ಮೆಸ್ಸಿ ಜೆರ್ಸಿ ನಂಬರ್ ಬದಲಿಸಿದ್ದು ಏಕೆ -ಟಾಪ್ 10 ಸುದ್ದಿಗಳ ಕ್ವಿಕ್​​ ರೌಂಡಪ್​

ಮೆಸ್ಸಿ ಜೆರ್ಸಿ ನಂಬರ್ ಬದಲಿಸಿದ್ದು ಏಕೆ -ಟಾಪ್ 10 ಸುದ್ದಿಗಳ ಕ್ವಿಕ್​​ ರೌಂಡಪ್​

‘ಶೀಘ್ರವೇ ಕೇಂದ್ರ ನೀರಾವರಿ ಸಚಿವರ ಭೇಟಿ ಮಾಡುತ್ತೇನೆ’
ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಅನುಮತಿ ಕೇಳುವ ಬಗ್ಗೆ ಕೇಂದ್ರ ನೀರಾವರಿ ಸಚಿವರು ನೀಡಿದ್ದ ಹೇಳಿಕೆ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಸುಪ್ರೀಂ ಕೋರ್ಟ್​​ನಿಂದ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿರುವ ಬಗ್ಗೆ ಅವರಿಗೆ ಮಾಹಿತಿಯಿಲ್ಲ. ನಾನೂ ಅವರೊಂದಿಗೆ ಮಾತನಾಡಿದ್ದೇನೆ. ಶೀಘ್ರವೇ ದೆಹಲಿಗೆ ತೆರಳಿ ನೀರಾವರಿ ಸಚಿವರ ಭೇಟಿ ಮಾಡುತ್ತೇನೆ. ಮೇಕೆದಾಟು ಯೋಜನೆ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿ ಆರಂಭಿಸಲು ಒಪ್ಪಿಗೆ ಪಡೆಯೋದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

‘ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ’
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದೆ. ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳನ್ನು ನಿಯೋಗ ಸಲ್ಲಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಕನ್ನಡ ಸಿನಿಮಾ ನಿರ್ಮಿಸುವುದೇ ಒಂದು ಸಾಹಸ. ಸಿನಿಮಾ ರಂಗದವರು ಆರ್ಥಿಕ ಸಂಕಷ್ಟದಲ್ಲಿರುವುದು ತಿಳಿದಿರುವ ವಿಷಯ. ಈ ಕುರಿತು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಅಂತಾ ಬೊಮ್ಮಾಯಿ ಹೇಳಿದ್ದಾರೆ.

ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ತಾಕೀತು
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಾರಿಗೊಳಿಸುತ್ತಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನೀಲನಕ್ಷೆ ರೂಪಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಪ್ರಸಕ್ತ ವರ್ಷದ ಕಾರ್ಯಕ್ರಮಗಳು ಮತ್ತು ಅನುದಾನದ ಪ್ರಸ್ತಾವನೆಗಳ ಬಗ್ಗೆ ಪರೀಶೀಲನೆ ನಡೆಸಿದ ಸಚಿವರು, ಗ್ರಾಮೀಣ ಭಾಗದ ಜನರು ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಿದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳಲ್ಲಿ ಅತಿವೃಷ್ಟಿ
ರಾಜ್ಯದ 13ಜಿಲ್ಲೆಗಳ 61ತಾಲೂಕುಗಳನ್ನು ಅತಿವೃಷ್ಟಿ ತಾಲೂಕುಗಳು ಅಂತ ರಾಜ್ಯ ಕಂದಾಯ ಇಲಾಖೆ ಘೋಷಣೆ ಮಾಡಿದೆ. NDRF ಮತ್ತು SDRF ಮಾರ್ಗಸೂಚಿ ಪ್ರಕಾರ ಪರಿಹಾರ ಕಾರ್ಯವನ್ನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ಅತಿಯಾದ ಮಳೆಯಾಗಿತ್ತು. ಇದರಿಂದ ಕೃಷ್ಣ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬಂದಿದ್ದರಿಂದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಹಾಗೆ ಕರಾವಳಿ ಮತ್ತು ಮಲೆನಾಡಲ್ಲೂ ಅತಿಯಾದ ಮಳೆಯಾಗಿ ಪ್ರವಾಹ ಉಂಟಾಗಿತ್ತು.

ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ
ರಾಜ್ಯದಲ್ಲಿ ಮಹಾಮಾರಿ ಕೊರೊನಾ 3ನೇ ಅಲೆ ಭೀತಿ ಹೆಚ್ಚಿರೋದ್ರಿಂದ ರಾಜ್ಯಾದಂತ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.. ಆಗಸ್ಟ್‌ 14 ಮತ್ತು ಆಗಸ್ಟ್‌ 28 ರಂದು ನಿಗದಿಪಡಿಸಲಾಗಿದ್ದ ಪರೀಕ್ಷೆಗಳನ್ನು ಮಂಗಳೂರು ವಿ.ವಿ ಮುಂದೂಡಿದೆ. ಪರೀಕ್ಷೆಗಳ ದಿನಾಂಕಗಳನ್ನು ಮರು ನಿಗದಿಪಡಿಸಿ, ಶೀಘ್ರದಲ್ಲೇ ಪರೀಷ್ಕೃತ ವೇಳಾಪಟ್ಟಿ ಪ್ರಕಟಿಸುವದ್ದಾಗಿ ವಿವಿ ತಿಳಿಸಿದೆ.

‘ಒಬಿಸಿ ಬಿಲ್ ಪಾಸ್ ಆಗಿದ್ದು ಮಹತ್ವದ ನಡೆ’
ಸಂಸತ್​ನ ರಾಜ್ಯಸಭೆ ಅಧಿವೇಶನದಲ್ಲಿ ಒಬಿಸಿ ಬಿಲ್​ಗೆ ಅಂಗೀಕಾರ ಸಿಕ್ಕಿದೆ. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಈ ಬಿಲ್​ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿದ್ದು ದೇಶದ ಪಾಲಿಗೆ ಮಹತ್ವದ ನಡೆ ಎಂದಿದ್ದಾರೆ. ಸಾಂವಿಧಾನಿಕ ಬಿಲ್​ನ 127 ನೇ ತಿದ್ದುಪಡಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪಾಸ್ ಆಗಿದ್ದು ಮಹತ್ವದ ನಡೆ. ಈ ಬಿಲ್​ನಿಂದಾಗಿ ಮುಂದಿನ ದಿನಗಳಲ್ಲಿ ಸಾಮಾಜಿಕ ಸಬಲೀಕರಣ ಸಾಧ್ಯವಾಗಲಿದೆ ಎಂದಿದ್ದಾರೆ.

ಆತ್ಮನಿರ್ಭರ್ ನಾರಿಶಕ್ತಿ ಸಂವಾದದಲ್ಲಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಇಂದು ಆತ್ಮನಿರ್ಭರ್ ನಾರಿಶಕ್ತಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಸಂವಾದದಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮೋದಿ ಪಾಲ್ಗೊಳ್ಳಲಿದ್ದು, ಇಂದು ಮಧ್ಯಾಹ್ನದ ಹೊತ್ತಿಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಬಡ್ತಿ ಪಡೆದ ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರ ಜೊತೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.

ಮೆಸ್ಸಿ ಹೊಸ ಜೆರ್ಸಿ ನಂಬರ್ 30
ಲಿಯೋನೆಲ್ ಮೆಸ್ಸಿ ಎಂದರೆ ಬಾರ್ಸಿಲೋನಾ ಎಂಬಂತಿದ್ದ ಕಾಲ ಈಗ ಬದಲಾಗಿದೆ. ಬಾರ್ಸಿಲೊನಾ ಕ್ಲಬ್ ಸಾಂಗತ್ಯವನ್ನು ಮೆಸ್ಸಿ ಈಗ ತ್ಯಜಿಸಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಮೆಸ್ಸಿ ಸಜ್ಜಾಗಿದ್ದಾರೆ. ಸ್ಪೇನ್‌ನ ಬಾರ್ಸಿಲೋನಾ ಕ್ಲಬ್ ಜತೆಗಿನ 21 ವರ್ಷಗಳ ಸಖ್ಯ ತೊರೆದಿರುವ ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ, ಫ್ರಾನ್ಸ್‌ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್ ಸೇರಿಕೊಂಡಿದ್ದಾರೆ. ಬಾರ್ಸಿಲೊನಾ ತಂಡದಲ್ಲಿ ನಂಬರ್ 10 ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೆಸ್ಸಿ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್ ಪರ ನಂಬರ್ 30 ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಇಂದು ಭಾರತ ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯ
ಇಂದು ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಸ್ಪಿನ್ ಬೌಲರ್ ಹಾಗೂ ಆಲ್‌ರೌಂಡರ್ ಮೋಯಿನ್ ಅಲಿ ಅವರನ್ನು ಇಂಗ್ಲೆಂಡ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಲಾರ್ಡ್ಸ್‌ನಲ್ಲಿ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳನ್ನು ಬಲಿಷ್ಠಗೊಳಿಸುವ ಸಲುವಾಗಿ ಇಂಗ್ಲೆಂಡ್‌ ತನ್ನ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಮೊಯೀನ್‌ ಅಲಿಗೆ ಅವಕಾಶ ಕಲ್ಪಿಸಿದೆ.

ಇಂದು ಒಟಿಟಿಯಲ್ಲಿ ಬಿಡುಗಡೆಯಾಗ್ತಿದೆ ‘ಶೇರ್​ಶಾ’
ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ ಶೇರ್​ಶಾ ಇಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ನಟ ಸಿದ್ಧಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿ ಕ್ಯೂಟ್​ ನಟಿ ಕಿಯಾರಾ ಕಾಣಿಸಿಕೊಳ್ಳುತ್ತಿದ್ದು, ತೆರೆ ಮೇಲೆ ಈ ಜೋಡಿಯ ಮೋಡಿಗೆ ಸಿನಿಮಂದಿ ಕಾತರರಾಗಿದ್ದಾರೆ. ನೆಟ್​​ಫ್ಲಿಕ್ಸ್​ನಲ್ಲಿ ಶೇರ್​ ಶಾ ನಾಳೆ ಬಿಡುಗಡೆಯಾಗುತ್ತಿದ್ದು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್​ ವಿಕ್ರಮ್​ ಭತ್ರಾ ಅವರ ಜೀವನಾಧಾರಿತ ಸಿನಿಮಾ ಇದಾಗಿದ್ದು, ಶೇರ್​ ಶಾ ನೋಡಿ ಪ್ರೇಕ್ಷಕ ಪ್ರಭು ಏನು ಹೇಳ್ತಾನೆ ಅಂತ ಕಾದು ನೋಡಬೇಕಿದೆ.

Source: newsfirstlive.com Source link