ಕಡಲ ಮಾರ್ಗದ ಸ್ಮಗ್ಲಿಂಗ್, ಭಯೋತ್ಪಾದನೆ ನಿಗ್ರಹಕ್ಕೆ ಮೋದಿ ಪಂಚ ಸೂತ್ರ

ಕಡಲ ಮಾರ್ಗದ ಸ್ಮಗ್ಲಿಂಗ್, ಭಯೋತ್ಪಾದನೆ ನಿಗ್ರಹಕ್ಕೆ ಮೋದಿ ಪಂಚ ಸೂತ್ರ

ಕಡಲ ಮಾರ್ಗಗಳು ಕಳ್ಳತನಕ್ಕೆ, ಭಯೋತ್ಪಾದನೆಗೆ, ಮಾದಕ ವಸ್ತುಗಳ ಸಾಗಾಣಿಕೆಗೆ ರಾಜಮಾರ್ಗ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಇದೆಲ್ಲದಕ್ಕೂ ಬ್ರೇಕ್‌ ಬೀಳುತ್ತಾ? ಹೌದು, ಭಾರತ ಪ್ರಧಾನಿ ನರೇಂದ್ರ ಮೋದಿ ನೀಡಿದ ಪಂಚಸೂತ್ರ ಅದನ್ನೇ ಹೇಳಿದೆ. ಹಾಗಾದ್ರೆ, ಏನದು ಪಂಚಸೂತ್ರ..?

ಅದು 26 ನವೆಂಬರ್‌ 2008, ಅಂದು ಪಾಕಿಸ್ತಾನ ಭಯೋತ್ಪಾದಕರು ಮುಂಬೈನ ತಾಜ್‌ ಹೋಟೆಲ್‌ ಮೇಲೆ ದಾಳಿ ನಡೆಸುತ್ತಾರೆ. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸುತ್ತಾರೆ. ಇಡೀ ಹೋಟೆಲ್‌ ರಕ್ತಮಯವಾಗುತ್ತದೆ. ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಲಾಗುತ್ತೆ. ಅದರಲ್ಲಿ ಒಬ್ಬ ಅಜ್ಮಲ್‌ ಕಸಬ್‌ ಅನ್ನೋ ಭಯೋತ್ಪಾದಕನನ್ನು ಜೀವಂತ ಸೆರೆ ಹಿಡಿಯಲಾಗುತ್ತೆ. ಈ ದುರಂತದಲ್ಲಿ ಸುಮಾರು 175 ಜನ ಪ್ರಾಣ ಕಳೆದುಕೊಳ್ಳುತ್ತಾರೆ. 300ಕ್ಕೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ. ಹೇಮಂತ್‌ ಕರ್ಕರೆ ಅವರಂತಹ ದಕ್ಷ ಪೊಲೀಸ್‌ ಅಧಿಕಾರಿಗಳನ್ನು ನಾವು ಕಳೆದುಕೊಳ್ಳುತ್ತೇವೆ.

blank

ಈ ಘಟನೆಯನ್ನು ಯಾಕೆ ಹೇಳಿದ್ವಿ ಗೊತ್ತಾ? ಮುಂಬೈ ಅಟ್ಯಾಕ್‌ಗೂ ಸೋಮವಾರ ವಿಶ್ವಸಂಸ್ಥೆ ಭದ್ರತಾ ಸಮಿತಿ ಅಧ್ಯಕ್ಷತೆ ವಹಿಸಿ ನರೇಂದ್ರ ಮೋದಿ ಅವರು ನೀಡಿದ ಪಂಚಸೂತ್ರಕ್ಕೂ ಲಿಂಕ್‌ ಇದೆ. ಅದೇನಂದ್ರೆ, ಮುಂಬೈ ಅಟ್ಯಾಕ್‌ಗೆ ಭಯೋತ್ಪಾದಕರು ಬಳಸಿಕೊಂಡ ಮಾರ್ಗ ಕಡಲ ಮಾರ್ಗವಾಗಿತ್ತು. ಇನ್ಮೇಲೆ ಅದೆಲ್ಲದ್ದಕ್ಕೂ ಬ್ರೇಕ್‌ ಹಾಕುವ ಸೂತ್ರವನ್ನೇ ಭಾರತ ಇಡೀ ವಿಶ್ವಕ್ಕೆ ನೀಡಿದೆ.

blank

ಅತೀ ಹೆಚ್ಚು ಸ್ಮಗ್ಲಿಂಗ್‌ ನಡೆಯುವುದೇ ಕಡಲ ಮಾರ್ಗದಲ್ಲಿ

ಎಗ್ಗಿಲ್ಲದೇ ನಡೆಯುತ್ತೆ ಡ್ರಗ್ಸ್‌, ಚಿನ್ನ ಸಾಗಾಣಿಕೆ

ಬಾಲಿವುಡ್‌, ಹಾಲಿವುಡ್ ಚಿತ್ರಗಳಲ್ಲಿ ವಿಲನ್‌ಗಳು ಕಡಲ ಮಾರ್ಗದ ಕಳ್ಳಸಾಗಾಣಿಕೆ ಮಾಡುವುದನ್ನು ನೋಡಿದ್ದೇವೆ. ಮಾದಕ ವಸ್ತುಗಳನ್ನು, ಚಿನ್ನಸಾಗಾಣಿಕೆಯನ್ನು ಯಾವುದೇ ಅಡೇ ತಡೆ ಇಲ್ಲದೇ ನಡೆಸುತ್ತಾರೆ. ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ. ಇದರಿಂದ ಡಾನ್‌ಗಳು ಸಾವಿರಾರು ಕೋಟಿ ಸಂಪಾದಿಸುತ್ತಾರೆ. ಆದ್ರೆ, ಒಲ್ಲಿಗೆ ಒಬ್ಬ ಹೀರೋ ಎಂಟ್ರಿಯಾಗುತ್ತಾರೆ. ವಿಲನ್‌ಗಳು ನಡೆಸುತ್ತಿದ್ದ ಕಳ್ಳಸಾಗಾಣಿಕೆಗೆ ಬ್ರೇಕ್‌ ನೀಡುತ್ತಾನೆ. ವಿಲನ್‌ಗಳನ್ನು ಹೆಡೆಮುರಿ ಕಟ್ಟುತ್ತಾನೆ.. ಇದೆಲ್ಲವನ್ನು ಸಿನಿಮಾದಲ್ಲಿ ನೋಡಿರುತ್ತೇವೆ. ಇದೀಗ ಅಂತಹ ನಿಜವಾದ ಡಾನ್‌ಗಳಿಗೆ, ವಿಲನ್‌ಗಳಿಗೆ, ಭಯೋತ್ಪಾದಕರಿಗೆ ಬ್ರೇಕ್‌ ಹಾಕಲು ಭಾರತ ಮುಂದಾಗಿದೆ. ಹೌದು, ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವೇ ಇದಕ್ಕೆ ಮುನ್ನುಡಿ. ಹಾಗಾದ್ರೆ ಮೋದಿ ಹೇಳಿದ್ದೇನು ಗೊತ್ತಾ? ಕಡಲ ಸುರಕ್ಷತೆಗೆ ನೀಡಿದ ಸಲಹೆ ಏನು ಗೊತ್ತಾ?

ಕಡಲ ಸುರಕ್ಷತೆಗೆ ಪಂಚ ಸೂತ್ರ ನೀಡಿದ ಮೋದಿ

ಪ್ರಧಾನಿ ಮೋದಿ ಮಾತಿಗೆ ತಲೆದೂಗಿದ ಜಗತ್ತು

ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅಧ್ಯಕ್ಷತೆ ವಹಿಸಿ ನರೇಂದ್ರ ಮೋದಿ ಮಾತಾಡಿದ್ದಾರೆ. ಇದೊಂದು ದಾಖಲೆಯಾಗಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಭಾರತದ ಯಾವುದೇ ಪ್ರಧಾನಿ ವಿಶ್ವ ಸಂಸ್ಥೆಯ ಭದ್ರತಾ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿರಲಿಲ್ಲ. ಮೋದಿ ಮಾತನಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ ಅವರು ಕಡಲ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ. ಕಡಲಿನ ಮೂಲಕ ಬರುವ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಿಕೊಳ್ಳಬೇಕು.. ಭಯೋತ್ಪಾದಕರಿಗೆ, ಕಳ್ಳಸಾಗಾಣಿಕೆದಾರರಿಗೆ ಬ್ರೇಕ್‌ ಹಾಕುವ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಸೂತ್ರ-1; ಕಡಲ ವ್ಯಾಪಾರಕ್ಕಿರುವ ಅಡೆತಡೆ ನಿವಾರಿಸಿಕೊಳ್ಳುವುದು

ಮೊದಲ ಸೂತ್ರದಲ್ಲಿಯೇ ಅಡೆತಡೆ ನಿವಾರಣೆಗೆ ಆದ್ಯತೆ

ಹೌದು, ಮೋದಿ ಅವರು ನೀಡಿರೋ ಪಂಚ ಸೂತ್ರಗಳಲ್ಲಿ ಮೊದಲನೇ ಸೂತ್ರವೇ ಕಡಲಿನ ವಿಚಾರದಲ್ಲಿ ಇರುವಂತಹ ಅಡೆತಡೆ ನಿವಾರಿಸಿಕೊಳ್ಳುವುದು. ಹೌದು, ತುಂಬಾ ರಾಷ್ಟ್ರಗಳ ಸಮುದ್ರ ಮಾರ್ಗದಲ್ಲಿ ಅಡೆತಡೆಗಳು ಇವೆ. ಮುಕ್ತ ಮತ್ತು ಕಾನೂನು ಬದ್ಧ ವ್ಯಾಪಾರಕ್ಕೂ ಅವಕಾಶ ಇಲ್ಲ. ಯಾಕೆಂದ್ರೆ, ಬೇರೆ ರಾಷ್ಟ್ರಗಳ ಹಡಗು ಸಂಚಾರಕ್ಕೆ ನಿರ್ಬಂಧವನ್ನೇ ಹಾಕಿ ಬಿಡಲಾಗುತ್ತದೆ. ಇದೇ ಕಾರಣಕ್ಕೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದ್ರು ಅಂತಿವಲ್ವ? ಆ ರೀತಿಯ ಪರಿಸ್ಥಿತಿ ಕೆಲವು ರಾಷ್ಟ್ರಗಳಿಗೆ ಇದೆ. ಇದರಿಂದ ಆರ್ಥಿಕ ಹೊರೆಯಾಗುತ್ತಿದೆ. ಮಾನವ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಇದನ್ನು ಮನಗಂಡಿರೋ ನರೇಂದ್ರ ಮೋದಿ ಅವರು ಮೊದಲಿಗೆ ಅಡೆ ತಡೆ ನಿವಾರಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಮುಕ್ತ ಮತ್ತು ಕಾನೂನು ಬದ್ಧವಾಗಿ ಇರಬೇಕು ಅನ್ನೋದನ್ನು ಒತ್ತಿ ಹೇಳಿದ್ದಾರೆ.

ಸೂತ್ರ-2; ಶಾಂತಿಯುತವಾಗಿ ವಿವಾದ ಬಗೆಹರಿಸಿಕೊಳ್ಳಲು ಸಲಹೆ

ದಕ್ಷಿಣ ಚೀನಾ ಸಮುದ್ರದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ?

ಮೊದಲ ಸೂತ್ರದಲ್ಲಿ ಸಮುದ್ರ ಮಾರ್ಗದ ವಿಚಾರದಲ್ಲಿ ಇರುವಂತಹ ಅಡೆತಡೆ ತೆರವಿನ ಬಗ್ಗೆ ಮೋದಿ ಮಾತನಾಡಿದ್ರು. ಹಾಗೇ ಎರಡನೇ ಸೂತ್ರದಲ್ಲಿ ವಿವಾದ ಬಗೆಹರಿಸಿಕೊಳ್ಳಲು ಆದ್ಯತೆ ನೀಡಿದ್ದಾರೆ. ಈ ಮೂಲಕ ದಕ್ಷಿಣ ಚೀನಾ ವಿವಾದ ಬಗ್ಗೆ ಪರೋಕ್ಷವಾಗಿ ಹೇಳಿದಂತೆಯೂ ಇದೆ. ಯಾಕೆಂದ್ರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದವಾಗುತ್ತಿರುವುದು ದಕ್ಷಿಣ ಚೀನಾ ಸಮುದ್ರ. ಹೌದು, ಅಲ್ಲಿ ಚೀನಾ ತನ್ನ ಪ್ರಭುತ್ವ ಸಾಧಿಸಲು ಯತ್ನಿಸುತ್ತಿದೆ. ಇದರಿಂದ ಮಲೇಷ್ಯಾ, ಫಿಲಿಫೈನ್ಸ್‌, ತೈವಾನ್‌, ವಿಯೆಟ್ನಾಂ ರಾಷ್ಟ್ರಗಳಿಗೆ ಸಮಸ್ಯೆಯಾಗುತ್ತಿದೆ. ಇದೇ ರೀತಿಯಾಗಿ ತುಂಬಾ ರಾಷ್ಟ್ರಗಳ ನಡುವೆ ಕಡಲ ಮಾರ್ಗ ವಿಚಾರದಲ್ಲಿ ವಿವಾದವಿದೆ. ಆದ್ರೆ, ಆ ವಿವಾದವನ್ನು ಹಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗುತ್ತಿಲ್ಲ. ಇದೇ ಕಾರಣಕ್ಕೆ ಮೋದಿ ಅವರು ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಹಾಗೇ ಭಾರತ ಮತ್ತು ಬಾಂಗ್ಲಾದೇಶಗಳು ಸಮುದ್ರ ವಿವಾದವನ್ನು ಹೇಗೆ ಬಗೆಹರಿಸಿಕೊಂಡಿವೆ ಅನ್ನೋದನ್ನು ತಿಳಿಸಿದ್ದಾರೆ.

blank

 

ಸೂತ್ರ-3; ಪರಸ್ಪರ ಕಡಲ ಸಂಪರ್ಕಕ್ಕೆ ಉತ್ತೇಜನ ನೀಡಿ

ಮೂರನೇ ಸೂತ್ರದಲ್ಲಿ ಕೊಟ್ರು ಮಹತ್ವದ ಸಂದೇಶ

ಇದೊಂದು ಮಹತ್ವದ ಸಂದೇಶವಾಗಿದೆ. ತಲೆತಲಾಂತರದಿಂದ ಎಷ್ಟೋ ರಾಷ್ಟ್ರಗಳಲ್ಲಿ ತಮ್ಮ ವ್ಯಾಪ್ತಿಯ ಸಮುದ್ರಲ್ಲಿ ಬೇರೆ ರಾಷ್ಟ್ರಗಳು ವಹಿವಾಟು ನಡೆಸಲು ಕೊಡುವುದಿಲ್ಲ. ಇದರಿಂದಾಗಿ ಆರ್ಥಿಕ ವೆಚ್ಚವೂ ಹೆಚ್ಚಾಗುತ್ತಿದೆ. ಆದ್ರೆ, ಪರಸ್ಪರ ಸಮಸ್ಯೆ ಬಗೆಹರಿಸಿಕೊಂಡು ಕಡಲ ಸಂಪರ್ಕಕ್ಕೆ ಉತ್ತೇಜನ ನೀಡಬೇಕು ಅನ್ನೋದನ್ನು ಮೋದಿ ಹೇಳಿದ್ದಾರೆ. ಸಾಮಾನ್ಯವಾಗಿ ಕಚ್ಚಾವಸ್ತುಗಳ ವಹಿವಾಟಿಗೆ ಜಲಮಾರ್ಗ ಕಡಿಮೆ ವೆಚ್ಚದ ಮಾರ್ಗವಾಗಿದೆ. ಆದ್ರೆ, ಬಹುತೇಕ ರಾಷ್ಟ್ರಗಳ ಸಮಸ್ಯೆ ಅಂದ್ರೆ ಮತ್ತೊಂದು ರಾಷ್ಟ್ರದ ಕಡಲನ್ನು ಪ್ರವೇಶಿಸಿ ಮುಂದೆ ಸಾಗಲು ಅವಕಾಶ ಇಲ್ಲದಿರುವುದು. ಇದು ದುಂದು ವೆಚ್ಚಕ್ಕೆ ಕಾರಣವಾಗುತ್ತಿದೆ. ಇದೇ ಉದ್ದೇಶಕ್ಕೆ ಮೋದಿ ಅವರು ಕಡಲ ಸಂಪರ್ಕಕ್ಕೆ ಆದ್ಯತೆ ನೀಡುವಂತೆ ತಿಳಿಸಿದ್ದಾರೆ.

ಸೂತ್ರ-4; ಉಗ್ರರ ಬಳಕೆಗೆ ಸಮುದ್ರ ಬಳಕೆಯಾಗುವುದನ್ನು ತಡೆಯುವುದು

ನೈಸರ್ಗಿಕ ವಿಕೋಪದ ಬೆದರಿಕೆಯನ್ನು ಒಟ್ಟಾಗಿ ಎದುರಿಸುವುದು

ನರೇಂದ್ರ ಮೋದಿ ಅವರು ನೀಡಿರೋ ನಾಲ್ಕನೇ ಸೂತ್ರವೇ ಸಮುದ್ರದ ದುರುಪಯೋಗ ತಡೆಯುವುದು. ಹೌದು, ಕಡಲಲ್ಲಿ ಕಳ್ಳತನದ ಎಗ್ಗಿಲ್ಲದೇ ನಡೆಯುತ್ತದೆ. ಅಷ್ಟೇ ಅಲ್ಲ, ಭಯೋತ್ಪಾದಕರು ಕೂಡ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ. ಮುಂಬೈ ತಾಜ್‌ ಹೋಟೆಲ್‌ ಮೇಲೆ ಅಟ್ಯಾಕ್‌ ಮಾಡುವಾಗ ಭಯೋತ್ಪಾದಕರು ಸಮುದ್ರ ಮಾರ್ಗದಲ್ಲೇ ಬಂದಿದ್ದರು. ಇದೇ ಉದ್ದೇಶಕ್ಕೆ ಮೋದಿ ಅವರು ಉಗ್ರರಿಗೆ ಕಡಲು ಉಪಯೋಗವಾಗುವುದನ್ನು ತಡೆಯಬೇಕಿದೆ ಅನ್ನೋ ಸಂದೇಶ ನೀಡಿದ್ದಾರೆ.  ಇದೇ ಸಂದರ್ಭದಲ್ಲಿ ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆ ಗಸ್ತು ತಿರುಗುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ. ಹಾಗೇ ಸಮುದ್ರದಿಂದ ಉಂಟಾಗುವ ಪ್ರಾಕೃತಿಕ ವಿಕೋಪದ ಬೆದರಿಕೆಯನ್ನು ಎದುರಿಸಬೇಕಿದೆ. ಅದನ್ನು ಒಟ್ಟಾಗಿಯೇ ಎದುರಿಸೋಣ ಅಂತ ತಿಳಿಸಿದ್ದಾರೆ.

ಸೂತ್ರ-5; ಕಡಲ ಪರಿಸರ, ಕಡಲ ಸಂಪನ್ಮೂಲ ರಕ್ಷಣೆ

ತ್ಯಾಜ್ಯ, ತೈಲ ಸೋರಿಕೆ ನಿಯಂತ್ರಣಕ್ಕೆ ಆದ್ಯತೆ

ಮೋದಿ ತಿಳಿಸಿರೋ ಪಂಚಸೂತ್ರದಲ್ಲಿ ಇದು ಕೂಡ ಮಹತ್ವದ ಸಂದೇಶವಾಗಿದೆ. ಹೌದು, ಕಡಲ ಪರಿಸರ ಮತ್ತು ಕಡಲ ಸಂಪನ್ಮೂಲವನ್ನು ಸಂರಕ್ಷಿಸಲು ಒತ್ತು ನೀಡೋಣ ಅಂತ ತಿಳಿಸಿದ್ದಾರೆ. ಸಮುದ್ರ ಪರಿಸರ ಪ್ಲಾಸ್ಟಿಕ್‌ ತ್ಯಾಜ್ಯ ಮತ್ತು ತೈಲ ಸೋರಿಕೆಯಿಂದ ಮಾಲಿನ್ಯವಾಗುತ್ತಿದೆ. ಇದರಿಂದ ಜಲಚರ ಜೀವಿಗಳಿಗೂ ತೊಂದರೆಯಾಗುತ್ತಿದೆ. ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತಿವೆ. ಇದೇ ಕಾರಣಕ್ಕೆ ಮೋದಿ ಅವರು ಕಡಲ ಪರಿಸರ ಸಂರಕ್ಷಣೆ ಒತ್ತು ನೀಡಿದ್ದಾರೆ. ಜೊತೆ ಅತಿಯಾದ ಮೀನುಗಾರಿಕೆಯಾಗದಂತೆ ತಡೆಯುವ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಅತಿಯಾದ ಮೀನುಗಾರಿಕೆಯಿಂದ ಏನಾಗುತ್ತದೆ ಅನ್ನೋದನ್ನು ತಿಳಿಸಿದ್ದಾರೆ.

blank

ಸಭೆಯಲ್ಲಿ ಅಮೆರಿಕ, ಚೀನಾ ನಡುವೆ ವಾಗ್ವಾದ

ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಘರ್ಷಣೆ

ನರೇಂದ್ರೆ ಮೋದಿ ನಡೆಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕ ಮತ್ತು ಚೀನಾ ನಡುವೆ ವಾಗ್ವಾದ ನಡೆದಿದೆ. ಹೌದು, ಮೊದಲು ಅಮೆರಿಕ ದಕ್ಷಿಣ ಚೀನಾ ಸಮುದ್ರಲ್ಲಿ ಚೀನಾ ನಡೆಸುತ್ತಿರುವ ದಾಳಿಯ ಬಗ್ಗೆ ಪ್ರಸ್ತಾಪ ಮಾಡಿದೆ. ಕಾನೂನು ಬಾಹಿರ ಘಟನೆಗಳು ನಡೆಯುತ್ತಿರುವುದನ್ನು ತಿಳಿಸಿದೆ. ಆದ್ರೆ, ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಚೀನಾ, ದಕ್ಷಿಣ ಚೀನಾ ಸಮುದ್ರದ ಬಗ್ಗೆ ಚರ್ಚಿಸಲು ಇದು ಸೂಕ್ತ ವೇದಿಕೆಯಲ್ಲ ಎಂದಿದೆ. ಈ ಸಮಯದಲ್ಲಿ ಭಾರತವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದೆ.

ಭದ್ರತಾ ಮಂಡಳಿ ಸಭೆ ನಡೆಸಿದ ಮೊದಲ ಪ್ರಧಾನಿ

ವಿಶ್ವಸಂಸ್ಥೆಯಲ್ಲಿ ಇತಿಹಾಸ ಸೃಷ್ಟಿಸಿದ ನರೇಂದ್ರ ಮೋದಿ

ಹೌದು, ಪ್ರಧಾನಿ ನರೇಂದ್ರ ಮೋದಿಯವರು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅದೇನಂದ್ರೆ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಭದ್ರತಾ ಮಂಡಳಿ ಸಭೆ ನಡೆಸಿದ್ದಾರೆ. ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಲ್ಲಿಯವರೆಗೆ 10 ಬಾರಿ ಅಧಿಕಾರಾವಧಿ ಸಿಕ್ಕಿದೆ. ಆದ್ರೆ, ಭಾರತೀಯ ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಸಭೆ ನಡೆದು ಇತಿಹಾಸ ಸೃಷ್ಟಿಯಾಗಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಡಲ ರಕ್ಷಣೆಗೆ ಪಂಚ ಸೂತ್ರಗಳನ್ನು ಭೋದಿಸಿ ಗಮನ ಸೆಳೆದಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಭೆ ನಡೆಸಿ ಭಾರತ ಇತಿಹಾಸ ನಿರ್ಮಿಸಿದೆ. ಹಾಗೇ ಕಡಲ ರಕ್ಷಣೆಗೆ ಬೇಕಾದ ಪಂಚಸೂತ್ರಗಳನ್ನು ಭಾರತ ವಿಶ್ವದ ಮುಂದಿಟ್ಟಿದೆ. ಆ ಪಂಚ ಸೂತ್ರಗಳನ್ನು ಅನುಸರಿಸಿದ್ರೆ ಇಡೀ ವಿಶ್ವಕ್ಕೆ ಸದುಪಯೋಗವಾಗಲಿದೆ. ಇದಕ್ಕೆ ಅಲ್ಲವೇ ಭಾರತ ವಿಶ್ವ ಗುರು ಅನ್ನೋದು.

Source: newsfirstlive.com Source link