ಹೆದ್ದಾರಿಯಲ್ಲಿಯೇ ಭಾರೀ ಭೂಕುಸಿತ – ಮಣ್ಣಿನಡಿ ಸಿಲುಕಿರುವ ಬಸ್, ಕಾರ್, ಟ್ರಕ್

– 10 ಸಾವು, 50ಕ್ಕೂ ಹೆಚ್ಚು ಜನ ಅವಶೇಷಗಳಡಿ ಸಿಲುಕಿರುವ ಶಂಕೆ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಮತ್ತು ಹರಿದ್ವಾರದ ಹೆದ್ದಾರಿಯಲ್ಲಿ ಭಾರೀ ಭೂ ಕುಸಿತವಾಗಿದ್ದು, ವಾಹನಗಳು ಮಣ್ಣಿನಡಿ ಸಿಲುಕಿವೆ. ಸುಮಾರು 10 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಮಣ್ಣಿನಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳೀಯರು, ಎನ್‍ಡಿಆರ್ ಎಫ್, ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಭೂಕುಸಿತದಲ್ಲಿ ಒಂದು ಬಸ್, ಒಂದು ಟ್ರಕ್, ಒಂದು ಬೊಲೆರೋ ಮತ್ತು ಮೂರು ಟ್ಯಾಕ್ಸಿ ಸಿಲುಕಿವೆ. ಆದ್ರೆ ಈ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಜನರ ಸಂಖ್ಯೆ ನಿಖರವಾಗಿ ಗೊತ್ತಾಗಿಲ್ಲ. ಮಣ್ಣಿನಡಿ ಸಿಲುಕಿರುವ ಜನರು ಬದುಕುಳಿದಿರುವ ಸಾಧ್ಯತೆಗಳು ವಿರಳ ಎಂದು ವರದಿಯಾಗಿದೆ. ಸೇನಾ ಹೆಲಿಕಾಪ್ಟರ್ ನಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಈ ಅವಘಡದಲ್ಲಿ ಬದುಕುಳಿದಿರುವ ಬಸ್ ಕಂಡಕ್ಟರ್ ಮಹೇಂದ್ರ ಪಾಲ್ ಬಿಲಾಸಪುರದ ನಿವಾಸಿ ಎಂದು ತಿಳಿದು ಬಂದಿದೆ. ಬಸ್ ನಲ್ಲಿ ಒಟ್ಟು 25 ಜನ ಪ್ರಯಾಣಿಕರಿದ್ದರು ಎಂದು ಮಹೇಂದ್ರ ಹೇಳುತ್ತಾರೆ. ಇತ್ತ ಬಸ್ ಚಾಲಕ ಗುಲಾಬ್ ಸಿಂಗ್ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್ ನಲ್ಲಿ ಸುಮಾರು 25 ಜನ ಪ್ರಯಾಣಿಕರಿದ್ದರು. ನಿಗುಲ್ಸೇರಿ ತಲುಪುತ್ತಿದ್ದಂತೆ ಬೆಟ್ಟ ಕುಸಿಯಲಾರಂಭಿಸಿತು. ಭೂ ಕುಸಿತವಾಗ್ತಿದ್ದ ಸ್ಥಳದ 100 ಮೀಟರ್ ಹಿಂದೆಯೇ ಬಸ್ ನಿಲ್ಲಿಸಿದೇವು. ನಮ್ಮ ಹಿಂದೆಯೇ ಕಾರ್, ಟ್ರಕ್ ಸೇರಿದಂತೆ ಹಲವು ವಾಹನಗಳು ನಿಂತಿದ್ದವು. ಬದುಕಿತು ಜೀವ ಅನ್ನೋಷ್ಟರಲ್ಲಿಯೇ ನಮ್ಮ ಮೇಲ್ಭಾಗದಿಂದಲೇ ಮಣ್ಣು ಕುಸಿಯಲಾರಂಭಿಸಿತು. ನೋಡ ನೋಡುತ್ತಿದ್ದಂತೆ ನಮ್ಮೆಲ್ಲರ ಮೇಲೆ ಮಣ್ಣು ಬಿತ್ತು ಎಂದು ಘಟನೆಯನ್ನು ಚಾಲಕ ಮತ್ತು ನಿರ್ವಾಹಕ ವಿವರಿಸಿದ್ದಾರೆ.

Source: publictv.in Source link