ಮಂಗಗಳ ಹಾವಳಿಗೆ ತತ್ತರಿಸಿದ ರಾಯಚೂರಿನ ಗ್ರಾಮ – ಮನೆಗೆ ಬೀಗ ಹಾಕಿಕೊಂಡು ಕುಳಿತ ಜನ

ರಾಯಚೂರು: ತಾಲೂಕಿನ ಪಲವಲದೊಡ್ಡಿ ಗ್ರಾಮದ ರಸ್ತೆಗಳಲ್ಲಿ ಮನುಷ್ಯರು ಕಾಣದಿದ್ದರೂ ಕೋತಿಗಳು ಮಾತ್ರ ಕಣ್ಣಿಗೆ ಬಿದ್ದೇ ಬೀಳುತ್ತಿದ್ದು, ಜನ ಮಂಗಗಳ ಹಾವಳಿಗೆ ತತ್ತರಿಸಿ ಹೋಗಿದ್ದಾರೆ. ಕೋತಿಗಳಿಗೆ ಹೆದರಿ ಜನ ಮನೆ ಬಾಗಿಲು ಹಾಕಿಕೊಂಡು ಕುಳಿತಿದ್ದಾರೆ. ಕಳೆದ ಒಂದು ತಿಂಗಳಿಂದ ಅದೆಲ್ಲಿಂದಲೋ ಬಂದ ಕೋತಿಗಳು ಗ್ರಾಮಸ್ಥರನ್ನೇ ಊರು ಬಿಡುವಂತೆ ಮಾಡುತ್ತಿವೆ. ರಾಯಚೂರಿನ ಈ ಊರಲ್ಲಿ ಮನೆಗೊಂದು ಕೋತಿ ಇವೆ.

ಪಲವಲದೊಡ್ಡಿ ಗ್ರಾಮದಲ್ಲಿ ಸುಮಾರು 150 ಮನೆಗಳಿವೆ. ಅಂದಾಜು ಅಷ್ಟೇ ಪ್ರಮಾಣದ ಕೋತಿಗಳು ಗ್ರಾಮದಲ್ಲಿದ್ದು ಗ್ರಾಮಸ್ಥರನ್ನ ರಸ್ತೆಯಲ್ಲಿ ನಿರಾತಂಕವಾಗಿ ಓಡಾಡದಂತೆ ಮಾಡಿವೆ. ಮನೆ ಬಾಗಿಲು ತೆರೆದಿಟ್ಟರೆ ಮನೆಯೊಳಗೆ ನುಗ್ಗಿ ಸಿಕ್ಕ ವಸ್ತುಗಳನ್ನು ಹೊತ್ತೊಯ್ಯುತ್ತವೆ. ಮಕ್ಕಳು ಆಟವಾಡುತ್ತಿದ್ದರೆ ಕೈಯಲ್ಲಿದ್ದ ವಸ್ತುಗಳನ್ನ ಕಸಿದುಕೊಂಡು ಹೋಗುತ್ತವೆ. ಮಕ್ಕಳು ವಸ್ತು ಕೊಡದೆ ಗಲಾಟೆ ಮಾಡಿದರೆ ಪರಚಿ ಹೆದರಿಸುತ್ತವೆ. ಹೀಗಾಗಿ ಗ್ರಾಮದಲ್ಲಿ ವಯೋವೃದ್ದರು, ಮಕ್ಕಳು ಓಡಾಡದಂತಾಗಿದೆ. ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ಒಂದೂ ಮಂಗ ಇರಲಿಲ್ಲ. ಏಕಾಏಕಿ ವಾನರ ಸೈನ್ಯ ಗ್ರಾಮಕ್ಕೆ ಲಗ್ಗೆ ಇಟ್ಟಿದೆ. ಯಾರೋ ಈ ಎಲ್ಲಾ ಕೋತಿಗಳನ್ನ ಬಿಟ್ಟು ಹೋಗಿರಬೇಕು ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಗ್ರಾಮ ಪಂಚಾಯತಿ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೇವಲ ಪರಿಶೀಲನೆ ಮಾಡಿ ಹೋಗಿರುವ ಅಧಿಕಾರಿಗಳು ಮಂಗಗಳನ್ನ ಹಿಡಿಯುವ ಕೆಲಸಕ್ಕೆ ಮುಂದಾಗಿಲ್ಲ. ಗ್ರಾಮದಲ್ಲಿ ಸುಮಾರು ಜನರಿಗೆ ಕಚ್ಚಿರುವ ಕೋತಿಗಳು, ಜನರ ನೆಮ್ಮದಿಯನ್ನೆ ಕೆಡಿಸಿವೆ. ಕೋತಿಗಳ ಕಾಟಕ್ಕೆ ಜನರೇ ಗ್ರಾಮವನ್ನ ಬಿಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ರಾಯಚೂರು ನಗರಸಭೆಯಿಂದ ರಿಮ್ಸ್‌ಗೆ 2ಡಿ ಎಕೋ ಯಂತ್ರ ದೇಣಿಗೆ

blank

ಒಟ್ನಲ್ಲಿ, ಎಲ್ಲಿಂದಲೋ ಬಂದು ಸೇರಿರುವ ಅತಿಥಿಗಳು ಇಡೀ ಊರನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿವೆ. ದಿನ ಬೆಳಕು ಹರಿಯುವುದರೊಳಗೆ ಏನಾದರೊಂದು ಅವಾಂತರವಾಗಿರುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು, ಕೋತಿಗಳನ್ನ ಹಿಡಿದು ಸ್ಥಳಾಂತರಿಸಬೇಕಿದೆ. ಇದನ್ನೂ ಓದಿ: ಮಾಸ್ಕ್ ಧರಿಸದೇ ಜನರ ಓಡಾಟ- ದಾಂಡೇಲಿಯಲ್ಲಿ 1,02,800 ರೂ. ದಂಡ ವಸೂಲಿ

Source: publictv.in Source link