ಜಮೀನಿಗೆ ಅಕ್ರಮ ವಿದ್ಯುತ್ ತಂತಿ ಅಳವಡಿಕೆ- ಶಾಕ್‍ನಿಂದ ಮಹಿಳೆ, ಹಸು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ದನಕರುಗಳು ಬರಬಾರದು ಎಂದು ಜಮೀನಿಗೆ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಶಾಕ್‍ನಿಂದ ಮಹಿಳೆ ಹಾಗೂ ಹಸು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು 56 ವರ್ಷದ ಶಾರದಮ್ಮ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕಳೆ ಕೀಳುತ್ತಿದ್ದ ಮೃತ ಶಾರದಮ್ಮ ಹಸುವನ್ನ ಜಮೀನಿನ ಒಂದು ಭಾಗದ ಬದುವಿನಲ್ಲಿ ಕಟ್ಟಿಹಾಕಿದ್ದರು. ಮೇಯುತ್ತಾ ಹೊರಟ ಹಸು ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದೆ. ಹಸು ಬಿದ್ದಿರುವುದನ್ನ ಗಮನಿಸಿದ ಶಾರದಮ್ಮ ಹಸು ಕರೆಂಟ್ ಶಾಕ್‍ನಿಂದ ಸತ್ತಿದೆ ಎಂದು ತಿಳಿಯದೆ ಏಕೆ ಎಂದು ನೋಡಲು ಹೋದಾಗ ಆಕೆ ಕೂಡ ತಂತಿ ಬೇಲಿಯನ್ನ ಹಿಡಿದುಕೊಂಡು ವಿದ್ಯುತ್ ಶಾಕ್‍ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಳಗ್ಗೆಯಿಂದ ತುಂತುರು ಮಳೆ ಬರುತ್ತಿದ್ದು ನೆಲ ಕೂಡ ಹಸಿ ಇತ್ತು. ವಿದ್ಯುತ್ ತಂತಿ ಮುಟ್ಟಿದ ಕೂಡಲೇ ಶಾಕ್ ನಿಂದ ಶಾರದಮ್ಮ ಹಾಗೂ ಹಸು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನ ಗಮನಿಸಿದ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು, ಕೂಡಲೇ ಓಡಿ ಬಂದು ವಿದ್ಯುತ್ ಸಂಪರ್ಕ ತೆಗೆದಿದ್ದಾರೆ. ವಿದ್ಯುತ್ ತಂತಿಯನ್ನು ಹಿಡಿದಿದ್ದ ಶಾರದಮ್ಮಗೆ ಕೋಲಿನಿಂದ ತಳ್ಳಿದ್ದಾರೆ. ಆದರೆ ಅಷ್ಟರಲ್ಲಿ ಶಾರದಮ್ಮ ಹಾಗೂ ಹಸು ಸಾವನ್ನಪ್ಪಿದ್ದರು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.

ಮೃತ ಶಾರದಮ್ಮಗೆ 20 ವರ್ಷದ ಮಗನಿದ್ದಾನೆ. ಕಳೆದ ಏಳು ವರ್ಷದ ಹಿಂದೆ ಶಾರದಮ್ಮ ಪತಿ ಕೂಡ ಅಪಘಾತದಿಂದ ಸಾವನ್ನಪ್ಪಿದ್ದರು. ಇಂದು ತಾಯಿ ಕೂಡ ಸಾವನ್ನಪ್ಪಿದ್ದಾರೆ. ಅಪ್ಪ-ಅಮ್ಮನನ್ನ ಕಳೆದುಕೊಂಡ ಮಗ ಅನಾಥನಾಗಿದ್ದಾನೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: publictv.in Source link