ರೈತರಿಗೆ ಪರಿಹಾರದ ಮೊತ್ತ ಹೆಚ್ಚಳಕ್ಕೆ ಮುರುಗೇಶ್ ನಿರಾಣಿ ಮನವಿ

– ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಭೇಟಿಯಾದ ನಿರಾಣಿ
– ಪರಿಹಾರ ಹೆಚ್ಚಳ ಮಾಡಿದರೆ, ಸಾವಿರಾರು ರೈತರಿಗೆ ಅನುಕೂಲ
– ಕೇಂದ್ರದಿಂದ ಸೂಕ್ತ ನ್ಯಾಯ ಒದಗಿಸುವ ಭರವಸೆ

ನವದೆಹಲಿ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ಕೃಷ್ಣ ನದಿಯ ಪ್ರವಾಹದಿಂದಾಗಿ ಕೃಷಿ ಭೂಮಿಯು ಫಲವತ್ತತೆಯನ್ನು ಕಳೆದುಕೊಂಡಿದ್ದು, ರೈತರಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು ನವದೆಹಲಿಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶೋಭಾ ಕರಂದ್ಲಾಜೆಯನ್ನು ಭೇಟಿಯಾದ ನಿರಾಣಿ ಅವರು, ತಕ್ಷಣವೇ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಜಮಖಂಡಿ ತಾಲೂಕಿನ ಉಪವಿಭಾಗದಲ್ಲಿ ಕೃಷ್ಣ ನದಿಯಿಂದ ಪದೇ ಪದೇ ಪ್ರವಾಹ ಉಂಟಾಗುವ ಕಾರಣ, ರೈತರ ಜಮೀನಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತದೆ. ಪರಿಣಾಮ ಸರಿಯಾದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ಒಂದು ಕಡೆ ರೈತರು ಪ್ರವಾಹದಿಂದ ತಮ್ಮ ಬೆಳೆಗಳನ್ನು ನಾಶವಾದರೆ ಮತ್ತೊಂದು ಕಡೆ ಕೃಷಿ ಜಮೀನು ಫಲವತ್ತತೆಯನ್ನು ಕಳೆದುಕೊಂಡಿದ್ದರಿಂದ ಮಣ್ಣಿನ ಸವಕಳಿ ಹೆಚ್ಚಿದೆ. ಇದರಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ತಾಲೂಕಿನ ಒಟ್ಟು 14,051 ಹೆಕ್ಟೇರ್ ಪ್ರದೇಶದಲ್ಲಿ 5,994 ಪ್ರದೇಶವು ಸವಕಳಿಗೆ ತುತ್ತಾಗಿದೆ. ಪ್ರಸ್ತುತ 1 ಹೆಕ್ಟೇರ್ ಗೆ 65,000 ಪರಿಹಾರವನ್ನು ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಸಣ್ಣ, ಅತಿ ಸಣ್ಣ ಮತ್ತು ಕಡಿಮೆ ಆದಾಯ ಹೊಂದಿರುವ ರೈತರಿದ್ದು, ಕೃಷಿಯೇ ಜೀವನದ ಆಧಾರವಾಗಿದೆ. ಸರ್ಕಾರ ನೀಡುತ್ತಿರುವ ಪರಿಹಾರದ ಮೊತ್ತ ಜೀವನ ನಿರ್ವಹಣೆಗೆ ಸಾಕಾಗದ ಕಾರಣ, ಪರಿಹಾರದ ಮೊತ್ತ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ಮನವಿಮಾಡಿಕೊಂಡರು. ಇದನ್ನೂ ಓದಿ: ಯಾರಿಗೆ ಗೌರವ ಕೊಡಬೇಕು ಅನ್ನೋದು ಸಿಟಿ ರವಿಗೆ ಗೊತ್ತಿಲ್ಲ: ಸಿದ್ದರಾಮಯ್ಯ

ಪರಿಶೀಲಿಸಿ ಸೂಕ್ತ ಕ್ರಮ
ನಿರಾಣಿ ಅವರ ಮನವಿಗೆ ಸೂಕ್ತವಾಗಿ ಸ್ಪಂಧಿಸಿದ ಶೋಭಾ ಕರಂದ್ಲಾಜೆ ಅವರು, ರೈತರ ಹಿತಕಾಪಾಡಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂಬ ಭರವಸೆಯನ್ನು ನೀಡಿದ್ದಾರೆ. ಪ್ರತಿವರ್ಷ ಮಳೆಗಾಲದ ವೇಳೆ ಕೃಷ್ಣ ನದಿಯ ಪ್ರವಾಹ ಹಾಗೂ ಹಿನ್ನೀರಿನ ಕಾರಣ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರೈತರಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಬಗ್ಗೆ ಸದ್ಯದಲ್ಲಿಯೇ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸೂಕ್ತ ನ್ಯಾಯ ಒದಗಿಸುವ ಭರವಸೆಯನ್ನು ನೀಡಿದರು.

Source: publictv.in Source link