ಬೆಂಗಳೂರಿನಲ್ಲಿ ಪವಾಡ; ಕೊರೊನಾ ವಿರುದ್ಧ 50 ದಿನ ಹೋರಾಡಿ ಇವರು ಬದುಕಿದ್ದೇ ರೋಚಕ

ಬೆಂಗಳೂರಿನಲ್ಲಿ ಪವಾಡ; ಕೊರೊನಾ ವಿರುದ್ಧ 50 ದಿನ ಹೋರಾಡಿ ಇವರು ಬದುಕಿದ್ದೇ ರೋಚಕ

ಕೊರೊನಾ ಸೋಂಕಿನ ಹೊಡೆತಕ್ಕೆ ಸಿಕ್ಕು ಎಷ್ಟೆಲ್ಲ ಅನಾಹುತಗಳು ಆಗಿವೆ ಅನ್ನೋದು ನಮ್ಮ ಕಣ್ಣಮುಂದೆಯೇ ಇವೆ. ಆದ್ರೆ ಕಾರ್ಮೋಡದಲ್ಲಿ ಬೆಳ್ಳಿ ಕಿರಣ ಕಂಡಂತೆ ಕೆಲವು ಸ್ಫೂರ್ಥಿದಾಯಕ ಬೆಳವಣಿಗೆಗಳೂ ನಡೆದಿವೆ. ಅಂಥದ್ದೇ ಒಂದು ಪವಾಡ ಬೆಂಗಳೂರಿನಲ್ಲಿ ನಡೆದಿದ್ದು.. ವ್ಯಕ್ತಿಯೊಬ್ಬರು ಸಾವನ್ನೇ ಗೆದ್ದು ಬಂದಿದ್ದಾರೆ.

ಮನುಷ್ಯನ ಅಸ್ತಿತ್ವಕ್ಕೇ ಪೆಟ್ಟು ನೀಡುವಂಥ ಭಯಂಕರ ಸವಾಲನ್ನು ಕೊರೊನಾ ಸೋಂಕು ತಂದೊಡ್ಡಿದ್ದು ಸುಳ್ಳಲ್ಲ. ಅದೆಷ್ಟು ಅನಾಹುತಗಳು.. ಅದೆಷ್ಟು ನೋವು.. ಅದೆಷ್ಟು ಸಾವುಗಳು.. ಅದೆಷ್ಟು ಆರ್ಥಿಕ ಸಂಕಷ್ಟ, ಅದೆಷ್ಟು ಭಾವನಾತ್ಮಕ ಆಘಾತ.. ಕುಟುಂಬ ಕುಟುಂಬಗಳೇ ಕಣ್ಮರೆಯಾದ ಉದಾಹರಣೆಗಳೂ ಇವೆ.. ಕುಟುಂಬದ ಆಧಾರ ಸ್ಥಂಬವೇ ಕುಸಿದು ಬಿದ್ದ ಉದಾಹರಣೆಯೂ ಇದೆ.. ಮಮತೆಯ ತಾಯಿಯನ್ನ ಕಳೆದುಕೊಂಡ ಮಕ್ಕಳು.. ತಂದೆಯನ್ನ ಕಳೆದುಕೊಂಡ ಕುಟುಂಬಗಳು.. ಎದೆ ಮಟ್ಟಕ್ಕೆ ಬೆಳೆದ ಮಕ್ಕಳನ್ನ ಕಳೆದುಕೊಂಡ ತಂದೆ-ತಾಯಂದಿರು.. ಅನಾಥರಾದ ಪುಟ್ಟಮಕ್ಕಳು.. ಹಿರಿಯರನ್ನ ಕಳೆದುಕೊಂಡ ಮನೆಗಳು.. ಹೀಗೆ ಸಾಲು ಸಾಲು.. ಆಘಾತಗಳು ಅಪಾರ.. ಆದ್ರೆ.. ಈ ನಡುವೆ.. ಕೆಲವು ಸಮಾಧಾನಕರ ಘಟನೆಗಳೂ ನಡೆದಿವೆ..

ಭಯ ಬಿದ್ದವರಿಗೆ ಸಾಮಾಧಾನ ತರುವಂಥ ಘಟನೆಗಳು.. ಮಾನವನ ಇಚ್ಛಾಶಕ್ತಿಯ ದ್ಯೋತಕದಂತಿರುವ ಉದಾಹರಣೆಗಳು.. ಯಮನಿಗೇ ಸವಾಲು ಹಾಕಿ ಸೋಂಕಿತರನ್ನು ಉಳಿಸಿದ ವೈದ್ಯರುಗಳ ಸಂಖ್ಯೆಗೂ ಕೊರತೆ ಇಲ್ಲ.. ಅಂಥದ್ದೇ ಒಂದು ಉದಾಹರಣೆ ಈಗ ನಮ್ಮ ಕಣ್ಣ ಮುಂದಿದೆ.. ಇವರ ಕತೆಯನ್ನ ಕೇಳಿದ್ರೆ ಎಂಥವರಿಗೂ ಬದುಕಿನ ಸ್ಫೂರ್ಥಿ ಬಾರದೇ ಇರದು.. ಕೊರೊನಾ ಬಗ್ಗೆ ಮತ್ತಷ್ಟು ಜಾಗೃತಿ ಮೂಡದೇ ಇರದು..

ಮೇಲಿನ ಫೋಟೋ ನೋಡಿದ್ರಲ್ಲ.. ನೋಡಿ ಎಷ್ಟು ದಷ್ಟಪುಷ್ಟವಾಗಿ.. ಸ್ಮಾರ್ಟ್ ಆಗಿ ಇದ್ದಾರೆ. ಈ ಯುವಕನ ಹೆಸರು ಅರುಣ್​​ ಕುಮಾರ್ ಅಂತಾ. ಬೆಂಗಳೂರಿನವರೇ ಆದ ಇವರು.. ಅಕ್ಷರಶಃ ಯಮಲೋಕದ ಕಾಲಿಂಗ್ ಬೆಲ್ ಒತ್ತಿ ಬಂದಿದ್ದಾರೆ.. ಸಾವನ್ನೇ ಗೆದ್ದು ಇಂದು ನಮ್ಮ ಮುಂದೆ ಸ್ಫೂರ್ಥಿ ಚಿಲುಮೆಯಾಗಿದ್ದಾರೆ..

ಅಷ್ಟಕ್ಕೂ ಅವರು ಯಾರು? ಅವರ ಕತೆ ಏನು ಅಂದ್ರಾ?
ಅವರ ಹೋರಾಟದ ಕತೆಯನ್ನ.. ಬರೋಬ್ಬರಿ 50 ದಿನಗಳ ಕಾಲ ಐಸಿಯೂನಲ್ಲಿ ಬದುಕಿಗಾಗಿ ಕಾದಾಡಿದ ಸ್ಟೋರಿಯನ್ನ.. ಇವರು ಬದುಕಿ ಬಂದಿದ್ದೇ ಪವಾಡ ಅಂತಾ ಹೇಳಲಾಗುತ್ತೆ. ಹೀಗಂತ ನಾವು ಇದನ್ನು ಹೇಳುತ್ತಿಲ್ಲ..ಬದಲಿಗೆ.. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರೇ ಇಂಥ ಉದ್ಘಾರ ತೆಗೆಯುತ್ತಿದ್ದಾರೆ. ಸ್ವತಃ ಅರುಣ್​ ಕುಮಾರ್ ಅವರೇ ಇದನ್ನ ಪುನರುಚ್ಚರಿಸುತ್ತಿದ್ದಾರೆ.

ಇದನ್ನೂ ಓದಿ: ಉಜ್ಜಯಿನಿಯಲ್ಲಿ 9 ನೇ ಶತಮಾನದ ಜಲಧಾರಿ ಶಿವಲಿಂಗ, 5 ನೇ ಶತಮಾನದ ವಿಷ್ಣು ಮೂರ್ತಿ ಪತ್ತೆ..!

ಅಷ್ಟಕ್ಕೂ ಆಗಿದ್ದು ಏನು ಅಂತಾ ನೋಡೋದಾದ್ರೆ.. ಅದು ಏಪ್ರಿಲ್​​​ ತಿಂಗಳು.. ಇಡೀ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡಲು ಆರಂಭವಾಗಿತ್ತು.. ಎಲ್ಲೆಲ್ಲೂ ನೋಡಿದ್ರೂ ಸಾವು-ನೋವಿನ ಸುದ್ದಿ.. ಆಕ್ಸಿಜೆನ್ ಇಲ್ಲವಂತೆ.. ಮೆಡಿಸಿನ್​ ಇಲ್ಲವಂತೆ.. ಇಂಜೆಕ್ಷನ್​ ಇಲ್ಲವಂತೆ ಅನ್ನೋ ಇಲ್ಲ ಇಲ್ಲ ಇಲ್ಲಗಳ ಸುದ್ದಿಗಳು ಕೇಳಿ ಬರುತ್ತಲೇ ಇದ್ದವು.. ಇನ್ನೊಂದೆಡೆ ಕೊರೊನಾ ಅನ್ನೋದು ಕಳಂಕ ಅನ್ನೋ ಭಾವನೆ ಸಮಾಜದಲ್ಲಿ ಮೂಡಲು ಆರಂಭವಾಗಿತ್ತು.. ಇದೇ ಕಾರಣದಿಂದ ಎಷ್ಟೋ ಜನ ಟೆಸ್ಟ್​ ಮಾಡಲೂ ಭಯ ಪಡ್ತಾ ಇದ್ರು.. ಅಂಥ ವೇಳೆಯಲ್ಲಿ ಇವರ ಮನೆಗೂ ಕೊರೊನಾ ಕಾಲಿಟ್ಟಿತ್ತು..

ಅರುಣ್ ಕುಮಾರ್ ಅವರದ್ದು ಚಿಕ್ಕದಾದ ಮತ್ತು ಹ್ಯಾಪಿಯಾದ ಕುಟುಂಬ. ಇವರ ದೊಡ್ಡ ತಮ್ಮ ಸ್ಟೇಟ್​ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಕೆಲಸ ಮಾಡ್ತಾ ಇದ್ರು.. ಆದ್ರೆ ಅವರಿಗೆ ಆಗಲೇ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು.. ಅವರು ಟೆಸ್ಟ್​ ಕೂಡ ಮಾಡಿಸಿಕೊಂಡ್ರು.. ಒಂದೇ ವಾರದಲ್ಲಿ ಗುಣಮುಖ ಕೂಡಾ ಆಗಿದ್ರು.. ಆದ್ರೆ ಮನೆಗೆ ಕಾಲಿಟ್ಟಿದ್ದ ಕೊರೊನಾ ಸೋಂಕಿನ ಪರಿಣಾಮವೇ ಭೀಕರವಾಗಿತ್ತು.. ಈ ಸೋಂಕು ಮನೆಯಲ್ಲಿ ನಾಲ್ವರಿಗೆ ಹರಡಿತ್ತು. ಅಷ್ಟೇ ಅಲ್ಲ ಒಬ್ಬರ ಸಾವು ಮತ್ತೊಬ್ಬರ ಬಹುತೇಕ ಸಾವಿಗೂ ಕಾರಣವಾಗಿ ಬಿಟ್ಟಿತ್ತು..

ಹೌದು.. ಕೊರೊನಾ ಸೋಂಕು ಇಂಥ ಬಿರುಗಾಳಿಯನ್ನೇ ತಂದು ಬಿಡುತ್ತೆ ಅನ್ನೋ ಊಹೆಯನ್ನೂ ಅರುಣ್ ಕುಮಾರ್ ಅವರು ಮಾಡಿಕೊಂಡಿರಲಿಲ್ಲ. ಇವರ ದೊಡ್ಡ ತಮ್ಮನಿಗೆ ಬಂದಿದ್ದ ಸೋಂಕು ನಂತರದಲ್ಲಿ ಅರುಣ್​ ಕುಮಾರ್ ತಾಯಿಯವರಿಗೂ ತಗುಲಿಬಿಟ್ಟಿತ್ತು.. ಅವರಿಗೆ ಇದು ಸಾಕಷ್ಟು ಸೀರಿಯಸ್ ಆಗಿ ವೆಂಟಿಲೇಟರ್​ಗೂ ಕೂಡ ಸೇರಿಸಬೇಕಾಯ್ತು. ಆದ್ರೆ ವಿಧಿ ಲಿಖಿತವೇ ಬೇರೆ ಇತ್ತು. ಕೊರೊನಾ ಸೋಂಕಿನಿಂದಾಗಿ ಇವರ ತಾಯಿ ಸಾವನ್ನಪ್ಪಿ ಬಿಟ್ಟರು. ಅಷ್ಟೇ ಅಲ್ಲ ಗಾಯದ ಮೇಲೆ ಬರೆ ಎಳೆದಂತೆ ಅರುಣ್​ ಕುಮಾರ್ ಅವರಿಗೂ ಸೋಂಕು ವಕ್ಕರಿಸಿಕೊಂಡು ಬಿಟ್ಟಿತ್ತು.

ಸೋಂಕಿನ ಲಕ್ಷಣಗಳು ಕಂಡು ಬಂದಾಗಲೇ ಪಡೆಯಲಿಲ್ಲ ಚಿಕಿತ್ಸೆ
ಬರೋಬ್ಬರಿ 50 ದಿನಗಳ ಕಾಲ ಐಸಿಯುನಲ್ಲಿ ಹೋರಾಟ..

ತಮಗೆ ಉಂಟಾದ ಸೋಂಕು ಮತ್ತು ತದನಂತರದಲ್ಲಿ ಅದರಿಂದಾದ ಪರಿಣಾಮಗಳ ಬಗ್ಗೆ ಅರುಣ್​ ಕುಮಾರ್ ಸ್ವತಃ ನ್ಯೂಸ್​ ಫಸ್ಟ್​ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರೇ ಹೇಳಿದಂತೆ ಏಪ್ರಿಲ್​​​​​​​ ನ ಕೊನೆ ವಾರದ ವೇಳೆ ಅವರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿದ್ವಂತೆ. ಆದ್ರೆ ತಾವು ಹೇಗಿದ್ದರೂ ಯುವಕರಾಗಿದ್ದೀವಿ.. ನನ್ನ ತಮ್ಮನಿಗೂ ಬೇಗ ಸೋಂಕು ಗುಣವಾಗಿದೆ.. ನನಗೆ ಬಂದರೂ ತೊಂದರೆ ಇಲ್ಲ ಎಂಬಂತೆ ಪ್ರಾರಂಭದಲ್ಲಿ ಉದಾಸೀನ ಮಾಡಿದ್ರಂತೆ.. ಅದ್ರೆ ಸೋಂಕು ನಿಯಂತ್ರಣಕ್ಕೆ ಬಾರದೇ ನೇರವಾಗಿ ಇವರ ಶ್ವಾಸ ಕೋಶಕ್ಕೆ ಅಟ್ಯಾಕ್ ಮಾಡಿ ಬಿಡುತ್ತೆ.. ನಂತರ ಅವರು ಪಟ್ಟ ಪಾಡಿದೆಯಲ್ಲ ಅದನ್ನು ನೆನೆಸಿಕೊಳ್ಳಲೂ ಭಯಕಾನಕವಾಗಿರುತ್ತೆ..

ಇದನ್ನೂ ಓದಿ: ಫುಟ್​ಬಾಲ್​ ಫೀಲ್ಡ್​ನಲ್ಲಿ ನಡೀತು ಅಮ್ಮ ಮಗನ ರೇಸ್.. ಮುಗ್ಗರಿಸಿದ ತಾಯಿ

ಏಪ್ರಿಲ್ 29ಕ್ಕೆ ಅರುಣ್​ ಕುಮಾರ್​ ಅವರಿಗೆ ಕೊರೊನಾ ಪಾಸಿಟಿವ್ ಆಗಿರುತ್ತೆ.. ಆದ್ರೆ.. ಅದರ ಭೀಕರತೆ ಮಾತ್ರ ಕ್ಷಣ ಕ್ಷಣಕ್ಕೂ ಭಯಾನಕವಾಗುತ್ತಾ ಹೋಗುತ್ತೆ.. ಅದೂ ಎಷ್ಟರ ಮಟ್ಟಿಗೆ ಅಂದ್ರೆ ದಿನಕ್ಕೆ ಬರೋಬ್ಬರಿ 37 ಲೀಟರ್​ ಆಕ್ಸಿಜನ್ ಅನ್ನು ಅರುಣ್​ ಕುಮಾರ್​ಗೆ ನೀಡಬೇಕಾಗುತ್ತೆ.. ಅವರು ಆಕ್ಸಿಜನ್ ಸ್ಯಾಚುರೇಷನ್ ಮಟ್ಟ 70 ಕ್ಕೆ ಕುಸಿದು ಬಿಡುತ್ತೆ.. ಅಷ್ಟೇ ಅಲ್ಲ ಇವರ ಸ್ಥಿತಿ ಗಮನಿಸಿದ ವೈದ್ಯರು.. ಅರುಣ್​ ಕುಮಾರ್ ಬದುಕೋದು ಕಷ್ಟ ಅಂತ ಅವರ ತಮ್ಮನಿಗೆ ಹೇಳಿ ಬಿಟ್ಟಿರ್ತಾರೆ.. ಆದ್ರೆ ನಂತರ ಆಗಿದ್ದೇ ಪವಾಡ..!

ಹೌದು.. ಏಪ್ರಿಲ್ 29ಕ್ಕೆ ಇವರ ಸೋಂಕು ಉಲ್ಬಣ ಗೊಳ್ಳಲು ಆರಂಭವಾಗುತ್ತೆ. ನಂತರ ಆಸ್ಪತ್ರೆಗೆ ಸೇರಬೇಕು ಅಂದ್ರೂ ಬೆಡ್​​ಗಳೇ ಸಿಗದಂಥ ಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿ ಬಿಟ್ಟಿರುತ್ತೆ. ಕೊನೆಗೂ ಬಿಬಿಎಂಪಿ ಕಾರಣದಿಂದಾಗಿ ತಡವಾಗಿ ಇವರಿಗೆ ಬೆಂಗಳೂರಿನ ಜಯನಗರದಲ್ಲಿರುವ ಮಣಿಪಾಲ್​ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತೆ. ಆದ್ರೆ ಇವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣೋದೇ ಇಲ್ಲ.. ಇವರ ಶ್ವಾಸಕೋಶ ಕೊರೊನಾ ಸೋಂಕಿನ ಅಟ್ಯಾಕ್​ನಿಂದಾಗಿ ಬಲ ಹೀನವಾಗುತ್ತಾ ಹೋಗುತ್ತೆ.. ಇವರ ಆಕ್ಸಿಜೆನ್ ಮಟ್ಟ ಕೇವಲ 70ಕ್ಕೆ ಕುಸಿದು ಬಿಡುತ್ತೆ.. ಇಂಥ ಸ್ಥಿತಿಯಲ್ಲಿ ಅವರು ಬದುಕುತ್ತಾರಾ? ಅನ್ನೋ ಪ್ರಶ್ನೆಗಳು ಮೂಡಲು ಆರಂಭವಾಗಿ ಬಿಟ್ಟಿರುತ್ತೆ. ಪರಿಸ್ಥಿತಿ ಹೀಗಿದ್ದರೂ ಈ ಆಸ್ಪತ್ರೆಯಲ್ಲಿ ಐಸಿಯೂ ಇಲ್ಲದೇ ಇರೋದ್ರಿಂದಾಗಿ ಮತ್ತೊಂದು ಆಸ್ಪತ್ರೆಗೆ ಅವರನ್ನು ಸೇರಿಸಬೇಕಾಗೋದು ಅನಿವಾರ್ಯವಾಗಿ ಬಿಡುತ್ತೆ.

ಬೆಂಗಳೂರಿನ ಜಯನಗರದ ಮಣಿಪಾಲ ಆಸ್ಪತ್ರೆಯಿಂದ ಅರುಣ್​ ಕುಮಾರ್ ಅವರನ್ನು ಬೆಂಗಳೂರಿನದ್ದೇ ಆದ ಬೆಥೆಲ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗುತ್ತೆ.. ಅಲ್ಲಿ ಐಸಿಯೂ ಸೌಲಭ್ಯವೂ ಅವರಿಗೆ ದೊರಕುತ್ತೆ. ಮುಂದೆ ಬರೋಬ್ಬರಿ 50 ದಿನಗಳ ಕಾಲ ಅದೇ ಐಸಿಯೂ ಅರುಣ್ ಕುಮಾರ್ ಮನೆಯಾಗಿ ಬಿಡುತ್ತೆ..

ನನ್ನನ್ನು ಮಣಿಪಾಲ್​ ಆಸ್ಪತ್ರೆಯಿಂದ ಬೆಥೆಲ್​ ಆಸ್ಪತ್ರೆಗೆ ದಾಖಲಿಸಲಾಯ್ತು.. ಆ ವೇಳೆ ನನ್ನ ಆಕ್ಸಿಜೆನ್ ಸ್ಯಾಚುರೇಷನ್ ಕೇವಲ 70ಕ್ಕೆ ಕುಸಿದಿತ್ತು.. ನನ್ನ ಶ್ವಾಸಕೋಶ ಸಂಪೂರ್ಣ ಕುಸಿದು ಹೋಗಿತ್ತು.. ನಿಮಗೆ ಅಚ್ಚರಿ ಎನಿಸಬಹುದು ಆಗ ನನಗೆ ಪ್ರತಿ ದಿನ ಬರೋಬ್ಬರಿ 37 ಲೀಟರ್ ಆಕ್ಸಿಜೆನ್ ನೀಡಲಾಗ್ತಿತ್ತು..ಆ ವೇಳೆ ನನ್ನ ತಾಯಿ ಕೂಡ ಕೊರೊನಾದಿಂದ ಸಾವನ್ನಪ್ಪಿದ್ರು. ಈ ವೇಳೆ ನನ್ನ ಕಿರಿಯ ತಮ್ಮ ನನ್ನನ್ನು ಉಳಿಸುವುದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ. ಆಸ್ಪತ್ರೆಯಲ್ಲಿ ಡಾ. ಚೇತನ್​ ಕುಮಾರ್ ಸೇರಿದಂತೆ ಎಲ್ಲ ವೈದ್ಯರೂ ನನ್ನನ್ನು ಅತ್ಯಂತ ಚೆನ್ನಾಗಿ ನೋಡಿಕೊಂಡ್ರು.. ಆದ್ರೂ ನಾನು ಬದುಕುತ್ತೇನೆ ಅನ್ನೋ ನಂಬಿಕೆ ವೈದ್ಯರಿಗೇ ಇರಲಿಲ್ಲ.. ನಾನು ಅಕ್ಷರಶಃ ಡೆತ್​ ಬೆಡ್​ ಮೇಲಿಂದ ಎದ್ದು ಬಂದಿದ್ದೇನೆ. ಇದು ನಿಜಕ್ಕೂ ನನಗೆ ದೇವರ ಪವಾಡ ಎನಿಸುತ್ತೆ. ಈಗ ನನಗೆ ಕೊರೊನಾ ಸಂಪೂರ್ಣ ಗುಣವಾಗಿದೆ. ಆದ್ರೆ ಇಂದಿಗೂ ನನಗೆ ಶ್ವಾಸಕೋಶ ಸಂಪೂರ್ಣ ಗುಣವಾಗಿಲ್ಲ ಇನ್ನೂ ಒಂದು ತಿಂಗಳು ಆಕ್ಸಿಜೆನ್ ಪಡೆಯಲು ವೈದ್ಯರು ತಿಳಿಸಿದ್ದಾರೆ. ಆದ್ರೆ  ಈಗ ನಾನು ಪಡೆಯುವ ಕೃತಕ ಆಕ್ಸಿಜೆನ್ ಪ್ರಮಾಣ ಕೇವಲ 1 ಲೀಟರ್​ಗೆ ಕುಸಿದಿದೆ. ಇನ್ನು ಒಂದು ತಿಂಗಳಲ್ಲಿ ಗುಣವಾಗ್ತೀನಿ- ಅರುಣ್ ಕುಮಾರ್, ಸೋಂಕಿನಿಂದ ಗುಣವಾದವರು

ಸದ್ಯ ಅರುಣ್ ಕುಮಾರ್ ಕೊರೊನಾದಿಂದ ಗುಣವಾಗಿದ್ದರೂ ಅವರಿಗೆ ಒಂದು ನೋವಿದೆ. ಅದೆಂದರೆ ಪ್ರಾರಂಭದಲ್ಲಿ ಸೋಂಕನ್ನು ಉದಾಸೀನ ಮಾಡಿದ್ದು. ಹೌದು.. ಇದೇ ಕಾರಣದಿಂದಾಗಿ ಅವರು ಜನರಿಗೆ ಒಂದು ಕಿವಿ ಮಾತನ್ನೂ ಹೇಳಿದ್ದಾರೆ. ಅದೆಂದ್ರೆ, ಕೊರೊನಾ ಸೋಂಕನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಸ್ವಲ್ಪ ಲಕ್ಷಣ ಕಂಡು ಬಂದರೂ ಚಿಕಿತ್ಸೆ ಪಡೆಯಿರಿ. ಹೀಗೆ ಮಾಡೋದ್ರಿಂದ ನೀವೂ ಬೇಗ ಗುಣವಾಗ್ತೀರಿ ಮತ್ತು ಬೇರೆಯವರಿಗೂ ಸೋಂಕು ಹರಡೋದನ್ನ ತಡೀತಿರಿ ಅಂತ.

ಇದನ್ನೂ ಓದಿ: ಚೀನಾದಲ್ಲಿ ಹೆಚ್ಚಾಯ್ತು ಕೊರೊನಾ: ದಿನಕ್ಕೆ 3 ಬಾರಿ ಬಾಗಿಲು ತೆರೆದ್ರೆ ಇಡೀ ಮನೆಯೇ ಲಾಕ್

ಒಟ್ಟಿನಲ್ಲಿ ಕೊರೊನಾ ಸೋಂಕಿನಿಂದಾಗಿ ಅರುಣ್​ ಕುಮಾರ್ ಇಷ್ಟು ಕಷ್ಟ ಪಡ್ಡಿದ್ದರೂ.. ಬೇರೆಯವರಿಗೂ ಅವರು ಉತ್ತಮವಾದ ಉದಹಾರಣೆಯಾಗಿದ್ದಾರೆ. ಸೋಂಕು ಬಂದರೂ ಭಯ ಪಡಬೇಡಿ.. ಚಿಕಿತ್ಸೆ ಪಡೆದು ಗುಣರಾಗಿ ಅನ್ನೋದು ಸದ್ಯ ಸರ್ವವಿದಿತ..

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಮೀಡಿಯಾ

Source: newsfirstlive.com Source link