ಒಬಿಸಿ ಪಟ್ಟಿಗೆ ಪಂಚಮಸಾಲಿ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು: ಪರಮೇಶ್ವರ್

ತುಮಕೂರು: ಪಂಚಮಸಾಲಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಒಬಿಸಿ ಪಟ್ಟಿ ಸಿದ್ಧತೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಟ್ಟಿರುವುದನ್ನು ಸ್ವಾಗತಿಸಿ ನಗರದಲ್ಲಿ ಮಾತನಾಡಿದ ಅವರು, ಪಂಚಮಸಾಲಿಗಳು ಸೆಪ್ಟೆಂಬರ್ ಒಳಗಡೆ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿ ಅನ್ನೋದು ಬ್ಲ್ಯಾಕ್ ಮೇಲ್ ಆಗುತ್ತದೆ. ಹಾಗೇ ಎಲ್ಲರೂ ಬ್ಲ್ಯಾಕ್ ಮೇಲ್ ಮಾಡಲು ಹೋದರೆ ಸಂವಿಧಾನಕ್ಕೆ ಬೆಲೆ ಇರುವುದಿಲ್ಲ. ಕಾನೂನಿಗೂ ಬೆಲೆ ಇರುವುದಿಲ್ಲ. ಅದೇ ರೀತಿ ಜನರ ಒತ್ತಾಯ ತಡೆದುಕೊಳ್ಳುವ ಶಕ್ತಿ ಸರ್ಕಾರಕ್ಕೆ ಇರಬೇಕು ಎಂದರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಕೋಟ್ಯಂತರ ರೂ.ಗಳನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಕೊಡದೆ ಬಾಕಿ ಉಳಿಸಿಕೊಂಡಿದೆ. ಜನರಿಗೆ ಉಪಕಾರ ಮಾಡಲು ಹೋಗಿ ಖಾಸಗಿ ಆಸ್ಪತ್ರೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಕಳೆದ 7-8 ತಿಂಗಳಿಂದ ಆರೋಗ್ಯ ಕಾರ್ಡ್ ಹಣ ಸರ್ಕಾರ ಬಿಡುಗಡೆ ಮಾಡಿಲ್ಲ. ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಸರ್ಕಾರದಿಂದ 4.5 ಕೋಟಿ ರೂ. ಬಾಕಿ ಇದೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಬೊಮ್ಮಾಯಿ ದೇವೇಗೌಡರ ಮನೆಗೆ ಭೇಟಿ ಕೊಟ್ಟಿರೋದು ಸಹಜ, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ದೇವೇಗೌಡರು ಹಲವು ಸಂದರ್ಭಗಳಲ್ಲಿ ಬೊಮ್ಮಾಯಿಯವರಿಗೆ ಮಾರ್ಗದರ್ಶನ ಮಾಡುತ್ತಾರೆ. ನಾವು ಉನ್ನತ ಹುದ್ದೆಗೆ ಹೋದಾಗ ಆ ಕ್ಷೇತ್ರದ ಹಿರಿಯರನ್ನು ಭೇಟಿ ಮಾಡೋದು ಒಂದು ಸಂಪ್ರದಾಯ ಎಂದರು.

Source: publictv.in Source link