ಕಂಟ್ರೋಲ್‍ಗೆ ಬಾರದ ಕೊರೊನಾ- ನಾಲ್ಕು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಚ್ಚು ಕೇಸ್

– ಬೆಂಗಳೂರಿಗಿಂತ ಹೆಚ್ಚು ಪ್ರಕರಣ ಪತ್ತೆ

ಮಂಗಳೂರು: ನೆರೆಯ ಕೇರಳ ರಾಜ್ಯದಿಂದಲೇ ಗಡಿ ಜಿಲ್ಲೆ ದಕ್ಷಿಣ ಕನ್ನಡಕ್ಕೆ ಕೊರೊನಾ ಕಂಟಕ ಎದುರಾಗಿದೆ. ದೇಶದಲ್ಲಿ ಪ್ರತಿದಿನ ಪತ್ತೆಯಾಗುವ ಅರ್ಧದಷ್ಟು ಸೋಂಕು ಕೇರಳದಲ್ಲೇ ವರದಿಯಾಗುತ್ತಿವೆ. ಹೀಗಾಗಿ ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ದ.ಕ.ಜಿಲ್ಲೆಯ ಜನರಲ್ಲಿ ನಡುಕ ಶುರುವಾಗಿದೆ. ಇಂದು ಒಂದೇ ದಿನ 422 ಜನರಲ್ಲಿ ಕೊರೊನಾ ಸೊಂಕು ಪತ್ತೆಯಾಗುವ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಸೋಂಕು ಪತ್ತೆಯಾದ ಜಿಲ್ಲೆಯಾಗಿದೆ.

ಜಿಲ್ಲೆಯಲ್ಲಿ ಕೊರೊನಾಗೆ ಇಂದು 5 ಮಂದಿ ಬಲಿಯಾದರೆ. 279 ಮಂದಿ ಕೊರೊನಾದಿಂದ ಗುಣಮುಖರಾಗುವ ಮೂಲಕ ಜಿಲ್ಲೆಯ ಪಾಸಿಟಿವ್ ರೇಟ್ ಶೇ.3.85 ಆಗಿದೆ. ಇಂದು ಮಾತ್ರವಲ್ಲ ಕಳೆದ ನಾಲ್ಕು ದಿನಗಳಿಂದಲೂ ರಾಜ್ಯದಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದೆ.

ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟಿರುವ ಜಿಲ್ಲಾಡಳಿತ, ಹೊಸ ರೂಲ್ಸ್ ಜಾರಿಮಾಡಿದೆ. ಕೊರೊನಾ ಸೋಂಕು ಪತ್ತೆಯಾದ ವ್ಯಕ್ತಿಯ ಸಂಪರ್ಕದಲ್ಲಿರುವ ಸುಮಾರು 50 ಮಂದಿಯನ್ನು ಟೆಸ್ಟ್ ಗೆ ಒಳಪಡಿಸುತ್ತಿದೆ. ನಗರ ಭಾಗದ ಅಪಾರ್ಟ್‍ಮೆಂಟ್ ನಿವಾಸಿಗಳಲ್ಲಿ ಸೋಂಕು ಕಂಡುಬಂದರೆ. ಫ್ಲ್ಯಾಟ್ ನ ಮೇಲಿನ ಮಹಡಿ ಮತ್ತು ಕೆಳ ಮಹಡಿಯ ಎಲ್ಲರ ಕೊರೊನಾ ಟೆಸ್ಟ್ ಮಾಡಲಾಗುತ್ತದೆ.

blank

ಒಂದೇ ಕಡೆಯಲ್ಲಿ ಎರಡಕ್ಕಿಂತ ಹೆಚ್ಚು ಜನ ಪಾಸಿಟಿವ್ ಆದರೆ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗುತ್ತಿದೆ. ದಿನನಿತ್ಯ ನಗರದಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಿರುವ ಜಿಲ್ಲಾಡಳಿತ, ಕೇರಳ ನಂಬರ್ ಪ್ಲೇಟ್ ಇರುವ ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

blank

ಕರಾವಳಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ಕಾಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳೂರಿಗೆ ಬಂದು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್-19 ಕುರಿತಂತೆ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಉಡುಪಿಗೆ ತೆರಳಿ ಅಲ್ಲೂ ಕೋವಿಡ್ ಸಭೆಯಲ್ಲಿ ಭಾಗವಹಿಸುವರು. ಮಂಗಳೂರಿನಲ್ಲೇ ವಾಸ್ತವ್ಯ ಹೂಡುವ ಸಿಎಂ, ಶುಕ್ರವಾರ ಬೆಳಗ್ಗೆ 8 ಗಂಟೆಗೆ ದಕ್ಷಿಣ ಕನ್ನಡ ಕೇರಳ ಗಡಿ ಭಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ, ಗಡಿಯಲ್ಲಿ ಕೈಗೊಂಡ ಕ್ರಮದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

Source: publictv.in Source link