ವಲಸಿಗರಿಗೆ ಕಾಂಗ್ರೆಸ್ ಟಿಕೆಟ್ ಇಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಈ ಬಾರಿ ಮಹಾನಗರ ಪಾಲಿಕೆಯ ಚುನಾವಣೆ ಕಾವು ತೀವ್ರತರವಾಗಿದ್ದು, ಪ್ರಸ್ತುತ ಪಕ್ಷಾಂತರಿಗಳ ಪರ್ವ ಶುರುವಾಗಿದೆ. ಇದೇ ವೇಳೆ ವಲಸಿಗರಿಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳುವ ಮೂಲಕ ಶಾಕ್ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿಗರಿಗೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಸಮಿತಿ ನಿರ್ಧರಿಸಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಾರುಪಥ್ಯ ಸ್ಥಾಪಿಸಲು ಪಕ್ಷ ಸೂತ್ರಗಳನ್ನು ಹೆಣಿದಿದೆ ಎಂದು ಸುಳಿವು ನೀಡಿದರು.

ಕಳೆದ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್, ಮಹಾನಗರ ಪಾಲಿಕೆಯೆಂದರೆ ತಮ್ಮ ಜೀವ ಎಂಬಂತೆ ಕಾಪಾಡಿಕೊಂಡು ಬಮದಿದ್ದರು. ಮಾಜಿ ಸಚಿವರಾಗಿದ್ದ ದಿ.ಖಮರುಲ್ ಇಸ್ಲಾಂ ಅವರು ಮಹಾನಗರ ಪಾಲಿಕೆಯ ಟಿಕೆಟ್ ನೀಡುವಲ್ಲಿ ಯಾರೂ ಮೂಗು ತೂರಿಸಬಾರದು, ಬೇಕಿದ್ದರೆ ಶಿಫಾರಸು ಮಾಡಿ, ಗೆಲ್ಲುವ ಯೋಗ್ಯ ಅಭ್ಯರ್ಥಿಯಾಗಿದ್ದರೆ ಅವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ ಎನ್ನುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆ ಎಷ್ಟು ಬಾರಿ ಮಹಾನಗರಪಾಲಿಕೆಗೆ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತಿತ್ತು.

ಈಗ ಬದಲಾದ ಸನ್ನಿವೇಶದಲ್ಲಿ ಖಮರುಲ್ ಇಸ್ಲಾಂ ಇಲ್ಲದ ಪಾಲಿಕೆ ಎಂಬಾಂತಾಗಿದೆ. ಹೀಗಾಗಿ ಮತ್ತೆ ಕಾಂಗ್ರೆಸ್ ಪಾಲಿಕೆಯ ಚುಕ್ಕಾಣಿ ಹಿಡಿಯಲು ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡುತ್ತಿದ್ದು, ಗೆಲುವಿನ ಕಾರ್ಯತಂತ್ರವನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ರೂಪಿಸುತ್ತಿದ್ದಾರೆ.

Source: publictv.in Source link