶೇಷ ವರದಿ: ವಿಷ್ಣು ಪ್ರಸಾದ್, ಕ್ರೈಂ ಬ್ಯೂರೋ

Source: newsfirstlive.com Source link