ಯುವಕನ ಜೀವ ತೆಗೆಯಿತು ಅವನೇ ತಯಾರಿಸಿದ ಹೆಲಿಕಾಪ್ಟರ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

ಯುವಕನ ಜೀವ ತೆಗೆಯಿತು ಅವನೇ ತಯಾರಿಸಿದ ಹೆಲಿಕಾಪ್ಟರ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

ಗಣೇಶ ಚತುರ್ಥಿ, ಮೊಹರಂಗೆ ಪ್ರತ್ಯೇಕ ಮಾರ್ಗಸೂಚಿ
ಶ್ರಾವಣ ಮಾಸದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರ್ತಿವೆ. ಸದ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಬ್ಬ ಹರಿದಿನದಂದು ಜನರು ಗುಂಪುಗೂಡದಂತೆ ತಡೆಯಲು ಮುಂದಾಗಿದೆ. ಮುಂಬರುವ ಗಣೇಶ ಚತುರ್ಥಿ ಮತ್ತು ಮೊಹರಂಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ. ಗಣೇಶ ಚತುರ್ಥಿಯನ್ನು ದೇವಸ್ಥಾನ ಹಾಗೂ ಮನೆಗಳಲ್ಲಿ ಕೊರೊನಾ ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸರಳವಾಗಿ ಆಚರಿಸಬೇಕು. ಸಾರ್ವಜನಿಕ ಸಭೆಗಳಲ್ಲಿ, ಹೊರಾಂಗಣಗಳಲ್ಲಿ ವೇದಿಕೆಗಳನ್ನು ನಿರ್ಮಿಸಿ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ ಎಂದು ಆದೇಶಿಸಿದೆ. ಇನ್ನು ಮೊಹರಂ ವೇಳೆ ಕೂಡ ಕೊರೊನಾ ಮಾರ್ಗಸೂಚಿ ಅನುಸರಿಸಿ ಮಸೀದಿಯಲ್ಲೇ ಪ್ರಾರ್ಥನೆ ಮಾಡಬೇಕು ಅಂತ ಆದೇಶಿಸಲಾಗಿದೆ.

ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

blank
ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಇಟ್ಟಿದ್ದು ಯಾವ ವಿಚಾರಕ್ಕೆ ಬೆಂಕಿ ಹಾಕಿದ್ದಾರೆಂದು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿ ಕಿಡಿಗೇಡಿಗಳು ಶಾಸಕರ ಮನೆ ಮುಂದೆ ನಿಂತಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದರು. ಇನ್ನು ಸುಟ್ಟು ಕರಕಲಾದ ಕಾರುಗಳನ್ನ ಟೋಯಿಂಗ್ ಮಾಡಿ ಗ್ಯಾರೇಜ್​ಗೆ ಶಿಫ್ಟ್ ಮಾಡಲಾಗಿದೆ.

ಮತ್ತೆ ಅಬ್ಬರಿಸುತ್ತಿರುವ ಕೊರೊನಾ ಮಹಾಮಾರಿ

blank
ದೇಶದಲ್ಲಿ ನಿನ್ನೆ ಒಂದೇ ದಿನ 41 ಸಾವಿರದ 195 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾ ಮಹಾಮಾರಿ ಮತ್ತೆ ಅಬ್ಬರಿಸುತ್ತಿದೆ. ಕೇರಳದಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ 20 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದು ನಿನ್ನೆ 21,445 ಕೇಸ್‌ ಪತ್ತೆಯಾಗಿವೆ. ಇನ್ನು ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 6,388 ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಅಲ್ಲದೇ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 1,857 ಕೇಸ್‌ಗಳು ಪತ್ತೆಯಾಗಿವೆ.

ಅಮೆರಿಕದಲ್ಲಿ ಹೆಚ್ಚುತ್ತಿರುವ ಡೆಲ್ಟಾ ರೂಪಾಂತರಿ
ಅಮೆರಿಕಾದಲ್ಲಿ ಡೆಲ್ಟಾ ಕೊರೊನಾ ರೂಪಾಂತರ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ದೇಶದಲ್ಲಿ ಮತ್ತೆ ಕೊರೊನಾ ಪರಿಸ್ಥಿತಿ ಆತಂಕಕಾರಿಯಾಗಿ ಮಾರ್ಪಡುತ್ತಿದೆ. ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಅಧಿಕಾರಿಗಳು ಕೂಡ ವರದಿ ನೀಡಿದ್ದಾರೆ. ಒಂದು ವಾರದಲ್ಲಿ ಎಲ್ಲಾ ದೇಶಗಳ ಪೈಕಿ ಅಮೆರಿಕದಲ್ಲಿ ದಾಖಲಾದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದೆ. ಒಂದೇ ವಾರದಲ್ಲಿ ಅಮೆರಿಕದಲ್ಲಿ ಸೋಂಕಿನ ಪ್ರಮಾಣ 35% ಹೆಚ್ಚಾಗಿದೆ ಅಂತ ಮಾಹಿತಿ ನೀಡಿದೆ.

‘ತನ್ನದೇ ನಿಯಮಗಳನ್ನು ಟ್ವಿಟರ್‌ ಪಾಲಿಸುತ್ತಿದೆಯಾ?’

blank
ಕಾಂಗ್ರೆಸ್​ನ ಕೆಲ ಮುಖಂಡರ ಖಾತೆಗಳನ್ನು ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಟ್ವಿಟರ್‌ ವಿರುದ್ಧ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಪ್ರಜಾತಂತ್ರವನ್ನು ಹತ್ತಿಕ್ಕುವ ಕೃತ್ಯದಲ್ಲಿ ಟ್ವಿಟರ್‌ ಭಾಗಿಯಾಗಿದೆ ಅಂತ ಆರೋಪಿಸಿ ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಖಾತೆಗಳನ್ನು ಅಮಾನತು ಮಾಡಿರುವ ಟ್ವಿಟರ್‌ ತನ್ನದೇ ನಿಯಮ ಪಾಲಿಸುತ್ತಿದೆಯಾ ಅಥವಾ ಮೋದಿ ಸರ್ಕಾರದ ನೀತಿ ಅನುಸರಿಸುತ್ತಿದೆಯಾ? ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾನೇ ತಯಾರಿಸಿದ್ದ ಹೆಲಿಕಾಪ್ಟರ್​ನಿಂದ ಪ್ರಾಣ ಕಳ್ಕೊಂಡ!

ಯುವಕನ ಜೀವ ತೆಗೆಯಿತು ಅವನೇ ತಯಾರಿಸಿದ ಹೆಲಿಕಾಪ್ಟರ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್
ತಾನೇ ತಯಾರಿಸಿದ್ದ ಹೆಲಿಕಾಪ್ಟರ್​ನಿಂದ ಯುವಕನೋರ್ವ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ಯಾವತ್ಮಾಲ್​ನಲ್ಲಿ ನಡೆದಿದೆ. 24 ವರ್ಷದ ಶೇಖ್ ಇಸ್ಮಾಯಿಲ್ ಹೆಲಿಕಾಪ್ಟರ್ ನಿರ್ಮಿಸುವ ಪ್ರಯೋಗಕ್ಕೆ ಮುಂದಾಗಿದ್ದ. ಅದರಂತೆ ಹೆಲಿಕಾಪ್ಟರ್​ನ ಟ್ರಯಲ್ ಸಮಯದಲ್ಲಿ ಹೆಲಿಕಾಪ್ಟರ್​ನ ಬ್ಲೇಡ್ ಆತನ ಕತ್ತು ಸೀಳಿದೆ. ಇಸ್ಮಾಯಿಲ್ ಹೆಲಿಕಾಪ್ಟರ್ ಪಕ್ಕದಲ್ಲೇ ನಿಂತು ಪರೀಕ್ಷೆ ನಡೆಸುತ್ತಿದ್ದಾಗ ಬ್ಲೇಡ್ ಶೇಕ್ ಇಸ್ಮಾಯಿಲ್​​ ಕುತ್ತಿಗೆಗೆ ತಾಗಿ ಸಾವನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಟಿಎಂ ದೋಚಲು ಬಂದು ಗೋಡೆ ನಡುವೆ ಸಿಕ್ಕಿಬಿದ್ದ ಕಳ್ಳ!
ಕಳ್ಳನೊಬ್ಬ ಎಟಿಎಂನಿಂದ ಹಣ ಕದಿಯಲು ಪ್ರಯತ್ನಿಸುವಾಗ ಎಟಿಎಂ ಮತ್ತು ಗೋಡೆಯ ನಡುವೆ ಸಿಲುಕಿಕೊಂಡು ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸದ್ಯ ಸಿಸಿಟಿವಿಯಲ್ಲಿ ಕಳ್ಳ ಒದ್ದಾಡಿರೋ ವಿಡಿಯೋ ಸೆರೆಯಾಗಿದ್ದು ಎಲ್ಲೆಡೆ ಹರಿದಾಡ್ತಿದೆ. ಉಪೇಂದ್ರ ರಾಯ್​ ಎಂಬ ಬಿಹಾರ ಮೂಲದ ಕಳ್ಳ ಕಂಠಪೂರ್ತಿ ಕುಡಿದು ಎಟಿಎಂ ದರೋಡೆ ಮಾಡಲು ಬಂದು ಸಿಕ್ಕಿ ಹಾಕಿಕೊಂಡಿದ್ದಾನೆ. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದುಕೊಂಡ್ರು.

ತಾಲಿಬಾನ್‌ನೊಂದಿಗೆ ಅಧಿಕಾರ ಹಂಚಿಕೆ
ತಾಲಿಬಾನ್‌ನೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಬರಲು ಅಫ್ಗಾನಿಸ್ತಾನ ಸರ್ಕಾರ ಮುಂದಾಗಿದೆ ಎಂದು ಐರೋಪ್ಯ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಅಂತಾ ವರದಿಯಾಗಿದೆ. ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ತಾಲಿಬಾನ್‌ ಮುಖಂಡರ ಜೊತೆ ಕತಾರ್‌ನಲ್ಲಿ ನಡೆದಿರುವ ಶಾಂತಿ ಸಭೆಯಲ್ಲಿ ಅಫ್ಗಾನಿಸ್ತಾನದ ಸಂಧಾನಕಾರರು ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ತೆರೆ ಮೇಲೆ ಬರಲಿದೆ ನೀರಜ್​ ಚೋಪ್ರಾ ಸಿನಿಮಾ

blank
ಟೋಕಿಯೊ 2020 ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದ ಮೂಲಕ ಭಾರತಕ್ಕೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಸಾಧನೆ ದೇಶದೆಲ್ಲೆಡೆ ಮನೆ ಮಾತಾಗಿದೆ. ಅಲ್ಲದೆ ನೀರಜ್​ ಚೋಪ್ರಾ ಕುರಿತು ಸಿನಿಮಾ‌ ಮಾಡಲು ನಿರ್ಮಾಪಕ, ದಕ್ಷಿಣ ಕನ್ನಡ ಜಿಲ್ಲೆಯ ಅರುಣ್‌ ರೈ ತೋಡಾರ್ ಮುಂದಾಗಿದ್ದಾರೆ. ಈಗಾಗಲೇ ಕಂಬಳದ ಬಗ್ಗೆ ‘ಬಿರ್ದ್‌ದ ಕಂಬುಲ’ ಸಿನಿಮಾ ನಿರ್ಮಾಣ ಮಾಡುತ್ತಿರುವ ಅರುಣ್ ರೈ ತೋಡಾರ್, ಈ ಮೂಲಕ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ.

ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದ ಕೆ.ಎಲ್.ರಾಹುಲ್
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಶತಕ ಸಿಡಿಸಿದ್ದಾರೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 210 ಎಸೆತಗಳಲ್ಲಿ ಶತಕ ಬಾರಿಸಿದರು. 2ನೇ ಟೆಸ್ಟ್​ನ ಮೊದಲ​ ದಿನದಾಂತ್ಯಕ್ಕೆ ಕೆಎಲ್​ ರಾಹುಲ್ 248 ಎಸೆತಗಲ್ಲಿ 127 ರನ್​ ಸಿಡಿಸಿದ್ದು, ಭಾರತ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್​ ಕಳೆದುಕೊಂಡು 276 ರನ್​ ಗಳಿಸಿದೆ.

Source: newsfirstlive.com Source link