ಮರ ಕಡಿದು ಪರಿಸರ ಶಾಲೆ ಮಾಡುತ್ತಿದೆ ಖಾಸಗಿ ಸಂಸ್ಥೆ- ಗ್ರಾಮಸ್ಥರ ಅಕ್ರೋಶ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಆರಂಭವಾದ ಭಾರೀ ಕುಸಿತದಂತಹ ಘಟನೆಗಳು ಮತ್ತೆ ಮರುಕಳುಹಿಸುತ್ತಲೇ ಇವೆ. ಇದರ ನಡುವೆಯೇ ಮೊಬೀಯಸ್ ಫೌಂಡೇಷನ್ ಹತ್ತಾರು ಎಕರೆ ಪ್ರದೇಶದಲ್ಲಿ ನೂರು ಮರಗಳನ್ನು ಕಡಿದು ಅಂತರಾಷ್ಟ್ರೀಯ ಮಟ್ಟದ ಪರಿಸರ ವಿಜ್ಞಾನ ಶಾಲೆಯನ್ನು ಆರಂಭಿಸಲು ಹೊರಟಿದೆ. ಇದಕ್ಕೆ ಕೊಡಗಿನ ಪರಿಸರವಾದಿಗಳು ಮತ್ತು ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಮೊಬೀಯಸ್ ಫೌಂಡೇಷನ್ ಮಡಿಕೇರಿ ತಾಲೂಕಿನ ಹೊಸಕೇರಿಯ ಬೆಟ್ಟದ ಮೇಲೆ ಬರೋಬ್ಬರಿ 30 ಎಕರೆ ಪ್ರದೇಶದಲ್ಲಿ ಅಂತರಾಷ್ಟ್ರೀಯ ಶಾಲೆ ನಿರ್ಮಿಸುವುದಕ್ಕೆ ಮುಂದಾಗಿದೆ. ವಸತಿ ಶಾಲೆಯಾಗಿರುವ ಕಾರಣ, ಶಾಲೆ ಮತ್ತು ವಸತಿ ಉದ್ದೇಶಕ್ಕಾಗಿ 7 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಕಟ್ಟಡಗಳು ತಲೆ ಎತ್ತಲಿವೆ. ಶಾಲೆಯಲ್ಲಿ ಒಟ್ಟು 550 ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶವಿದ್ದು, ಸಿಬ್ಬಂದಿ ಸೇರಿದಂತೆ 700 ಕ್ಕೂ ಹೆಚ್ಚು ಜನರು ಇಲ್ಲಿ ತಂಗಲಿದ್ದಾರೆ. ಜೊತೆಗೆ ಕಟ್ಟಡವಲ್ಲದೆ, ಶಾಲಾ ವಿದ್ಯಾರ್ಥಿಗಳಿಗಾಗಿ ಫುಟ್ ಬಾಲ್ ಮೈದಾನದಷ್ಟ್ರು ವಿಸ್ತೀರ್ಣದ ನಾಲ್ಕು ಮೈದಾನಗಳು ನಿರ್ಮಾಣಗೊಳ್ಳಲಿವೆ. ಎಷ್ಟೆಲ್ಲಾ ವಿದ್ಯಾರ್ಥಿ ಮತ್ತು ಸಿಬ್ಬಂದಿಗೆ ಅಗತ್ಯವಿರುವ ನೀರಿಗಾಗಿ ಮಳೆಕೊಯ್ಲು ಮಾಡುವ ಯೋಜನೆ ಇದೆ. ಅದಕ್ಕಾಗಿ ಬೆಟ್ಟಗಳ ಮೇಲೆ ಕೆರೆಗಳನ್ನು ನಿರ್ಮಿಸುವ ಯೋಜನೆ ಈಗಾಗಲೇ ಸಿದ್ಧವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕಟ್ಟಡಗಳ ನಿರ್ಮಾಣಕ್ಕಾಗಿ 530 ಮರಗಳನ್ನು ಕಡಿಯಲು ಈ ಫೌಂಡೇಷನ್ ಸಿದ್ಧತೆ ನಡೆಸಿದ್ದು, ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ. ಇದೆಲ್ಲವನ್ನು ಗಮನಿಸಿರುವ ಸ್ಥಳೀಯರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಕಾಫಿ ಎಸ್ಟೇಟ್ ಆಗಿರುವ ಇದು ಬಹುತೇಕ ಬಂಡೆಗಳಿಂದ ಕೂಡಿದ್ದು, ಕಾಮಗಾರಿಗಳನ್ನು ನಡೆಸಲು ಬಂಡೆಗಳನ್ನು ಸೀಳುವ ಸಾಧ್ಯತೆ ಇದೆ. ಒಂದು ವೇಳೆ ಹಾಗೇ ಮಾಡಿದರೆ ಎತ್ತರವಾಗಿರುವ ಈ ಬೆಟ್ಟದಲ್ಲಿ ಭೂಕುಸಿತವಾಗೋದು ಖಚಿತ ಅನ್ನೋದು ಸ್ಥಳೀಯರ ಆರೋಪ. 50 ಡಿಗ್ರಿಯಷ್ಟ್ರು ಕಡಿದಾದ ಬೆಟ್ಟ ಇದಾಗಿದ್ದು, ಮರಗಳನ್ನು ಕಡಿದಲ್ಲಿ ಮತ್ತು ಕೆರೆಗಳನ್ನು ನಿರ್ಮಿಸಿದಲ್ಲಿ ಭೂಕುಸಿತವಾಗೋದು ಖಚಿತ ಎನ್ನೋ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

blank

ತಲಕಾವೇರಿಯ ಗಜಗಿರಿ ಬೆಟ್ಟದಲಲೂ ಇಂಗು ಗುಂಡಿಗಳನ್ನು ತೆಗೆದು ದೊಡ್ಡ ಅನಾಹುತಕ್ಕೆ ಕಾರಣವಾಯಿತು. ಇಲ್ಲಿಯೂ ಮರಗಳನ್ನು ಕಡಿದು, ನಾಲ್ಕೈದು ಕೆರೆಗಳನ್ನು ನಿರ್ಮಿಸಿದರೆ ಅಂತಹದ್ದೇ ಅನಾಹುತ ಸಂಭವಿಸುತ್ತದೆ. ಈ ಬೆಟ್ಟದ ತಪ್ಪಲಿನ ಸುತ್ತಲೂ ನೂರಾರು ಕುಟುಂಬಗಳು ತಲತಲಾಂತರಗಳಿಂದ ಜೀವನ ನಡೆಸುತ್ತಿವೆ. ಇದೀಗ ಅಂತರಾಷ್ಟ್ರೀಯ ಮಟ್ಟದ ಪರಿಸರ ಶಾಲೆಯನ್ನು ಮಾಡುವುದಕ್ಕೆ ಇಲ್ಲಿನ ಪರಿಸರ ಹಾಳು ಮಾಡುವುದು ಸರಿಯೇ ಎನ್ನೋದು ಸ್ಥಳೀಯರ ಪ್ರಶ್ನೆ. ಈಗಾಗಲೇ ಜಿಲ್ಲಾಡಳಿತ 20 ಸೆಂಟ್ ಜಾಗವನ್ನು ಕಟ್ಟಡ ನಿರ್ಮಾಣದ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿಕೊಟ್ಟಿದೆ. ಆದರೆ ಮೊಬೀಯಸ್ ಫೌಂಡೇಷನ್ 30 ಎಕರೆ ಭೂ ಪರಿವರ್ತನೆಗೆ ಅವಕಾಶ ಕೋರಿ ಮನವಿ ಸಲ್ಲಿಸಿದೆ. ಅಲ್ಲದೆ ನಾವು ಮಳೆ ನೀರು ಕೊಯ್ಲು, ಕಟ್ಟಡ ನಿರ್ಮಾಣ ಮತ್ತು ಆಟದ ಮೈದಾನಗಳನ್ನು ವೈಜ್ಞಾನಿಕವಾಗಿ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕೆಲವರು ತಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಶಾಲೆ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನೋದು ಉದ್ದೇಶಿತ ಶಾಲೆಯ ಸಲಹೆಗಾರ ಮಧು ಬೋಪಣ್ಣ ಅವರ ಆರೋಪ.

blank

Source: publictv.in Source link