ಕಾಂಗ್ರೆಸ್​​ಗೆ ಉಲ್ಟಾ ಹೊಡೆಯಿತಾ ಆರೋಪ? ಮಹಿಳಾ ಮಾರ್ಷಲ್​​ ಮೇಲೆ ಕೈ ಸಂಸದರ ಹಲ್ಲೆ?

ಕಾಂಗ್ರೆಸ್​​ಗೆ ಉಲ್ಟಾ ಹೊಡೆಯಿತಾ ಆರೋಪ? ಮಹಿಳಾ ಮಾರ್ಷಲ್​​ ಮೇಲೆ ಕೈ ಸಂಸದರ ಹಲ್ಲೆ?

ನವದೆಹಲಿ: ರಾಜ್ಯಸಭೆಯಲ್ಲಿ ಒಬಿಸಿ ಮಸೂದೆ ಮಂಡನೆ ವೇಳೆ ವಿಪಕ್ಷಗಳು ಮಾಡಿದ ಗಲಾಟೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಿಡಿಯೋ ಒಂದನ್ನ ರಿಲೀಸ್ ಆಗಿದೆ. ಈ ವಿಡಿಯೋ ಇದೀಗ ವಿರೋಧ ಪಕ್ಷಗಳನ್ನ ಪೇಚಿಗೆ ಸಿಲುಕಿಸುವಂತೆ ಮಾಡಿದೆ.

ವಿರೋಧ ಪಕ್ಷದ ಆರೋಪವೇನು..?
ನಿನ್ನೆ ರಾಜ್ಯಸಭೆಯಲ್ಲಿ ನಡೆದ ಕೋಲಾಹಲಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್​ ಗಂಭೀರವಾದ ಆರೋಪವನ್ನ ಮಾಡಿತ್ತು. ಅದರಲ್ಲೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮಾತನಾಡಿ.. ರಾಜ್ಯ ಸಭೆ ಕಲಾಪದ ವೇಳೆ ವಿರೋಧ ಪಕ್ಷದ ಸಂಸದ ಮೇಲೆ ಬಿಜೆಪಿ ಆರ್​​ಎಸ್​ಎಸ್​ನವರನ್ನ ಬಿಟ್ಟು ಹಲ್ಲೆ ಮಾಡಿಸಿದೆ ಎಂದಿದ್ದರು.

ಸಂಸತ್ತಿನ ಒಳಗೆ ನಮಗೆ ಮಾತನಾಡಲು ಅವಕಾಶವಿಲ್ಲದ ಕಾರಣ ಇಂದು ನಾವು ನಿಮ್ಮೊಂದಿಗೆ (ಮಾಧ್ಯಮ) ಮಾತನಾಡಲು ಇಲ್ಲಿಗೆ ಬರಬೇಕಾಯಿತು. ಇದು ಪ್ರಜಾಪ್ರಭುತ್ವದ ಕೊಲೆ. ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿಗೆ ಸಂಸದರನ್ನು ಥಳಿಸಲಾಯಿತು. ಇದರಿಂದ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳ್ತಾರೆ. ಆದರೆ ಸದನದ ಕಾರ್ಯಗಳನ್ನು ಖಚಿತಪಡಿಸುವುದು ಅವರ ಜವಾಬ್ದಾರಿಯಾಗಿದೆ ಎಂದಿದ್ದಾರೆ.

Image

ಈ ಬಗ್ಗೆ ಜಂಟಿಯಾಗಿ ಹೇಳಿಕೆಗಳನ್ನ ಬಿಡುಗಡೆ ಮಾಡಿರುವ ವಿರೋಧ ಪಕ್ಷಗಳು.. ಯಾವುದೇ ಮುಂಜಾಗೃತಾ ಕ್ರಮವಿಲ್ಲದೇ ರಾಜ್ಯಸಭೆಯಲ್ಲಿ ನಡೆದುಕೊಳ್ಳಲಾಯಿತು. ವಿರೋಧ ಪಕ್ಷದವರ ಹೋರಾಟವನ್ನ ಹತ್ತಿಕ್ಕಲು ಹೊರಗಿನವರನ್ನ ಕರೆಸಿಕೊಂಡು ಬಂದಿದ್ದರು. ಈ ವೇಳೆ ನಮ್ಮ ಮಹಿಳಾ ಸಂಸದರ ಮೇಲೂ ಹಲ್ಲೆ ನಡೆಸಲಾಗಿದೆ ಅಂತಾ ಆರೋಪಿಸಿವೆ.

ವಿಡಿಯೋ ಬಿಡುಗಡೆ

ಇನ್ನು ಇದಕ್ಕೆ ಪ್ರತಿಯಾಗಿ ನಿನ್ನೆ ಸಂಸತ್​ನಲ್ಲಿ ನಡೆದ ಘಟನೆಯ ವಿಡಿಯೋವನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಬಿಜೆಪಿ ನಾಯಕರು ಆರೋಪಿಸಿರುವ ಪ್ರಕಾರ, ನಾವ್ಯಾರೂ ಸಹ ಹೊರಗಿನವರನ್ನ ಕರೆದುಕೊಂಡು ಬಂದಿಲ್ಲ. ಬದಲಾಗಿ ರಾಜ್ಯಸಭೆಯ ಮಾರ್ಷಲ್ ಮೇಲೆ ವಿಪಕ್ಷಗಳ ಸಂಸಂದರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಹುಲ್ ಗಾಂಧಿ ನಾಯಕತ್ವ ಎತ್ತಿ ತೋರಿಸುತ್ತದೆ
ಇನ್ನು ಕಾಂಗ್ರೆಸ್​ ಹಾಗೂ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಂಬೀತ್ ಪಾತ್ರ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ಬೀದಿಯಲ್ಲಿ ವರ್ತಿಸುವಂತೆ ನಡೆದುಕೊಂಡಿವೆ. ಇದು ವಿರೋಧ ಪಕ್ಷಗಳ ಅರಾಜಕತೆಯನ್ನ ಎತ್ತಿ ತೋರಿಸುತ್ತಿದೆ. ವಿಶೇಷವಾಗಿ ಇದು ರಾಹುಲ್ ಗಾಂಧಿಯ ನಾಯಕತ್ವವನ್ನ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಭಾವುಕರಾದ ವೆಂಕಯ್ಯ ನಾಯ್ಡು
ನಿನ್ನೆ ರಾಜ್ಯಸಭಾ ಕಲಾಪದ ವೇಳೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ಭಾವುಕರಾಗಿದ್ದರು. ರಾಜ್ಯಸಭೆ ಕಲಾಪದ ವೇಳೆ ವಿರೋಧ ಪಕ್ಷದ ನಾಯಕರುಗಳು ಗದ್ದಲ ಹಾಗೂ ಅಶಿಸ್ತಿನ ವರ್ತನೆಯನ್ನ ತೋರಿಸಿದ್ರು. ಕೆಲವು ಸದಸ್ಯರು ಮೇಜಿನ ಮೇಲೆ ಏರಿದಾಗ ಅಧಿಕಾರಿಗಳು ಮತ್ತು ಸದನದ ವರದಿಗಾರರು ಕುಳಿತಿದ್ದರು. ಮತ್ತೊಬ್ಬ ಸಂಸದರು ಅಧ್ಯಕ್ಷರ ಮೇಲೆ ಅಧಿಕೃತ ಕಡತವೊಂದನ್ನು ಎಸೆದಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದ ವೆಂಕಯ್ಯ ನಾಯ್ಡು.. ವರದಿಗಾರರು ಕುಳಿತುಕೊಳ್ಳುವ ಜಾಗವನ್ನು ದೇವಾಲಯದ ಗರ್ಭಗುಡಿ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ವರ್ತನೆಯಿಂದ ರಾಜ್ಯಸಭೆಯ ಎಲ್ಲಾ ಪಾವಿತ್ರ್ಯತೆ ಹಾಳಾಯಿತು, ಕಳೆದ ದಿನ ನಿದ್ರೆಯಿಲ್ಲದೇ ರಾತ್ರಿ ಕಳೆದಿದ್ದೇನೆ ಅಂತಾ ಕಣ್ಣೀರು ಇಟ್ಟಿದ್ದರು.

Source: newsfirstlive.com Source link