ಅಫ್ಘಾನಿಸ್ತಾನದ ಶೇ.85 ರಷ್ಟು ಭಾಗ ತಾಲಿಬಾನಿಗಳ ವಶಕ್ಕೆ; ‘ಆಪರೇಷನ್‌ ಏರ್‌ಲಿಫ್ಟ್‌’ ಆರಂಭಿಸಿದ ಭಾರತ

ಅಫ್ಘಾನಿಸ್ತಾನದ ಶೇ.85 ರಷ್ಟು ಭಾಗ ತಾಲಿಬಾನಿಗಳ ವಶಕ್ಕೆ; ‘ಆಪರೇಷನ್‌ ಏರ್‌ಲಿಫ್ಟ್‌’ ಆರಂಭಿಸಿದ ಭಾರತ

ಅಫ್ಘಾನಿಸ್ತಾನ್‌ನಲ್ಲಿ ತಾಲಿಬಾನಿಗಳ ಮದ್ದು ಗುಂಡುಗಳ ಸದ್ದು ತಾರಕಕ್ಕೇರುತ್ತಿದೆ. ಒಂದೊಂದೇ ನಗರಗಳನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಜನರಿಗೆ ಹಿಂಸಾಚಾರ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಭಾರತ ತನ್ನ ದೇಶದ ಪ್ರಜೆಗಳನ್ನು ಏರ್‌ಲಿಫ್ಟ್‌ ಮಾಡುತ್ತಿದೆ.

11 ಸೆಪ್ಟೆಂಬರ್‌ 2001ರಲ್ಲಿ ಅಮೆರಿಕದ ಅವಳಿ ಗೋಪುರದ ಮೇಲೆ ದಾಳಿ ನಡೆಸಲಾಗುತ್ತದೆ. ಅಮೆರಿಕದ ವಿಮಾನವನ್ನೇ ಅಪಹರಿಸಿಕೊಂಡು ಎರಡು ಗೋಪುರಗಳಿಗೆ ವಿಮಾನ ನುಗ್ಗಿಸಲಾಗುತ್ತದೆ. ಈ ಕೃತ್ಯವನ್ನು ಅಲ್‌-ಕೈದಾ ಭಯೋತ್ಪಾದಕರು ಮಾಡಿರುತ್ತಾರೆ. ಹೀಗಾಗಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಿದ್ದ ಬಿನ್‌ ಲಾಡೆನ್‌ ಬೇಟೆಗೆ ಅಮೆರಿಕ ಸೇನೆ ಅಫ್ಘಾನಿಸ್ತಾನಕ್ಕೆ ನುಗ್ಗುತ್ತದೆ.

blank

ಶಂಕೆ ಇರುವ ಸ್ಥಳಗಳಲ್ಲಿ ಬಾಂಬ್‌ ದಾಳಿ ನಡೆಸುತ್ತದೆ. ಅಫ್ಘಾನಿಸ್ತಾನದ ಇಂಚಿಂಚೂ ಜಾಗವನ್ನು ಜಾಲಾಡುತ್ತದೆ. ಆದ್ರೆ, ಎಲ್ಲಿಯೂ ಲಾಡೆನ್‌ ಪತ್ತೆಯಾಗುವುದಿಲ್ಲ. ಅಮೇಲೆ ಪಾಕಿಸ್ತಾನದಲ್ಲಿ ಲಾಡೆನ್‌ ಅಡಗಿರುವುದನ್ನು ಪತ್ತೆ ಮಾಡುತ್ತದೆ. 2 ಮೇ 2011 ರಂದು ರಾತ್ರೋ ರಾತ್ರಿ ಲಾಡೆನ್‌ ಕಥೆ ಮುಗಿಸುತ್ತದೆ. ಆದ್ರೆ, ಅಂದು ಅಫ್ಘಾನಿಸ್ತಾನಕ್ಕೆ ನುಗ್ಗಿದ ಅಮೆರಿಕ ಸೇನೆ ತಾಲಿಬಾನಿಗಳಿಂದ ಅಫ್ಘಾನ್‌ ಪ್ರಜೆಗಳನ್ನು ರಕ್ಷಿಸಿತ್ತು.

ಅಫ್ಘಾನಿಸ್ತಾನಿಗಳು ಸ್ವತಂತ್ರವಾಗಿ ಬದುಕುವಂತೆ ಮಾಡಿತ್ತು. ಆದ್ರೆ, ಯಾವಾಗ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ಹಿಂದೆ ಸರಿಯಿತೋ ತಾಲಿಬಾನಿಗಳ ಅಟ್ಟಹಾಸ ಮತ್ತೆ ಆರಂಭವಾಯಿತು. ಇದೀಗ ಅದು ತಾರಕ್ಕಕೇರಿದೆ. ಪರಿಣಾಮ ಭಾರತ ತನ್ನ ಪ್ರಜೆಗಳನ್ನು ಏರ್‌ಲಿಫ್ಚ್‌ ಮೂಲಕ ಕರೆಯಿಸಿಕೊಳ್ಳುತ್ತಿದೆ.

ಆಪರೇಷನ್‌ ಏರ್‌ಲಿಫ್ಟ್‌ ಆರಂಭಿಸಿದ ಭಾರತ
ಭಾರತೀಯರ ಕರೆತರಲು ವಿಶೇಷ ವಿಮಾನ ವ್ಯವಸ್ಥೆ

ಅಫ್ಘಾನಿಸ್ತಾನ್‌ನಲ್ಲಿ ತಾಲಿಬಾನಿಗಳ ಅಟ್ಟಹಾಸ ಕೇವಲ ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಮಾರಕವಾಗಿದೆ. ಅಫ್ಘಾನ್‌ನ ಒಂದೊಂದೆ ಜಿಲ್ಲೆಗಳನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ತಾಲಿಬಾನಿಗಳೇ ಹೇಳಿಕೊಳ್ಳುವಂತೆ ಸುಮಾರು 85 ರಷ್ಟು ಭಾಗವನ್ನು ಅವರು ವಶಪಡಿಸಿಕೊಂಡಿದ್ದಾರೆ. ತಾವು ವಶಪಡಿಸಿಕೊಂಡ ಸ್ಥಳಗಳಲ್ಲಿ ವಿಚಿತ್ರ ವಿಚಿತ್ರ ಕಾಯ್ದೆಗಳನ್ನು ಜನರ ಮೇಲೆ ಹೇರುತ್ತಿದ್ದಾರೆ. ಅವರು ಹೇಳಿದ ಮೇಲೆ ಕಾನೂನು ಪಾಲನೆ ಮಾಡಲೇಬೇಕು. ಒಮ್ಮೆ ಪಾಲನೆ ಮಾಡಿಲ್ಲ ಅಂದ್ರೆ ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತ ತನ್ನ ಪ್ರಜೆಗಳನ್ನು ಏರ್‌ ಲಿಫ್ಟ್‌ ಮಾಡಲು ಮುಂದಾಗಿದೆ. ವಿಶೇಷ ವಿಮಾನದ ಸೌಲಭ್ಯವನ್ನು ಕಲ್ಪಿಸಿ ಕರೆತರುತ್ತಿದೆ.

 

ಅಫ್ಘಾನಿಸ್ತಾನ್‌ನಲ್ಲಿ ಸಿಲುಕಿದ್ದಾರೆ ಭಾರತದ 1500 ಜನ
ಮಜರ್‌-ಇ-ಶರೀಫ್‌ನಿಂದ ಏರ್‌ಲಿಫ್ಟ್‌
ಎಲ್ಲರೂ ಭಾರತಕ್ಕೆ ವಾಪಸ್‌ ಆಗುವಂತೆ ಆದೇಶ

ವಿವಿಧ ಕಂಪನಿಗಳ ಕೆಲಸ ಮೇಲೆ ಭಾರತೀಯರು ಅಫ್ಘಾನಿಸ್ತಾನ್‌ನಲ್ಲಿ ವಾಸವಾಗಿದ್ರು. ಸುಮಾರು 1500 ಜನರು ಅಫ್ಘಾನ್‌ನ ವಿವಿಧೆಡೆ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಅವರನ್ನೆಲ್ಲಾ ಏರ್‌ಲಿಫ್ಟ್‌ ಮಾಡಿ ಭಾರತಕ್ಕೆ ಕರೆತರುವ ಕೆಲಸ ಆರಂಭವಾಗಿದೆ. ಆರಂಭದಲ್ಲಿ ಭಾರತ ಕಾದು ನೋಡುವ ತಂತ್ರವನ್ನು ಅನುಸರಿಸಿತ್ತು. ತಾಲಿಬಾನಿಗಳು ಮತ್ತು ಅಫ್ಘಾನ್‌ ಸರ್ಕಾರದ ನಡುವೆ ಮಾತುಕತೆ ಆರಂಭವಾಗಿತ್ತು. ಹೀಗಾಗಿ ಮಾತುಕಥೆ ಸಫಲವಾದರೆ ಹಿಂಸಾಚಾರಕ್ಕೆ ತಡೆ ಬೀಳಬಹುದು ಅಂದುಕೊಂಡಿತ್ತು.

ಆದ್ರೆ, ಮಾತುಕಥೆ ಫಲ ನೀಡಲಿಲ್ಲ. ಅಫ್ಘಾನಿಸ್ತಾನ ಮತ್ತು ತಾಲಿಬಾನಿಗಳ ನಡುವಿನ ಘರ್ಷಣೆ ಮತ್ತಷ್ಟು ತಾರಕಕ್ಕೇರಿತ್ತು. ಇಷ್ಟೇ ಅಲ್ಲ, ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್‌ನ ಸುತ್ತಮುತ್ತಲಿನ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಅದರಲ್ಲಿಯೂ ಅಫ್ಘಾನ್‌ನ ನಾಲ್ಕನೇ ದೊಡ್ಡ ನಗರವಾಗಿರೋ ಮಜರ್‌-ಇ-ಶರೀಫ್‌ ಕೂಡ ತಾಲಿಬಾನಿಗಳ ವಶಕ್ಕೆ ಸಿಗುತ್ತಿದೆ. ಇದೇ ಕಾರಣಕ್ಕೆ ಮಜರ್‌-ಶರೀಫ್‌ನಿಂದ ಭಾರತೀಯರನ್ನು ಕರೆತರಲು ಭಾರತ ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಿತ್ತು. ಎಲ್ಲಾ ಭಾರತೀಯರು ದೇಶಕ್ಕೆ ವಾಪಸ್‌ ಆಗುವಂತೆ ಆದೇಶ ಹೊರಡಿಸಿತ್ತು.blank

ಮೊದಲೇ ಎಚ್ಚರಿಕೆ ನೀಡಿತ್ತು ಭಾರತ.
ದೂತವಾಸ ಕಚೇರಿ ಸಂಪರ್ಕದಲ್ಲಿರುವಂತೆ ಸೂಚನೆ ನೀಡಿತ್ತು
ಪರಿಸ್ಥಿತಿ ಕೈಮೀರುತ್ತಿದ್ದಂತೆ ವಿಶೇಷ ವಿಮಾನದ ವ್ಯವಸ್ಥೆ

ಅಮೆರಿಕ ಸೇನೆ ವಾಪಸ್‌ ಆದ ನಂತರದ ದಿನದಲ್ಲಿ ಭಾರತೀಯರಿಗೆ ಜಾಗೃತೆಯಿಂದ ಇರುವಂತೆ ಭಾರತ ಸೂಚನೆ ನೀಡಿತ್ತು. ಸುರಕ್ಷಿತ ಸ್ಥಳದಲ್ಲಿ ಇರಿ, ಸಾಧ್ಯವಾದರೆ ಭಾರತಕ್ಕೆ ವಾಪಸ್‌ ಆಗಿ ಅಂತಲೂ ಹೇಳಿತ್ತು. ಹಾಗೇ ಪ್ರತಿಯೊಬ್ಬರು ಭಾರತೀಯ ದೂತವಾಸ ಕಚೇರಿ ಸಂಪರ್ಕದಲ್ಲಿ ಇರುವಂತೆ ತಿಳಿಸಿತ್ತು. ಇದೀಗ ತಾಲಿಬಾನಿಗಳ ಮದ್ದು ಗುಂಡುಗಳ ಸದ್ದು ನಿಲ್ಲುವುದಿಲ್ಲ ಅಂತ ಭಾರತಕ್ಕೆ ತಿಳಿದಿದೆ.
ಪರಿಸ್ಥಿತಿ ಕೈಮೀರುತ್ತಿರುವುದು ಅರಿವಿಗೆ ಬಂದಿದೆ. ಹೀಗಾಗಿಯೇ ಭಾರತ ತನ್ನ ದೇಶದ ಪ್ರಜೆಗಳನ್ನು ವಾಪಸ್‌ ಕರೆಯಿಸಿಕೊಳ್ಳಲು ನಿರ್ಧರಿಸಿದೆ. ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ ಭಾರತಕ್ಕೆ ಹೊರಡಿ ಎಂದು ದೂತವಾಸ ಕಚೇರಿ ಭಾರತೀಯ ಪ್ರಜೆಗಳಿಗೆ ತಿಳಿಸಿದೆ. ವಿವಿಧ ಕಂಪನಿಗಲ್ಲಿ ಕೆಲಸ ಮಾಡುತ್ತಿದ್ದವರು ವಿಶೇಷ ವಿಮಾನದಲ್ಲಿ ಭಾರತಕ್ಕೆ ಬರುತ್ತಿದ್ದಾರೆ.

ಬಿಗಿ ಉಡುಪು ಹಾಕಿದ್ದಕ್ಕೆ ಯುವತಿಯನ್ನು ಕೊಂದ ತಾಲಿಬಾನಿಗಳು?
ಮಹಿಳೆಯರು ಒಬ್ಬರೇ ಹೊರ ಹೋಗದಂತೆ ಆದೇಶ
ಪುರುಷರು ಕಡ್ಡಾಯವಾಗಿ ಗಡ್ಡ ಬಿಡುವಂತೆ ಸೂಚನೆ
ತಾಲಿಬಾನಿಗಳು ಹೇಳಿದ್ದೇ ಕಾನೂನು, ಉಲ್ಲಂಘನೆಯಾದ್ರೆ ಗುಂಡೇಟು

ಹೌದು, ಅಫ್ಘಾನಿಸ್ತಾನದ ಶೇ.85 ರಷ್ಟು ಭಾಗವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಹಾಗೇ ತಾವು ವಶಪಡಿಸಿಕೊಂಡ ಪ್ರಾಂತಗಳಲ್ಲಿ ತಮ್ಮದೇ ಕಾನೂನು ಹೇರುತ್ತಿದ್ದಾರೆ. ಅವರು ಹೇಳಿದ ಮೇಲೆ ಮುಗಿಯಿತು. ಅದನ್ನು ಅಲ್ಲಿಯ ಜನ ಪಾಲಿಸಲೇಬೇಕು. ಒಮ್ಮೆ ಪಾಲಿಸಿಲ್ಲ ಅಂದ್ರೆ ಗುಂಡೇಟು ಬೀಳುತ್ತೆ.

ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ; ಭಾರತೀಯರಿಗೆ ತತ್​ಕ್ಷಣವೇ ಅಫ್ಘಾನ್​ ತೊರೆಯುವಂತೆ ರಾಯಭಾರಿ ಕಚೇರಿ ಸೂಚನೆ

ಅವರು ಹೊರಡಿಸಿರೋ ಆದೇಶ ಪ್ರಕಾರ ಮಹಿಳೆಯರು ಒಬ್ಬರೇ ಹೊರಹೋಗುವಂತಿಲ್ಲ, ಒಮ್ಮೆ ಹೊರಹೋಗಬೇಕು ಅಂದ್ರೆ ಪುರುಷರ ರಕ್ಷಣೆಯಲ್ಲಿಯೇ ಹೋಗಬೇಕು. ರಾತ್ರಿ ವೇಳೆ ಮಹಿಳೆಯರು ಓಡಾಡುವಂತೆ ಇಲ್ಲ. ಪುರುಷರ ಗಡ್ಡ ಬಿಡುವುದು ಕಡ್ಡಾಯ ಅಂತ ತಿಳಿಸಿದ್ದಾರೆ.ಇತ್ತೀಚೆಗೆ ಮಹಿಳೆಯೊಬ್ಬಳು ಬಿಗಿ ಉಡುಪು ಧರಿಸಿ ಹೋರಗೆ ಹೋಗಿದ್ದಾರೆ. ಅವರನ್ನು ಗುಂಡಿತ್ತು ಕೊಲ್ಲಲಾಗಿದೆ. ಆದ್ರೆ, ಈ ಕೃತ್ಯವನ್ನು ತಾವು ಮಾಡಿಲ್ಲ ಅಂತ ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ಅಫ್ಘಾನ್‌ ಸರ್ಕಾರ ಇದು ತಾಲಿಬಾನಿಗಳದ್ದೇ ಕೃತ್ಯ ಅಂತ ತಿಳಿಸಿದೆ.

blank

ತಾಲಿಬಾನಿಗಳ ಉಪಟಳ ಇಷ್ಟಕ್ಕೆ ಸೀಮಿತವಾಗಿಲ್ಲ. ಅವರ ಪ್ರಕಾರ ಹಾಸ್ಯ ಮಾಡಿ ಜನರನ್ನು ನಗಿಸುವುದು ನಿಷೇಧವಂತೆ. ಅದೇ ಕಾರಣಕ್ಕೆ ಇತ್ತೀಚೆಗೆ ಕಂದಹಾರ್‌ ಜನಪ್ರಿಯ ಹಾಸ್ಯನಟ ನಝರ್‌ ಮೊಹಮ್ಮದ್‌ ಅವರನ್ನು ಕೊಲ್ಲಲಾಗಿತ್ತು. ಕೊಲೆಗೂ ಮುನ್ನ ನೀಡಿರುವ ಹಿಂಸೆಯ ವಿಡಿಯೋ ಭಾರೀ ವೈರಲ್‌ ಆಗಿತ್ತು. ಈ ಬಗ್ಗೆ ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅನಂತರದ ದಿನದಲ್ಲಿ ದೊಡ್ಡ ಪ್ರಮಾಣದಲ್ಲಿ ಅಫ್ಘಾನ್‌ ಸೇನೆ ತಾಲಿಬಾನಿಗಳ ಮೇಲೆ ತಿರುಗಿ ಬಿದ್ದಿತ್ತು.

ಅಫ್ಘಾನ್‌ ಸೇನೆಯಿಂದ ನಡೆಯಿತು ಏರ್‌ಸ್ಟ್ರೈಕ್‌
ಅಫ್ಘಾನ್‌ ಸೇನೆ, ತಾಲಿಬಾನಿಗಳ ನಡುವೆ ಭಾರೀ ಕಾಳಗ
ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಿದ ಅಫ್ಘಾನ್‌ ಸೇನೆ

ಅಮೆರಿಕ ಸೇನೆ ವಾಪಸ್‌ ಹೊಗುತ್ತಿದ್ದಂತೆ ಅಫ್ಘಾನಿಸ್ತಾನ್‌ ಸೇನೆ ತಾಲಿಬಾನಿಗಳ ವಿರುದ್ಧ ಹೋರಾಟ ಮಾಡುತ್ತಿತ್ತು. ಆದ್ರೆ, ತಾಲಿಬಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೇಲುಗೈ ಸಾಧಿಸುತ್ತಿದ್ರು. ಇನ್ನೇನು ಸಂಪೂರ್ಣ ಅಫ್ಘಾನಿಸ್ತಾನ್‌ ತಾಲಿಬಾನಿಗಳ ವಶಕ್ಕೆ ಸಿಗುತ್ತೆ ಅನ್ನೋ ಹಂತ ತಲುಪಿದೆ. ಹೀಗಾಗಿಯೇ ಅಫ್ಘಾನ್‌ ಸೇನೆ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಿದೆ. ಇದರ ಅಂಗವಾಗಿಯೇ ನಡೆಯಿತು ಏರ್‌ಸ್ಟ್ರೈಕ್‌. ಹೌದು, ತಾಲಿಬಾನಿಗಳ ಶಿಬಿರಗಳ ಮೇಲೆ ವೈಮಾನಿಕದಾಳಿಯನ್ನು ತೀವ್ರಗೊಳಿಸಿದೆ. ಹೀಗಾಗಿ ಇತ್ತೀಚೆಗೆ ನಡೆದ ಏರ್‌ಸ್ಟ್ರೈಕ್‌ನಿಂದ ಸುಮಾರು 500 ಕ್ಕೂ ಹೆಚ್ಚಿನ ತಾಲಿಬಾನಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಒಂದೇ ಮಾತದಲ್ಲಿ ಹೇಳ್ಬೇಕು ಅಂದ್ರೆ, ಎರಡೂ ಪಡೆಗಳ ನಡುವೆ ರೋಚಕ ಕಾಳಗ ನಡೆಯುತ್ತಿದೆ.

ವಿಶ್ವದಲ್ಲಿಯೇ ಅತೀ ದೊಡ್ಡ ಏರ್‌ ಲಿಫ್ಟ್‌ ಮಾಡಿದ ಭಾರತ
ಕೊರೊನಾ ಸಂಕಷ್ಟದಲ್ಲಿ ಸಿಲುಕಿದ 2 ಲಕ್ಷ ಜನರ ಏರ್‌ಲಿಫ್ಟ್‌
ಗಲ್ಫ್‌ ಯುದ್ಧದಲ್ಲಿ 1.70 ಲಕ್ಷ ಜನರ ಏರ್‌ಲಿಫ್ಟ್‌ ಮಾಡಲಾಗಿತ್ತು

ಮೂಲಗಳ ಪ್ರಕಾರ ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ಸಂಖ್ಯೆ 1500 ಮಾತ್ರ ಎನ್ನಲಾಗಿದೆ. ಇವರನ್ನು ಏರ್‌ಲಿಫ್ಟ್‌ ಮೂಲಕ ಭಾರತಕ್ಕೆ ಕರೆತರುವ ಕೆಲಸ ನಡೆಯುತ್ತಿದೆ. ಆದ್ರೆ, ಈ ಏರ್‌ ಲಿಫ್ಟ್‌ ಭಾರತಕ್ಕೆ ಏನೇನೂ ಅಲ್ಲ. ಹೌದು, ಜಗತ್ತಿನಲ್ಲಿಯೇ ಅತೀ ದೊಡ್ಡ ಏರ್‌ ಲಿಫ್ಟ್‌ ಮಾಡಿದ ಖ್ಯಾತಿ ಭಾರತಕ್ಕಿದೆ. ಹೌದು, 2020ರಲ್ಲಿ ಕೊರೊನಾ ಸೋಂಕು ಆರಂಭವಾದಾಗ ಜಗತ್ತಿನಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿತ್ತು.

ಅನೇಕ ದೇಶಗಳಲ್ಲಿ ಭಾರೀ ಕಟ್ಟು ನಿಟ್ಟಿನ ನಿರ್ಬಂಧ ಹೇರಲಾಗಿತ್ತು. ಆದ್ರೆ, ವಿದೇಶದಲ್ಲಿ ಸಿಲುಕಿದ ಸುಮಾರು 2 ಲಕ್ಷ ಜನ ಭಾರತಕ್ಕೆ ಬರಲು ಮುಂದಾಗಿದ್ದರು. ಅವರನ್ನು ಏರ್‌ಲಿಫ್ಟ್‌ ಮೂಲಕ ಭಾರತ ಕರೆ ತಂದಿತ್ತು. ಅದು, ಗತ್ತಿನಲ್ಲಿಯೇ ನಡೆದ ಅತೀ ದೊಡ್ಡ ಏರ್‌ ಲಿಫ್ಟ್‌ ಎಂದು ದಾಖಲಾಗಿದೆ.

blank

ಇದಕ್ಕೂ ಮುನ್ನ ಭಾರತ ಗಲ್ಫ್‌ ಯುದ್ಧದ ಸಮಯದಲ್ಲಿ ಮಾಡಿದ್ದ ಏರ್‌ಲಿಫ್ಟ್‌ ಅತೀ ದೊಡ್ಡ ಏರ್‌ಲಿಫ್ಟ್‌ ಎಂದು ಕರೆಯಿಸಿಕೊಳ್ಳುತ್ತಿತ್ತು. ಹೌದು, ಅದು 1990-1991ರ ಅವಧಿಯಲ್ಲಿಯಾಗಿತ್ತು. 1990ರಲ್ಲಿ ಕುವೈತ್‌ ತೈಲ ಉತ್ಪಾದನೆ ಕಡಿಮೆ ಮಾಡುವಂತೆ ಇರಾಕ್‌ ಸೂಚಿಸಿತ್ತು. ಆ ಮೂಲಕ ಪೆಟ್ರೋಲ್‌, ಡೀಸೆಲ್‌ ಕೃತಕ ಅಭಾವ ಸೃಷ್ಟಿಸುವುದು ವಿಶ್ವದಲ್ಲಿ ತೈಲ ಬೆಲೆ ಏರಿಕೆಯಾಗುವಂತೆ ಮಾಡಬೇಕು ಅನ್ನೋದು ಇರಾಕ್‌ ಪ್ಲಾನ್‌ ಆಗಿತ್ತು. ಆದ್ರೆ, ಕುವೈತ್‌ ಹಾಗೆ ಮಾಡಲು ಒಪ್ಪಲಿಲ್ಲ.

ಇರಾಕ್‌ ಅಧ್ಯಕ್ಷ ಸದ್ದಾಂ ಹುಸೈನ್‌ ಕುವೈತ್‌ ಮೇಲೆ ದಾಳಿ ನಡೆಸುತ್ತಾರೆ. ಅಂತಹ ಸಂದರ್ಭದಲ್ಲಿ ಕುವೈತ್‌ನಲ್ಲಿ ಸಿಲುಕಿದ ಸುಮಾರು 1.70 ಲಕ್ಷ ಮಂದಿಯನ್ನು ಭಾರತ ಏರ್‌ಲಿಫ್ಟ್‌ ಮೂಲಕ ಕರೆತಂದಿತ್ತು. ಇದೇ ಕಥೆಯನ್ನು ಆದರಿಸಿ ಹಿಂದಿಯಲ್ಲಿ ಅಕ್ಷಯ್‌ ಕುಮಾರ್‌ ನಟನೆಯ ಏರ್‌ಲಿಫ್ಟ್‌ ಚಲನಚಿತ್ರ ನಿರ್ಮಾಣವಾಗಿದ್ದನ್ನ ನಾವು ಸ್ಮರಿಸಬಹುದು. ಅದೆಲ್ಲಾ ಏನೇ ಇದ್ರೂ ಸದ್ಯ ಭಾರತೀಯರನ್ನ ಸುರಕ್ಷಿತವಾಗಿ ಕರೆತರಲಾಗುತ್ತಿದೆ. ಇದೇ ಸಮಾಧಾನಕರ ಸಂಗತಿ.

ಜಗತ್ತಿನ ಯಾವುದೇ ಭಾಗದಲ್ಲಿ ಭಾರತೀಯ ಪ್ರಜೆಗಳು ಅಪಾಯಕ್ಕೆ ಸಿಲುಕಿರಲಿ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಕೆಲಸವನ್ನು ಭಾರತ ಮಾಡುತ್ತಿದೆ. ಇದೀಗ ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬ ಭಾರತೀಯರನ್ನು ಸುರಕ್ಷಿತವಾಗಿ, ಯಶಸ್ವಿಯಾಗಿ ಕರೆತರಲಿ ಅಂತ ಆಶಿಸೋಣ.

 

Source: newsfirstlive.com Source link