ಆರ್ಡರ್ ಮಾಡಿದ್ದು ಮೊಬೈಲ್, ಬಂದದ್ದು ಸ್ವೀಟ್ ಬಾಕ್ಸ್- ಒಂದೇ ಗ್ರಾಮದ ಐವರಿಗೆ ಆನ್‍ಲೈನ್ ದೋಖಾ

ಚಿಕ್ಕಮಗಳೂರು: ಒಂದು ಫೋನ್ ಕಾಲ್ ನಂಬಿ ಆನ್‍ಲೈನ್‍ನಲ್ಲಿ ಮೊಬೈಲ್ ಬುಕ್ ಮಾಡಿದ್ದ ಯುವಕನಿಗೆ ಮೊಬೈಲ್ ಬದಲು ಸ್ವೀಟ್ ಬಾಕ್ಸ್ ಬಂದಿರುವ ಘಟನೆ ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ನಡೆದಿದೆ.

ಮುಗುಳುವಳ್ಳಿ ಗ್ರಾಮದ ತೀರ್ಥಕುಮಾರ್ ಆನ್‍ಲೈನ್ ನಂಬಿ ಮೋಸ ಹೋದವರು. ಈ ಗ್ರಾಮದಲ್ಲಿ ಕೇವಲ ಒಬ್ಬ ಯುವಕನಷ್ಟೆ ಮೋಸ ಹೋಗಿಲ್ಲ. ಕಳೆದ 20 ದಿನಗಳಲ್ಲಿ ಇದೇ ರೀತಿ ಐವರು ಮೋಸ ಹೋಗಿದ್ದಾರೆ. ತೀರ್ಥಕುಮಾರ್ ಗೆ ಸೋಂಪಾಪಡಿ ಬಂದಿದೆ. ಕೆಲವರಿಗೆ ವೇಸ್ಟ್ ಬಟ್ಟೆ. ಮತ್ತೆ ಕೆಲವರಿಗೆ ವೇಸ್ಟ್ ಬ್ಯಾಟರಿ ಹಾಗೂ ಚಾರ್ಜ್‍ರ್. ಒಬ್ಬೊಬ್ಬರಿಗೆ ಒಂದೊಂದು ಬಂದಿದೆ.

ಎಲ್ಲರೂ 1,500 ರಿಂದ 2,500 ರೂಪಾಯಿವರೆಗೆ ಹಣ ಹಾಕಿದ್ದಾರೆ. ಈಗ ಮೊಬೈಲ್ ಬದಲು ಬಂದ ವಸ್ತುಗಳನ್ನು ನೋಡಿ ಅದೇ ನಂಬರ್ ಗೆ ಫೋನ್ ಮಾಡಿದರೆ ಉತ್ತರವಿಲ್ಲ. ಕಳೆದ ಎಂಟತ್ತು ದಿನಗಳ ಹಿಂದೆ ತೀರ್ಥಕುಮಾರ್ ಗೆ ಯುವತಿಯೊಬ್ಬಳು ಫೋನ್ ಮಾಡಿದ್ದಳು. ನಿಮ್ಮ ನಂಬರ್ ಲಕ್ಕಿ ಡಿಪ್‍ನಲ್ಲಿ ಸೆಲೆಕ್ಟ್ ಆಗಿದೆ. ನೀವು 1,500 ಹಣ ನೀಡಿದರೆ, 15,000 ಸಾವಿರ ರೂ. ಬೆಲೆ ಬಾಳುವ ಹೆಸರಾಂತ ಕಂಪನಿ ಮೊಬೈಲ್ ಸಿಗಲಿದೆ ಎಂದಿದ್ದಾಳೆ. ಮೋಸ ಆಗಲ್ಲ, ನೀವು ಮೊಬೈಲ್ ನೋಡಿ ಹಣ ನೀಡಿ ಎಂದಿದ್ದಾಳೆ.

ಅವಳ ಮಾತು ಕೇಳಿ ಹಳ್ಳಿಗರು ಬುಕ್ ಮಾಡಿ, ಎಂಟತ್ತು ದಿನಗಳಿಂದ ಹೊಸ ಮೊಬೈಲ್ ಹಾದಿ ಕಾದಿದ್ದಾರೆ. ಮೊಬೈಲ್ ಬಂದಾಗಲೂ ಆ ಯುವತಿಗೆ ಫೋನ್ ಮಾಡಿದ್ದಾರೆ. ಆಗಲೂ ಆಕೆ ಓಪನ್ ಮಾಡಿ, ಏನೂ ಮೋಸ ಇಲ್ಲ ಎಂದಿದ್ದಕ್ಕೆ ಪೋಸ್ಟ್ ಆಫೀಸ್‍ನಲ್ಲಿ ಹಣ ಕಟ್ಟಿ ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಆಕೆಯೊಂದಿಗೆ ಮಾತನಾಡಿಕೊಂಡೇ ಬಾಕ್ಸ್ ಓಪನ್ ಮಾಡಿದ್ದಾರೆ. ಆದರೆ ಬಾಕ್ಸ್ ನಲ್ಲಿ ಮೊಬೈಲ್ ಬದಲು ಇದ್ದದ್ದು ಸ್ವೀಟ್ ಬಾಕ್ಸ್.

ಮತ್ತೆ ಫೋನ್ ಮಾಡಿದರೆ ರಿಂಗ್ ಆದರೂ ಆಕೆ ಫೋನ್ ಎತ್ತಲ್ಲ. ಆಗ ಹಳ್ಳಿಗರಿಗೆ ನಾವು ಮೋಸ ಹೋದೆವು ಎಂದು ಅರಿವಾಗಿದೆ. ಪೋಸ್ಟ್ ಆಫೀಸ್‍ನಲ್ಲೂ ನೋಡಿ, ವಾಪಸ್ ಕಳಿಸಬಹುದು. ಮೋಸ ಆಗುವ ಸಾಧ್ಯತೆ ಇರುತ್ತೆ ಎಂದು ಹೇಳಿದ್ದಾರೆ. ಆದರೆ ಆಕೆ ಅಷ್ಟು ಕಾನ್ಫಿಡೆಂಟ್ ಆಗಿ ಹೇಳಿದ್ದರಿಂದ ಹಳ್ಳಿಗರು ಹಣ ಕೊಟ್ಟು ಮೋಸ ಹೋಗಿದ್ದಾರೆ. ಇದೀಗ ಮೋಸ ಹೋದವರು, ಯಾರದ್ದೋ ಫೋನ್ ಕಾಲ್ ನಂಬಿ ಹಣ ಕಳೆದುಕೊಂಡಿದ್ದೇವೆ. ನಾವು ಮೋಸ ಹೋಗಿದ್ದೇವೆ ಎಂದು ಪರಿತಪಿಸುತ್ತಿದ್ದಾರೆ.

Source: publictv.in Source link