ನಾಗರಪಂಚಮಿಗೆ ಅರಶಿಣ ಎಲೆ ತಿಂಡಿ ಮಾಡೋ ವಿಧಾನ ಇಲ್ಲಿದೆ

ಆಗಸ್ಟ್ 15ರಂದು ನಾಡಿನಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಶಿಣ ಎಲೆಯಲ್ಲಿ ತಿಂಡಿಯೊಂದನ್ನು ಮಾಡುತ್ತಾರೆ. ಅದನ್ನು ಅರಶಿಣ ಎಲೆಯ ಕಡುಬು ಅಥವಾ ಪತ್ತೋಳಿ ಎಂದೂ ಕರೆಯುತ್ತಾರೆ. ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು
ಬೆಳ್ತಿಗೆ ಅಕ್ಕಿ -2 ಕಪ್
ಅರಶಿಣ ಎಲೆ (ಎಂಟು)
ತೆಂಗಿನ ಕಾಯಿ- ಒಂದೂವರೆ ಕಪ್ (ತುರಿದದ್ದು)
ಬೆಲ್ಲ -ಮುಕ್ಕಾಲು ಕಪ್
ಏಲಕ್ಕಿ ಪುಡಿ
ಉಪ್ಪು(ರುಚಿಗೆ ತಕ್ಕಷ್ಟು)

ಮಾಡುವ ವಿಧಾನ
* 2 ಕಪ್ ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆ ನೆನೆ ಹಾಕಿ. ಹೀಗೆ ನೆನೆ ಹಾಕಿದ ಅಕ್ಕಿಯನ್ನು ನಯವಾಗಿ ರುಬ್ಬಬೇಕು. ಹಿಟ್ಟು ಜಾಸ್ತಿ ಗಟ್ಟಿಯೂ ಅಲ್ಲದೆ ನೀರು ನೀರಾಗಿಯೂ ಇರದೆ ಹದವಾಗಿರಬೇಕು. ಈ ಅಕ್ಕಿ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

* ಇನ್ನೊಂದು ಪಾತ್ರೆಯಲ್ಲಿ ಒಂದೂವರೆ ಕಪ್ ತುರಿದ ತೆಂಗಿನ ಕಾಯಿಗೆ ಮುಕ್ಕಾಲು ಕಪ್ ಬೆಲ್ಲ (ಪುಡಿ ಮಾಡಿದ್ದು) ಹಾಕಿ ಬೆರೆಸಿ. ಬೆಲ್ಲ ಮತ್ತು ತೆಂಗಿನ ತುರಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಿ. ಇದನ್ನೂ ಓದಿ: ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಹೆಣ್ಮಕ್ಕಳ ಹಬ್ಬ ಯಾಕೆ? ಇಲ್ಲಿದೆ ಕಥೆ

* ಇತ್ತ ತೊಳೆದು ಒರೆಸಿಟ್ಟಿರುವ ಅರಶಿಣ ಎಲೆಯಲ್ಲಿ ಅಕ್ಕಿ ಹಿಟ್ಟನ್ನು ಸವರಿ. ಅದರ ಮಧ್ಯ ಭಾಗದಲ್ಲಿ ಬೆಲ್ಲ ಹಾಗೂ ಕಾಯಿತುರಿಯ ಮಿಶ್ರಣವನ್ನು ಹರಡಿ ಎಲೆಯನ್ನು ಲಂಬವಾಗಿ ಮಡಚಬೇಕು. ಹೀಗೆ ಮಡಚಿದ ಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿ ತಣ್ಣಗಾದ ಮೇಲೆ ತುಪ್ಪ ಸೇರಿಸಿ ಸವಿಯಬಹುದು.

 

Source: publictv.in Source link