ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

ಚಿಕ್ಕಬಳ್ಳಾಪುರ: ಅಧುನಿಕತೆ ಹಾಗೂ ಯಂತ್ರೋಪಕರಣಗಳ ಭರಾಟೆಯಿಂದ ಕೈಮಗ್ಗ ನೇಕಾರಿಕೆ ನೇಪಥ್ಯಕ್ಕೆ ಸರಿದಂತಾಗಿದೆ. ಆದರೂ ಕೈಮಗ್ಗವನ್ನು ಬಿಡದೆ ನೆಚ್ಚಿಕೊಂಡ ಬಡ ನೇಕಾರಗೆ ಈಗ ರಾಜ್ಯಮಟ್ಟದಲ್ಲೇ ಪ್ರಥಮ ಪ್ರಶಸ್ತಿ ಲಭಿಸಿದೆ.

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೋಯಿಪಲ್ಲಿ ಕುಗ್ರಾಮದ ಬಡ ನೇಕಾರ ವೆಂಕಟರವಣ ಅವರು ಕೈ ಮಗ್ಗದ ಮೂಲಕ ನೇಯ್ದ ಅಪ್ಪಟ ರೇಷ್ಮೆ ಸೀರೆ ರಾಜ್ಯದಲ್ಲೇ ಅತ್ಯುತ್ತಮ ರೇಷ್ಮೆ ಸೀರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ರಾಜ್ಯ ಕೈ ಮಗ್ಗ ಜವಳಿ ಇಲಾಖೆ ವತಿಯಿಂದ ನೀಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಸ್ತಿಗಾಗಿ ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ತರಹೇವಾರಿ ರೇಷ್ಮೆ ಸೀರೆಗಳು ಪೈಪೋಟಿ ನಡೆಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ವೆಂಕಟರವಣ ಅವರು ನೇಯ್ದಿರುವ ಸೀರೆಗೆ ಪ್ರಥಮ ಸ್ಥಾನ ಲಭಿಸಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಗೆ ಹಿರಿಮೆ ಹಾಗೂ ನೇಕಾರರಿಗೆ ಕೀರ್ತಿ ತಂದಿದೆ ಎಂದು ಕೈ ಮಗ್ಗ ಹಾಗೂ ಜವಳಿ ಇಲಾಖೆಯ ಶಿವಕುಮಾರ್ ಸಂತಸ ಹಂಚಿಕೊಂಡರು.

ಆಗಸ್ಟ್ 7ರಂದು ವಿಕಾಸಸೌಧದಲ್ಲಿ ನಡೆದ ರಾಷ್ಟ್ರೀಯ ಕೈ ಮಗ್ಗ ಹಾಗೂ ಜವಳಿ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, 2,5000 ನಗದು ಹಾಗೂ ಸ್ಮರಣಿಕೆ ಪ್ರಮಾಣ ಪತ್ರ ನೀಡಿ ವೆಂಕಟರವಣರನ್ನು ಗೌರವಿಸಲಾಗಿದೆ. ಪ್ರಶಸ್ತಿ ಲಭಿಸಿರುವುದು ಸಂತೋಷವಾಗಿದೆ ಎಂದು ಪ್ರಶಸ್ತಿ ಪುರಸ್ಕೃತ ವೆಂಕಟರವಣ ಹೇಳಿದ್ದಾರೆ.

ಎಂಬೋಜ್, ಬ್ರೋಕೆಟ್ ಕುಟ್ಟು ಮೂಲಕ ನೇಯಲಾಗಿರುವ ಈ ಅಪ್ಪಟ ರೇಷ್ಮೆ ಸೀರೆ, ಬಂಗಾರದ ಬಣ್ಣ ಹಾಗೂ ನೆರಳೆ ಬಣ್ಣದಿಂದ ಕೂಡಿದೆ. ಅತ್ತುತ್ತಮ ವಿನ್ಯಾಸ, ವಿಭಿನ್ನ, ಉತ್ತಮ ಗುಣಮಟ್ಟ ಹೊಂದಿರುವ ಬಣ್ಣ ಬಣ್ಣದ ಈ ರೇಷ್ಮೆ ಸೀರೆಗಳು ಪ್ರಥಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿವೆ.

blank

ವೆಂಕಟರವಣ ಕೌಶಲ್ಯದಿಂದ ಪ್ರಥಮ ಸ್ಥಾನ
ಈ ಸೀರೆಗೆ ಪ್ರಥಮ ಪ್ರಶಸ್ತಿ ಬರಲು ಪ್ರಮುಖ ಕಾರಣ ವೆಂಕಟರವಣ, ವೆಂಕಟರವಣರ ಕರಕುಶಲತೆ, ಕೌಶಲ್ಯ, ಸೀರೆ ನೇಯುವ ವಿಧಾನ, ವಿನ್ಯಾಸ, ವಿಭಿನ್ನತೆ ಸೇರಿದಂತೆ ಉತ್ತಮ ಗುಣಮಟ್ಟದಿಂದ ಕೂಡಿರುವ ಕಾರಣ ಈ ಸೀರೆ ಪ್ರಥಮ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ಕಳೆದ 20 ವರ್ಷಗಳಿಂದ ನೇಕಾರಿಕೆ ವೃತ್ತಿಯನ್ನ ಬದುಕಾಗಿಸಿಕೊಂಡಿರುವ ವೆಂಕಟರಮಣರು. ತಮ್ಮ ಅನುಭವ, ಕೌಶಲ್ಯತೆ, ನೈಪುಣ್ಯತೆಯಿಂದ ರಾಜ್ಯದಲ್ಲೇ ವಿಭಿನ್ನವಾದ ಅತ್ಯುತ್ತಮ ಸೀರೆಯನ್ನ ನೇಯ್ದು ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂಬೋಜ್ ಬ್ರೋಕಟ್ ಕುಟ್ಟು ಮಾದರಿಯ ರೇಷ್ಮೆ ಸೀರೆ ಇದಾಗಿದ್ದು, ಸುಮಾರು 900 ಗ್ರಾಂ. ತೂಕವಿದೆ.

blank

Source: publictv.in Source link