ವ್ಯರ್ಥವಾಗಿ ಹರಿಯುತ್ತಿದ್ದ ನೀರಿನ ಸದ್ಬಳಕೆ, ಎರಡು ಕೆರೆ ತುಂಬಿಸಿದ ಗ್ರಾಮ ಪಂಚಾಯಿತಿ

– ಸದಸ್ಯರ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

ಚಾಮರಾಜನಗರ: ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಕೇವಲ 4 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕೆರೆಗಳಿಗೆ ತುಂಬಿಸಿ ಕಾಡಂಚಿನ ಗ್ರಾಮ ಪಂಚಾಯತಿಯೊಂದು ಮಾದರಿಯಾಗಿದೆ.

ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ಬಿಳಗಿರಿರಂಗನಬೆಟ್ಟದ ಪಕ್ಕದಲ್ಲೇ ಇದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕೆರೆಗಳು ಹಲವಾರು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿವೆ. ಹೀಗಾಗಿ ಬಿಳಗಿರಿರಂಗನಬೆಟ್ಟದಿಂದ ಹರಿದು ಈ ಪಂಚಾಯತಿ ವ್ಯಾಪ್ತಿಯ ಮಸಕತ್ತಿ ಹಳ್ಳದ ಮೂಲಕ ವ್ಯರ್ಥವಾಗಿ ಹರಿದು ಹೋಗುವ ನೀರಿನಿಂದಲೇ ಕೆರೆಗಳನ್ನು ತುಂಬಿಸಲು ಗ್ರಾಮಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಸದಸ್ಯರು ಪ್ಲ್ಯಾನ್ ಮಾಡಿದ್ದಾರೆ. ಬಳಿಕ ಸ್ಥಳೀಯವಾಗಿ ಒಂದು ಕ್ರಿಯಾ ಯೋಜನೆ ರೂಪಿಸಿ ಮಸಕತ್ತಿ ಹಳ್ಳದಲ್ಲಿ 12 ಹೆಚ್.ಪಿ. ಮೋಟರ್ ಅಳವಡಿಸಿ ಎರಡೂವರೆ ಕಿಲೋಮೀಟರ್ ಪೈಪ್ ಲೈನ್ ಹಾಕಿ ಸೂಲಿಕೆರೆಗೆ ನೀರು ಹರಿಸಿದ್ದಾರೆ. ಇನ್ನೊಂದೆಡೆ 7.5 ಹೆಚ್.ಪಿ ಮೋಟರ್ ಅಳವಡಿಸಿ 1 ಕಿಲೋ ಮೀಟರ್ ಪೈಪ್ ಲೈನ್ ಹಾಕಿ ಉಯಿಲಿನತ್ತ ಕೆರೆಗೆ ನೀರು ತುಂಬಿಸಿದ್ದಾರೆ.

ಕೇವಲ ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡೂ ಕೆರೆ ತುಂಬಿಸಿದ್ದು, ಈ ಕೆರೆಗಳ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿದೆ. ಕೆರೆಗಳು ತುಂಬಿದ ಖುಷಿಗೆ ಗ್ರಾಮಸ್ಥರು ಗಂಗೆ ಪೂಜೆ ನೆರವೇರಿಸಿದ್ದಾರೆ. ಈ ಕೆರೆಗಳು ತುಂಬಿರುವುದರಿಂದ ದನಕರುಗಳಿಗೆ ಕುಡಿಯುವ ನೀರು ಲಭಿಸುವಂತಾಗಿದೆ. ಅಲ್ಲದೆ ಸುತ್ತಮುತ್ತ ಅಂತರ್ಜಲ ವೃದ್ಧಿಯಾಗಿದೆ. ಹೀಗಾಗಿ ಇದೇ ಮಾದರಿಯಲ್ಲಿ ಉಳಿದ ಎಂಟು ಕೆರೆಗಳನ್ನು ತುಂಬಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

blank

ನೀರು ತುಂಬಿದ ಕೆರೆಗಳನ್ನು ಮೀನುಗಾರಿಕೆಗೆ ಟೆಂಡರ್ ನೀಡಬಹುದಾಗಿದೆ. ಇದರಿಂದಲೇ ಕೆರೆ ತುಂಬಿಸುವ ಯೋಜನೆಯ ವೆಚ್ಚವನ್ನು ಒಂದೇ ವರ್ಷದಲ್ಲಿ ಭರಿಸಿಕೊಳ್ಳಬಹುದು ಎಂಬುದು ಗ್ರಾಮಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ನಿರೀಕ್ಷೆಯಾಗಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಯಾವೆಲ್ಲಾ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ಪಿ.ಜಿ.ಪಾಳ್ಯ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದಾರೆ.

blank

Source: publictv.in Source link