ಅಶೋಕ್​​ PA ವಿರುದ್ಧ ಲಂಚ ಆರೋಪ ಕೇಸ್; ತನಿಖೆಯನ್ನೇ ಮಾಡದೇ ಪೊಲೀಸರಿಂದ ಕ್ಲೀನ್​ಚಿಟ್?

ಅಶೋಕ್​​ PA ವಿರುದ್ಧ ಲಂಚ ಆರೋಪ ಕೇಸ್; ತನಿಖೆಯನ್ನೇ ಮಾಡದೇ ಪೊಲೀಸರಿಂದ ಕ್ಲೀನ್​ಚಿಟ್?

ಬೆಂಗಳೂರು: ಕಳೆದ ಜನವರಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ಈ ಹಿಂದಿನ ಸಹಾಯಕರಾಗಿದ್ದ ಗಂಗಾಧರ್ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿತ್ತು. ಇದೇ ವಿಚಾರಕ್ಕೆ ಶ್ರಂಗೇರಿಯ ಸಬ್ ರಿಜಿಸ್ಟ್ರಾರ್ ಚೆಲುವರಾಜ್​ರಿಂದ ಬುದ್ಧಿವಾದ ಹೇಳಿಸಿಕೊಂಡಿದ್ದೂ ಅಲ್ಲದೇ, ಅದೇ ಅಧಿಕಾರಿಯ ಪ್ರಶ್ನೆಗೆ ಉತ್ತರಿಸಲಾಗದೇ ಫೋನ್ ಕಟ್ ಮಾಡಿದ್ದಾರೆ ಎನ್ನಲಾಗಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್​ ಆಗಿತ್ತು.

ಗಂಗಾಧರ್​​ಗೆ ಕ್ಲಾಸ್​ ತೆಗೆದುಕೊಂಡಿದ್ದು ಹೇಗೆ..?
ವೈರಲ್​ ಆಗಿರುವ ಆಡಿಯೋದಲ್ಲಿ ಇರುವ ಪ್ರಕಾರ.. ‘ಓರ್ವ ಮಿನಿಸ್ಟರ್ ಪಿಎ ಆಗಿ ಲಂಚ ಕೇಳ್ತಿರಲ್ಲ ನಾಚಿಕೆ ಆಗಲ್ವಾ ನಿಮಗೆ?’ ಅಂತಾ ಏರುಧ್ವನಿಯಲ್ಲಿ ಸಬ್ ರಿಜಿಸ್ಟ್ರಾರ್ ಪ್ರಶ್ನೆ ಮಾದ್ದರು. ಅದಕ್ಕೆ ಗಂಗಾಧರ್ ಕಕ್ಕಾಬಿಕ್ಕಿಯಾಗಿದ್ದರು. ಅಲ್ಲದೇ ಉತ್ತರ ನೀಡಲಾಗದೇ ಕಾಲ್ ಕಟ್ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಂಗಾಧರ್ ಅವರಿಗೆ ಕ್ಲೀನ್​ಚಿಟ್ ಕೊಡಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಕರಣದ ತನಿಖೆಯನ್ನ ಸಂಪೂರ್ಣವಾಗಿ ಮಾಡದೇ, ಸಾಕ್ಷ್ಯಾಧಾರಗಳ ಕೊರತೆ ಎಂದು ಪರಿಗಣಿಸಲು ಶೃಂಗೇರಿ ಠಾಣೆ ಇನ್ಸ್​ಪೆಕ್ಟರ್ ಎಸ್.ರವಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ನೀವು ಕೊಟ್ಟ ದೂರನ್ನು ಕ್ಲೋಸ್ ಮಾಡಿ ನಾವು ಕೋರ್ಟ್​​ಗೆ ಸಲ್ಲಿಸುತ್ತೇವೆ. ಸಾಕ್ಷ್ಯಾಧಾರಗಳ ಕೊರತೆ ಇರುವ ಪ್ರಕರಣವೆಂದು ಪರಿಗಣಿಸಿರುತ್ತವೆ ಎಂದು ದೂರುದಾರ ಹಾಗೂ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜುಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದ ಬಗ್ಗೆ ಅನುಮಾನಗಳು ಶುರುವಾಗಿವೆ..

blank

ಯಾಕೆ ಈ ಸಂದೇಶ..?
ಪ್ರಕರಣದಲ್ಲಿ ಚೆಲುವರಾಜು ಬಳಿ ಹಣ ಕೇಳಿದ್ದಕ್ಕೆ ಆಡಿಯೋ ಸಾಕ್ಷಿ ಇದೆ. ಆದರೆ ಪೊಲೀಸರು ಡಿಜಿಟಲ್ ಎವಿಡೆನ್ಸ್​ಗಳನ್ನ ಪರಿಗಣಿಸಿಲ್ಲ. ಚಲುವರಾಜು ಕೊಟ್ಟ ಆಡಿಯೋವನ್ನ ಎಫ್ಎಸ್ಎಲ್​​ ವರದಿಗೂ ಕಳಿಸಿಲ್ಲ. ಕರೆ ಮಾಡಿದ್ದಾರೆ ಎನ್ನಲಾಗಿರುವ ಸಾಕ್ಷಿಗೆ ಸಂಬಂಧಿಸಿದಂತೆ ಮೊಬೈಲ್​ ಫೋನ್​ಗಳ ಸಿಡಿಆರ್​ ಪಡೆದು ಟೆಕ್ನಿಕಲ್​​ ಸಾಕ್ಷಿಯಾಗಿ ಪರಿಗಣಿಸಿಲ್ಲ. ಅಲ್ಲದೇ ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿರುವ ಬಗ್ಗೆ ವಿಡಿಯೋ ಕೂಡ ಇದೆ. ದೂರುದಾರರನ್ನ ಆರೋಪಿಯ ಭೇಟಿ ಮಾಡಿದ್ದಕ್ಕೆ ಸಾಕ್ಷಿಗಳಿವೆ. ಇದನ್ನು ಸಾಂದರ್ಭಿಕ ಸಾಕ್ಷಿಯಾಗಿ ಪರಿಗಣಿಸಬಹುದು, ಆದರೆ ಬಳಸಿಲ್ಲ ಅಂತಾ ಹೇಳಲಾಗಿದೆ. ಹೀಗಾಗಿ ಇನ್ಸ್​​ಪೆಕ್ಟರ್​ ಎಸ್​ ರವಿ ಅವರು ಏನು ತನಿಖೆಯನ್ನ ಮಾಡುತ್ತಿದ್ದಾರೆ? ಅನ್ನೋ ಪ್ರಶ್ನೆ ಶುರುವಾಗಿದೆ.

ಇದನ್ನೂ ಓದಿ:ಲಂಚ ಕೇಳಿದ ಆರೋಪ- ಕೊನೆಗೂ ಆರ್​.ಅಶೋಕ್​​​ ಪಿಎ ವಿರುದ್ಧ ದಾಖಲಾಯ್ತು FIR

ಹಿಂದೆ ಸರಿಯಾದ ದಾರಿಯಲ್ಲೇ ಇತ್ತು ತನಿಖೆ
ಇನ್ನು ಈ ಹಿಂದೆ ಇದ್ದ ಇನ್ಸ್​ಪೆಕ್ಟರ್​ ಸಿದ್ದರಾಮಯ್ಯ ಪ್ರಕರಣವನ್ನ ಸರಿಯಾಗಿ ತನಿಖೆ ಮಾಡ್ತಿದ್ದರು. ದೂರು ಕೊಟ್ಟ ದಿನದಿಂದ 2 ಬಾರಿ ದೂರುದಾರರನ್ನ ಠಾಣೆಗೆ ಕರೆದಿದ್ದರು. ಘಟನೆ ನಡೆದ ಬಗ್ಗೆ ಸ್ಥಳ ಮಹಜರು ಮಾಡಿದ್ದರು. ಆದಾದ ನಂತರ ಹೇಳಿಕೆ ಪಡೆಯಲು ಕರೆಯುವುದಾಗಿಯೂ ಹೇಳಿದ್ದರು. ಆದರೆ ಈಗ ಬಂದಿರುವ ಇನ್ಸ್​ಪೆಕ್ಟರ್​ ನೇರವಾಗಿ ಕೇಸ್ ಕ್ಲೋಸ್​ ಮಾಡಲು ಪ್ಲಾನ್ ಮಾಡಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿವೆ. ಈ ಆರೋಪಗಳು ಯಾಕೆ ಅಂದರೆ, ದೂರುದಾರ ಚಲುವರಾಜ್ ಅವರಿಂದ ಇಲ್ಲಿಯತನಕ ಯಾವುದೇ ಹೇಳಿಕೆಯನ್ನ ಪಡೆದಿಲ್ಲ. ಆದರೂ ಸಾಕ್ಷಿಯಿಲ್ಲವೆಂದು ಹೇಳಿ ಕೇಸ್ ಕ್ಲೋಸ್ ಮಾಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ಇನ್ಸ್​ಪೆಕ್ಟರ್ ಎಸ್ ರವಿ ಮೇಲೆ ರಾಜಕೀಯ ಒತ್ತಡ ಹೇರಲಾಗಿದೆಯಾ? ದೊಡ್ಡವರ ಕೇಸ್ ತನಿಖೆ ಮಾಡಲು ಪೊಲೀಸರಿಗೆ ಬರೋದಿಲ್ವವಾ? ಇಲ್ಲಿ ನೇರವಾಗಿ ಅಶೋಕ್ ಪಿಎ ಗಂಗಾಧರ್ ರಕ್ಷಣೆ ಆಗ್ತಿದೆಯಾ? ಅನ್ನೋ ಪ್ರಶ್ನೆಗಳು ಸಹ ಹುಟ್ಟುಕೊಂಡಿವೆ.

ಪ್ರಕರಣದ ಹಿನ್ನೆಲೆ ಏನು..?
ಸಚಿವ ಆರ್.ಅಶೋಕ್ 24/1/2020 ರಂದು ಅಕ್ಷರ ಜಾತ್ರೆ ಕಾರ್ಯಕ್ರಮ ಸಲುವಾಗಿ ಶೃಂಗೇರಿಗೆ ಭೇಟಿ ಮಾಡಿದ್ದರು. ಆರ್​ ಅಶೋಕ್​ ಬರುವ ಮುಂಚೆ ಅಂದರೆ ಜನವರಿ 20ರಂದು ರಿಜಿಸ್ಟ್ರಾರ್​​ ವಾಟ್ಸ್ ಆ್ಯಪ್​ಗೆ ಮೇಸೆಜ್ ಮಾಡಿದ್ದರು ಎನ್ನಲಾಗಿದೆ. ಅದಾದ ನಂತರ ಜನವರಿ 24 ರಂದು ಅನ್ ಆಫೀಷಿಯಲ್ ಆಗಿ ಪಿ.ಎ ಗಂಗಾಧರ್ ಕರೆ ಮಾಡಿದ್ದಾರೆ. ಈ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಅಂತಾ ಹೇಳಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದ ಆಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ:ಸಚಿವ ಆರ್​​.ಅಶೋಕ್ ಪಿಎ ವಿರುದ್ಧ ಲಂಚ ಕೇಳಿದ ಆರೋಪ; ಬೆವರಿಳಿಸಿದ ಸಬ್​ ರಿಜಿಸ್ಟ್ರಾರ್

ಫೂನ್​ನಲ್ಲಿ ಕರೆ ಮಾಡಿದ್ದೂ ಅಲ್ಲದೇ, ಕಾರ್ಯಕ್ರಮದ ಸಲುವಾಗಿ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭೇಟಿ ಮಾಡಿದ್ದರು. ಅಲ್ಲಿ ರೂಂಗೆ ಕರೆದುಕೊಂಡು ಹೋಗಿ ಏನ್ ತಂದಿದ್ದಿರಾ ಎಂದು ಸಬ್​ರಿಜಿಸ್ಟ್ರಾರ್ ಬಳಿ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಧಿಕಾರಿ ಚೆಲುವರಾಜ್ ನೇರವಾಗಿ ಉತ್ತರ ನೀಡಿ ಬಂದಿದ್ದಾರೆ. ಅಲ್ಲದೇ ತಾನು ಕೊಡಲು ಬಯಸಿದ್ದ ಲೇಟರ್ ಪಡೆಯದೇ ಉಡಾಫೆ ತೋರಿಸಿರುವ ಆರೋಪವನ್ನ ಪಿಎ ಗಂಗಾಧರ್ ವಿರುದ್ಧ ಸಬ್ ರಿಜಿಸ್ಟ್ರಾರ್ ಚಲುವರಾಜ್ ದೂರು ದಾಖಲಿಸಿದ್ದರು.

ಇನ್ನು ಅಂದು ವೈರಲ್ ಆಗಿರುವ ಆಡಿಯೋದ ವಿವರ ಹೀಗಿದೆ..

ಆಡಿಯೋ 1:
ಗಂಗಾಧರ್ : ಹಲೋ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಹಲೋ
ಗಂಗಾಧರ್ : ರೆವೆನ್ಯೂ ಮಿನಿಸ್ಟರ್ ಪಿಎ ಮಾತಾಡ್ತಿದ್ದೇನೆ ಗಂಗಾಧರ್ ಅಂತಾ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಸರ್ ನಮಸ್ತೆ ಸರ್..
ಗಂಗಾಧರ್ : ನಮಸ್ತೆ ಸಾಹೇಬ್ರು ಇವತ್ತು ಶೃಂಗೇರಿ ಬರ್ತಿದ್ದಾರೆ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಹ್ಹ ಸರಿ ಸರ್..
ಗಂಗಾಧರ್ : ಸಯಂಕಾಲ ಅಲ್ಲಿ ಬಂದು ಭೇಟಿ ಮಾಡಿ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಆಯ್ತು ಸರ್ ಆಯ್ತು ಸರ್
ಗಂಗಾಧರ್ : ಆಯ್ತು ಇರ್ತಿರಾ..?
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಶೃಗೇರಿಲೇ ಇದಿನಿ ಸರ್.. ಇರ್ತಿನಿ..
ಗಂಗಾಧರ್ : ಆ ಆಯ್ತು ಸರಿ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಇದೀನಿ ಸರ್..
ಗಂಗಾಧರ್ : ಹ್ಹಾ ಹೇಳಿ ಏನೇಳಿ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಸಾರ್..
ಗಂಗಾಧರ್ : ಹ್ಹಾ ಆಯ್ತು..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಒಕೆ ಸರ್ ಓಕೆ..

ಆಡಿಯೋ 2:
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ನೀವು ವಾಟ್ಸ್ ಆ್ಯಪ್​ ಕಾಲ್ ಮಾಡಿದಾಗ ನಾನು ಬ್ಯೂಸಿ ಇದ್ದೆ, ಅದಕ್ಕೆ ಕಾಲ್ ಮಾಡಿದೆ., ಏನಾದ್ರೂ ಹೇಳೊದು ಇತ್ತಾ ಸರ್..? ನಾನು ಚೆಲುವರಾಜ್ ಸರ್ ಸಬ್ ರಿಜಿಸ್ಟ್ರಾರ್ ಶೃಂಗೇರಿಯಿಂದ..
ಗಂಗಾಧರ್ : ಹ್ಹಾ ಹೇಳಿ.. ಅವರು ಬರಲ್ಲ. ಆ ನೋಟ್ಸ್ ಕೊಡಲಿಲ್ಲ ಅದು..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ನೀವೇ ಬೇಡ ಅಂದ್ರಲ್ಲ.. ಅವರಿಗೆ ಕೊಡಿ ಅಂದ್ರಲ್ಲ ಮೇಲೆ
ಅಶೋಕ್ ಪಿಎ ಗಂಗಾಧರ್ : ನಾನು ತಗೊಳ್ತೀನಿ ಅಂದ್ರೆ ಬೇಡ ಸಾಹೇಬ್ರಿಗೆ ಕೊಡ್ತೀನಿ ಅಂದ್ರಿ ನೀವು..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ನಾನೆಲ್ಲಿ ಹೇಳಿದೆ..? ನೀವು ಕಾಸ್ ಕೇಳಿದ್ರಿ ನಾನು ಕಾಸ್ ಕೊಡೋ ಆಭ್ಯಾಸ ಇಲ್ಲ ಅಂತಾ ಹೇಳಿದೆ
ಗಂಗಾಧರ್ : ಅಲ್ಲಪ್ಪ ನನ್ನ ಕೈಗೆ ಕೊಡು ನೋಟ್ಸ್ ಅಂದ್ರೆ ಇಲ್ಲ ಸಾಹೇಬ್ರು ಕೈಗೆ ಕೊಡ್ತಿನಿ ಅಂದ್ಯಲ್ಲ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ನಾನೆಲ್ಲಿ ಹೇಳಿದೆ ನೀವೆ ಹೇಳಿದ್ರಿ.. ಅವರ ಕೈಯಲ್ಲೇ ಕೊಡಿ ಅಂತಾ. ನೀವು ಏನು ತಂದಿರಾ ಕೊಡಿ ಅಂತಾ ಅಂದ್ರಿ ಅದಕ್ಕೆ ನಾನು ಆಭ್ಯಾಸ ಇಲ್ಲ ಅಂತಾ ಹೇಳಿದೆ.
ಗಂಗಾಧರ್ : ಆಮೇಲೆ ಇದೆನದು ಲೇಟರ್ ತಂದಿರಲ್ಲ ಅಂದ್ರಿ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಲೇಟರ್ ತಗೊಳಿ ಅಂತಾ ಕೊಟ್ರೆ ನೀವು ಅವರ ಕೈಯಲ್ಲೇ ಕೊಡಿ ಅಂತಾ ಹೇಳಿದ್ರಿ..
ಗಂಗಾಧರ್ : ಅಲ್ಲ ನಾನೊಂದು ಹೇಳಿದ್ರೆ ನೀವೊಂದು ಅರ್ಥ ಮಾಡಿಕೊಳ್ತಿರಲ್ಲಪ್ಪ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಅಲ್ಲಾ ಇವಾಗ ಒಂದು ವಿಷಯ ಕೇಳಿ ನಾನು ಅರ್ಥ ಮಾಡಿಕೊಳ್ಳೊದಿರೋವಷ್ಟು ದಡ್ಡ ಅಲ್ಲ. ನೀವು ಫೋನ್ ಮಾಡಿದ್ರಿ ನಾನು ನಮ್ಮ ಮಿನಿಷ್ಟರ್ ಏನೋ ಇನ್ಟೆನ್ಸಿಟಿ ಇರಬೇಕು ವಿಷಯದ್ದು, ಅದಕ್ಕೆ ಡಿಸ್ಕಸ್ ಮಾಡೋಕೆ ಕರ್ದಿರಬೇಕು ಅಂದುಕೊಂಡು ಬಂದೆ. ನೀವು ಹೇಳಿದ್ರಿ ಏನ್ ತಂದಿರಾ ಕೊಡಿ, ಎಷ್ಟು ತಂದಿರಾ ಕೊಡಿ ಅಂದ್ರೆ ಅದರ ಅರ್ಥ ಏನ್ ಸರ್ ಅದು.
ಗಂಗಾಧರ್ : ಅಲ್ಲಾ ಸಾರ್ ನಾನು ಹೇಳಿದ್ದು, ಇನ್ಫರ್ಮೇಷನ್ ಏನಿದೆ ಕೊಡಪ್ಪ ಅಂತಾ ಹೇಳಿದೆ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಅಲ್ಲಪ್ಪ.. ಇನ್ಫಾರ್ಮೇಷನ್ ಲೇಟರ್ ಕೇಳಿದ್ದು ಆಮೇಲೆ.. ಕೊಡೋಕೆ ಬಂದಾಗ ನೀವು ಅವರತ್ರನೇ ಕೊಟ್ಕೊಳಿ ಅಂದ್ರಿ ನೀವು.. ಈಗ ಉಲ್ಟಾ ಹೊಡೆಯುತ್ತಿದ್ದಿರಾ
ಅಶೋಕ್ ಪಿಎ ಗಂಗಾಧರ್ : ಸಾರ್ ನಾನು ಹೇಳೊದನ್ನ ಫುಲ್ ಕೇಳಿಸಿಕೊಂಡು ಬಿಡಿ ನೀವು..
ಸಬ್ ರಿಜಿಸ್ಟರ್ ಚೆಲುವರಾಜ್: ಹ್ಹಾ.
ಗಂಗಾಧರ್ : ಉಲ್ಟಾನೂ ಇಲ್ಲ, ಸಿದಾನೂ ಇಲ್ಲ, ಏನ್ ತಂದಿರಾ ಕೊಡಿ ಸ್ವಾಮಿ ಅಂದೆ, ನೀವು ಏನು ಅಂದ್ರಿ, ಅದು ತೋರಿಸಿ ನಾನು ಆ ಥರಾ ಈ ಥರಾ ಅಲ್ಲ ಅಂದ್ರಿ, ನಾನು ಯಾವ ಥರಾ ಅಂದೆ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ನೋಡಿ ನೋಡಿ ನೋಡಿ ಸ್ವಾಮಿ, ಕೇಳಿ ಇಲ್ಲಿ, ನೀವು ಆಫೀಷಿಯಲ್ ಪಿಎ ನಾ, ಅವರ ಪರ್ಸನಲ್ ಪಿಎ ನಾ.?
ಗಂಗಾಧರ್ : ನಾನು ಹೇಳೊದನ್ನ ಕೇಳಿಸಿಕೊಳ್ಳಿ ತಾವು
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ನಾನು ಕೇಳೋದು ಅಲ್ಲ, ನಿನ್ನೆ ನಡೆದಿದ್ದು ನಾನು ಹೇಳ್ತಿನಿ ಕೇಳಿ.. ನಾನು ಅಲ್ಲಿ ಬಂದೆ, ಸೌಂಡ್ ವಾಯ್ಸ್ ಇತ್ತು ಆ ರೂಂಗೆ ಕರದ್ರಿ, ಕೊಡಿ ಅಂತೇಳಿದ್ರಿ. ನಾನು ಏನು ಸರ್ ಅಂದೆ, ಏನ್ ತಂದಿರಾ ಕೊಡಿ ಅಂದ್ರಿ, ನನಗೆ ಅರ್ಥ ಆಗಲಿಲ್ಲ ಅಂದೆ, ನೀವು ಹೇಳಿದ್ರಿ ಎಷ್ಟು ತಂದಿದೀರಾ ಕೊಡಿ ಅಂತಾ ಕೇಳ್ತಿರಿ, ನನಗೆ ಅಭ್ಯಾಸ ಇಲ್ಲ ಅಂದೆ ಅಲ್ವಾ ಆಮೇಲೆ ಏನಿದು ಲೇಟರ್ ಅಂತಾ ಕೇಳಿದ್ರಿ, ತಗೊಳಿ ಇದು ಸೆಕ್ರೆಟರಿಗೆ ಕಂಪ್ಲೇಂಟ್ ಮಾಡಿದ್ದೇನೆ ಅದರ ಕಾಪಿ ಒಂದು ಸಾಹೇಬ್ರಿಗೆ ಕೊಡಿ ಅಂತಾ ಹೇಳಿದೆ. ನೀವೇ ಕೊಟ್ಕೊಳಿ ಅವರಿಗೆ ಹಾಗಿದ್ರೆ ಅಂದ್ರಿ. ಇದನ್ನ ಬಿಟ್ಟು ಇನ್ನೇನು ಹೇಳಿದ್ರಿ ನೀವು ನಿನ್ನೆ.
ಅಶೋಕ್ ಪಿಎ ಗಂಗಾಧರ್ : ನಾನು ಹಂಗೇ ಹೇಳಿಯೂ ಇಲ್ಲ.
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಇದನ್ನೇ ಹೇಳೋದು ಮನಸಾಕ್ಷಿ ಇದ್ದೋರು ಯಾರು ಈ ಥರಾ ಮಾತಾಡಲ್ಲ ಸರ್.. ಮನಸಾಕ್ಷಿ ಬೇಕು ಮೊದಲು, ಮನಸಾಕ್ಷಿನಾ ಮುಂದೆ ಇಟ್ಟುಕೊಂಡು ಮಾತಾಡಬೇಕು ಸಾರ್. ನೀವು ಯಾವಾನೋ ಒಬ್ಬ ಬೇರೆಯವನು ಲಂಚಕ್ಕೆ ಕೈ ಒಡ್ಡುವ ಸಬ್ ರಿಜಿಸ್ಟರ್ ಜೊತೆ ಮಾತಾಡಿದಂತೆ ನನ್ನತ್ರ ಮಾತಾಡಬಾರದು ಸಾರ್ ಆ ಥರಾ..
ಗಂಗಾಧರ್ : ಅಲ್ಲಲ್ಲಾ ನಾನು
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಲಂಚಕ್ಕೆ ಕೈವೊಡ್ಡಿಕೊಂಡು ಸಾಯ್ತಾರಲ್ಲ ನನ್ನ ಮಕ್ಕಳು, ಅಂತಾ ಸಬ್ ರಿಜಿಸ್ಟರ್ ಜೊತೆ ನನ್ನನ್ನ ಸೇರಿಸಬೇಡಿ.
ಗಂಗಾಧರ್ : ಕೇಳಿ ಇಲ್ಲಿ, ನಾನು ಆ ರೀತಿ ಕೇಳಿಯೂ ಇಲ್ಲ ನಿಮಗೆ ಹೇಳಿಯೂ ಇಲ್ಲ.
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಅದನ್ನೇ ಹೇಳೊದು, ಮನಸಾಕ್ಷಿ ಬೇಕು ಅಂತಾ ಹೇಳೊದು ಇದಕ್ಕೇನೆ. ಲಂಚ ಕೇಳೋನಿಗೆ ಮನಸಾಕ್ಷಿ ಇರಲ್ಲ.
ಗಂಗಾಧರ್ : ಒಂದು ಚೆನ್ನಾಗಿ ತಿಳ್ಕೊಳ್ಳಿ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ನನ್ನತ್ರ ತಿಳ್ಕೊಳ್ಳೋದು ಅಲ್ಲ ಸರ್, ನಿಮ್ ನದರದು ನನ್ನತ್ರ ತಿಳ್ಕೊಂಡು ನನಗೇನು ಆಗಬೇಕು.
ಗಂಗಾಧರ್ : ಅಲ್ಲಲ್ಲಾ ಒಂದು ತಿಳ್ಕೋಳ್ಳಿ..
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಏನ್ ತಿಳ್ಕೋಳ್ಳೋದು..? ಹೇಳಿ
ಗಂಗಾಧರ್ : ಏನ್ ಹಂಗೆ ಮಾತಾಡ್ತಿರಾ ನೀವು, ಅದೇನು ನಿಮ್ಮ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಅಲ್ಲಾ ಇವರೇ ಕರೆದುಬುಟ್ಟು ಕಾಸ್ ಕೇಳ್ತಿರಲ್ಲ ನಾಚಿಕೆ ಆಗಲ್ವೇನ್ರಿ ನಿಮಗೆ, ಒಬ್ಬ ಮಿನಿಸ್ಟರ್ ಪಿಎ ಆಗಿ ನೀವು..
ಗಂಗಾಧರ್ : ಅಲ್ಲಾ ರೀ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಅಲ್ಲಾ ರೀ, ನೀವು ಕರೆದುಬಿಟ್ಟು ಕಾಸ್ ಕೇಳ್ತಿರಲ್ಲ. ಎಷ್ಟು ತಂದಿದೀಯಾ ಕೊಡು ಅಂತಾ ಕೇಳ್ತಿರಲ್ಲ ನಾಚಿಕೆ ಆಗಲ್ವೇನ್ರಿ ನಿಮಗೆ..?
ಗಂಗಾಧರ್ : ನಾನು ಕೇಳಲಿಲ್ಲ ರೀ ನಿಮಗೆ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಹೇ, ಅದನ್ನೇ ಹೇಳಿದ್ದು ರೀ ಮನಸಾಕ್ಷಿ ಕಲಿತುಕೊಳ್ರಿ ಮೊದಲು.. ಮನಸಾಕ್ಷಿನಾ ಬೆಳೆಸಿಕೊಳ್ರಿ ಅದನ್ನ. ಮನಸಾಕ್ಷಿ ಬೆಳೆಸಿಕೊಳ್ರಿ ಮೊದಲು.
ಗಂಗಾಧರ್ : ನಾನು ನಿಮ್ಮನ್ನ ಕೇಳಿಲ್ಲ
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: : ಅದನ್ನ ಬಿಟ್ಟುಬಿಡಿ ಸುಳ್ಳು ಹೇಳೋದು ಬಿಟ್ಟುಬಿಡಿ ಮೊದಲು, ಮನಸಾಕ್ಷಿ ಕಲಿತುಕೊಳ್ಳಿ
ಗಂಗಾಧರ್ : ನಾನು ಕೇಳಲೇ ಇಲ್ಲ ಸುಮ್ಮನೆ ಕುಳಿತುಕೊಳ್ರಿ ಮೊದಲು
ಸಬ್ ರಿಜಿಸ್ಟ್ರಾರ್​ ಚೆಲುವರಾಜ್: ಹ್ಹಾ ಈಗ ಬಹಳ ಚೆನ್ನಾಗಿದೆ ಅಲ್ವಾ.? ಡ್ರಾಮ.
ಅಲ್ಲಿಗೆ ಕಾಲ್ ಕಟ್ ಮಾಡಿದ ಗಂಗಾಧರ್..!

ವಿಶೇಷ ವರದಿ: ವಿಷ್ಣುಪ್ರಸಾದ್, ಕ್ರೈಂ ಬ್ಯೂರೋ

Source: newsfirstlive.com Source link