ಒಂದು ದಿನವೂ ಗೈರಾಗಲಿಲ್ಲ, ಆದ್ರೂ ರಾಜ್ಯಸಭೆಯಲ್ಲಿ ಮಾತಾಡಲು ಅವಕಾಶ ಸಿಗಲಿಲ್ಲ: ಹೆಚ್‍ಡಿಡಿ ಬೇಸರ

ನವದೆಹಲಿ: ಮೂರು ಕೃಷಿ ಕಾನೂನು, ಬೆಲೆ ಏರಿಕೆ, ಓಬಿಸಿ ತಿದ್ದುಪಡಿ ಮಸೂದೆ, ಪೆಗಾಸಸ್ ಸೇರಿ ಹಲವು ವಿಚಾರಗಳ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಲು ಪ್ರಯತ್ನಪಟ್ಟೆ, ಆದರೆ ಯಾವುದೇ ಚರ್ಚೆಯಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದ್ದಲಗಳ ನಡುವೆ ನಡೆಯುತ್ತಿರುವ ಕಲಾಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನನಗೆ 90 ವರ್ಷ, ವಯೋ ಸಹಜ ಸಮಸ್ಯೆಗಳ ನಡುವೆಯೂ ಒಂದೇ ಒಂದು ಕಲಾಪಕ್ಕೆ ಗೈರಾಗದೇ ಚರ್ಚೆಯಲ್ಲಿ ಭಾಗವಹಿಸಿದ್ದೆ, ಮಾತನಾಡಲು ಪ್ರಯತ್ನಪಟ್ಟೆ. ಆದರೆ ರಾಜ್ಯಸಭೆಯಲ್ಲಿ ನಮ್ಮ ಪಕ್ಷದ ಸಂಖ್ಯೆ ಕಡಿಮೆ ನಾನೊಮ್ಮೆ ಸದಸ್ಯನಾಗಿರುವ ಕಾರಣ ಮಾತನಾಡಲು ಅವಕಾಶವೇ ಸಿಗಲಿಲ್ಲ ಎಂದು ಅವರು ಹೇಳಿದರು.

ಕಲಾಪದಲ್ಲಿ ಯಾವುದೇ ವಿಷಯಗಳು ಚರ್ಚೆಯಾಗಿಲ್ಲ. ಚರ್ಚೆ ಮಾಡಲು ನಮ್ಮ ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷಗಳು ಅವಕಾಶ ಮಾಡಿಕೊಟ್ಟಿಲ್ಲ. ಎಲ್ಲಾ ಪಕ್ಷಗಳ ನಾಯಕರು ಒಟ್ಟಿಗೆ ಸೇರಿ ಚರ್ಚೆ ನಡೆಸಬೇಕು. ಮುಂದಿನ ಅಧಿವೇಶನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶ ಮುಂದಿನ ದಿನಗಳಲ್ಲಿ ಸಿಗಬಹದು, ಅವಕಾಶ ಸಿಕ್ಕರೆ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?

blank

ಇದೇ ವೇಳೆ ಮೋದಿ ಸಂಪುಟದ ಬಗ್ಗೆ ಮಾತನಾಡಿ, ಮೊದಲ ಬಾರಿಗೆ 12 ಮಹಿಳೆಯರಿಗೆ, 8 ಎಸ್ಸಿ, 12 ಎಸ್ಟಿ ಸಮುದಾಯದ ನಾಯಕರಿಗೆ ಮೋದಿ ತಮ್ಮ ಸಂಪುಟದಲ್ಲಿ ಅವಕಾಶ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯವೋ, ಚುನಾವಣೆ ತಂತ್ರವೋ ಗೊತ್ತಿಲ್ಲ. ಆದರೆ ಅದು ಏನೇ ಇದ್ದರೂ ಮೋದಿಯವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ನಾನು ಪ್ರಧಾನಿಯಾಗಿದ್ದಾಗಲು ಇಂತಹದ್ದೇ ಅವಕಾಶ ಸೃಷ್ಟಿಸಿದ್ದೆ ಎಂದರು.

Source: publictv.in Source link