ಮಗಳ ಜೊತೆಗೆ ತಂದೆಯೂ SSLC ಪರೀಕ್ಷೆ ಬರೆದು ಪಾಸ್

ಹಾವೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದರೆ ಸಾಕು ತಮ್ಮ ಮಕ್ಕಳ ಫಲಿತಾಂಶ ಯಾವ ರೀತಿ ಬರುತ್ತದೆ ಎಂದು ಎಷ್ಟೋ ತಂದೆ, ತಾಯಂದಿರು ಕಾಯುತ್ತಿರುತ್ತಾರೆ. ಅದರೆ ಸತತ ಪ್ರಯತ್ನದಿಂದ ತನ್ನ ಮಗಳ ಜೊತೆಗೆ ತಂದೆಯೂ ಪರೀಕ್ಷೆ ಬರೆದು ಒಂದೇ ಬಾರಿಗೆ ತಂದೆ ಮತ್ತು ಮಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಪರೂಪದ ಘಟನೆ ನಡೆದಿದೆ.

ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ನಾಗರಾಜ ಹರಿಜನ ಅವರು ಕುಡುಪಲಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ಸ್ವಚ್ಛತಾಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 1995ರಲ್ಲಿ ನಾಗರಾಜ, ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಶಾಲೆಯಲ್ಲಿ ಓದಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎದುರಿಸಿದ್ದರು. ಅಂದು ಎಲ್ಲ ವಿಷಯಗಳು ಫೇಲ್ ಆಗಿದ್ದವು. ಅಂದಿನಿಂದ ನಾಗರಾಜ ಮರಳಿ ಯತ್ನವ ಮಾಡು ಎಂಬಂತೆ ಆರು ಬಾರಿ ಪರೀಕ್ಷಾ ಅರ್ಜಿ ತುಂಬಿ ಪರೀಕ್ಷೆಗೆ ಕುಳಿತಿದ್ದರು. ಆದರೆ ಎಷ್ಟೇ ಪ್ರಯತ್ನಿಸಿದರೂ ಕನ್ನಡ, ಹಿಂದಿ, ಸಮಾಜ ವಿಜ್ಞಾನ ಮೂರು ವಿಷಯದಲ್ಲಿ ಪಾಸಾಗಿ ಗಣಿತ, ಇಂಗ್ಲೀಷ್, ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರು. ಅದಾದ ನಂತರ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ವೀರಮಹೇಶ್ವರ ಪ್ರೌಢ ಶಾಲೆಯಿಂದ ಪರೀಕ್ಷಾ ಅರ್ಜಿ ತುಂಬಿ ಪರೀಕ್ಷೆ ಎದುರಿಸಿದ್ದರು. ಆದರೂ ನಾಗರಾಜ ಉತ್ತೀರ್ಣರಾಗಿರಲಿಲ್ಲ. ನಂತರ ಪರೀಕ್ಷೆಗೆ ಹಾಜರಾಗುವುದನ್ನೇ ಬಿಟ್ಟಿದ್ದರು.

ಕುಡುಪಲಿ ಗ್ರಾಮದ ವೀರಮಹೇಶ್ವರ ಪ್ರೌಢ ಶಾಲೆಯಲ್ಲಿ ನಾಗರಾಜರ ಮಗಳು ಚಂದ್ರಮ್ಮ ಹರಿಜನ ಎಸ್‍ಎಸ್‍ಎಲ್‍ಸಿ ಓದುತ್ತಿದ್ದಳು. ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಇಲ್ಲದೆ ಮಗಳು ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿರುವುದು ನಾಗರಾಜ ಅವರಿಗೆ ಪರೀಕ್ಷೆಗೆ ಮತ್ತೆ ಕೂರಬೇಕು ಎಂಬ ಆಸೆ ಹುಟ್ಟಿಸಿತು. ಇದೊಂದು ಬಾರಿ ಪರೀಕ್ಷೆ ಎದುರಿಸುವ ಸಂಕಲ್ಪ ಮಾಡಿದ ನಾಗರಾಜ, ತಮ್ಮ ಮಗಳ ಅಭ್ಯಾಸದೊಂದಿಗೆ ತಾನೂ ಸಹ ಅಭ್ಯಾಸ ಮಾಡುತ್ತಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಈ ಬಾರಿ ಮಗಳೊಂದಿಗೆ ಎಸ್‍ಎಸ್‍ಎಲ್ಸಿ ಪರೀಕ್ಷೆ ಎದುರಿಸಿ ಉಳಿದುಕೊಂಡಿದ್ದ ಗಣಿತ, ಇಂಗ್ಲೀಷ್ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲ ವಿಷಯಗಳು ಸೇರಿ ನಾಗರಾಜ ಅವರಿಗೆ ಶೇ.57ರಷ್ಟು ಫಲಿತಾಂಶ ಬಂದಿದೆ.

blank

ಎಸ್‍ಎಸ್‍ಎಲ್‍ಸಿ ಮಗಳು ಇದ್ದರೂ ಅಪ್ಪ ಉತ್ತೀರ್ಣರಾಗಿ ಶೇ.57ರಷ್ಟು ಫಲಿತಾಂಶ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಒಂದೆಡೆ ತಂದೆ ಪಾಸಾಗಿದ್ದರೆ, ಮತ್ತೊಂದೆಡೆ ನಾಗರಾಜರ ಮಗಳು ವೀರಮಹೇಶ್ವರ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ಚಂದ್ರಮ್ಮ ಹರಿಜನ ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ 519 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾಳೆ. ಅಪ್ಪ ಮತ್ತು ಮಗಳು ಒಂದೇ ಬಾರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಕುಳಿತು ಇಬ್ಬರೂ ಪಾಸಾಗಿರುವುದು ನಾಗರಾಜ ಹರಿಜನರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

Source: publictv.in Source link