ಬೊಮ್ಮಾಯಿ-ದೇವೇಗೌಡ ಭೇಟಿ; ಸಿಎಂಗೆ ಸಂದೇಶ, ಪ್ರೀತಂಗೌಡಗೆ ಸಿಟಿ ರವಿ ಪಾಠ

ಬೊಮ್ಮಾಯಿ-ದೇವೇಗೌಡ ಭೇಟಿ; ಸಿಎಂಗೆ ಸಂದೇಶ, ಪ್ರೀತಂಗೌಡಗೆ ಸಿಟಿ ರವಿ ಪಾಠ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರನ್ನ ಸಿಎಂ ಬೊಮ್ಮಾಯಿ ಅವರು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದು, ರಾಜ್ಯ ಬಿಜೆಪಿ ನಾಯಕರ ಹುಬ್ಬೇರುವಂತೆ ಮಾಡಿತ್ತು. ಅದರ ಜೊತೆಗೆ ಪ್ರೀತಂಗೌಡ ಬೊಮ್ಮಾಯಿ ವಿರುದ್ಧ ಗುಡುಗಿದ್ದು ಮತ್ತಷ್ಟು ವಿವಾದ ಉಂಟಾಗಿತ್ತು. ಈ ವಿವಾದಕ್ಕೆ ತಾರ್ಕಿಕ ಅಂತ್ಯ ಮೊನ್ನೆಯಷ್ಟೇ ಸಿಕ್ಕಿತ್ತಾದರೂ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆ ಗ್ರಾಸವಾಗಿದೆ.

blank

ಸಿಟಿ ರವಿ ಹೇಳಿದ್ದೇನು..?
ಮೂರ್ನಾಲ್ಕು ದಶಕಗಳ ಕಾಲ ಒಟ್ಟಿಗೆ ರಾಜಕಾರಣ ಮಾಡಿದವರು, ಸಿಎಂ ಆದ ಮೇಲೆ ಹಿರಿಯರ ಆಶೀರ್ವಾದ ಪಡೆದುಕೊಳ್ಳೋದ್ರಲ್ಲಿ ತಪ್ಪು ಇಲ್ಲ. ನಾನಂತೂ ತಪ್ಪನ್ನ ಹುಡುಕಲು ಬಯಸಲ್ಲ. ಆದರೆ ಪ್ರೀತಂ ಹೇಳಿದ ರೀತಿಯಲ್ಲಿ ಪಕ್ಷದ ಹಿತಾಸಕ್ತಿಯನ್ನ ಬಲಿಕೊಟ್ಟು ಬೊಮ್ಮಾಯಿ ಹೋಗಿದ್ದರೆ ನಾನು ಖಂಡಿತ ಅದನ್ನ ಖಂಡಿಸುತ್ತೇನೆ. ಪಕ್ಷದ ಹಿತ, ಕಾರ್ಯಕರ್ತರ ಹಿಂತ ಅಂತಾ ಬಂದಾಗ ನಾವು ಪಕ್ಷಕ್ಕೆ ನಿಷ್ಠೂರವಾಗಿರಲೇಬೇಕು. ಭೇಟಿಯಾಗಿದ್ದನ್ನ ಖಂಡಿತವಾಗಿಯೂ ರಾಜಕೀಯವಾಗಿ ನೋಡಲ್ಲ, ವಸ್ತುನಿಷ್ಠವಾಗಿ ನೋಡುತ್ತೇವೆ. ಹಿರಿಯರು ಎಲ್ಲೋ ಸಿಕ್ಕದರು ಅಂದಾಗ ನಾವು ನಮಸ್ಕಾರ ಮಾಡುತ್ತೇವೆ. ನಮಸ್ಕಾರ ಮಾಡಿದ ಮಾತ್ರಕ್ಕೆ ರಾಜೀ ಆಗಿದ್ದೇವೆ ಅಂತಲ್ಲ ಎಂದಿದ್ದಾರೆ.

ಸಿಟಿ ರವಿ ಸಂದೇಶ ಏನು..?
ಬೊಮ್ಮಾಯಿ ದೇವೇಗೌಡರನ್ನ ಭೇಟಿ ಮಾಡಿದ್ದು ಹಾಗೂ ಪ್ರೀತಂಗೌಡ ವಾಗ್ದಾಳಿ ನಡೆಸಿರೋದ್ರ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಸಿಟಿ ರವಿ ನೀಡಿರುವ ಕಮೆಂಟ್ ಇದಾಗಿದೆ. ಈ ಮೂಲಕ ಪ್ರೀತಂಗೌಡಗೂ ಪಾಠ, ಸಿಎಂಗೂ ಸಿಟಿ ರವಿ ಉಪದೇಶ ನೀಡಿದ್ದಾರೆ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಯಾಕಂದ್ರೆ ಸಿಟಿ ರವಿ ಕಂಡಿದ್ದು, ಕೇಳಿದ್ದು ಹಾಗೂ ಇತಿಹಾಸದ ಅನುಭವ ಆಧರಿಸಿ ಮತ್ತು ಭವಿಷ್ಯದ ರಾಜಕಾರಣದ ಮುನ್ನೆಚ್ಚರಿಕೆಯ ಬಗ್ಗೆ ಎನ್ನಲಾಗುತ್ತಿದೆ. ಬೊಮ್ಮಾಯಿಗೆ ಗೌಡರ ಆಶೀರ್ವಾದವಿರಲಿ, ಆದರೆ ರಾಜಕೀಯ ರಾಜಿ ಬೇಡ. ರಾಜಕೀಯ ರಾಜಿ ಪಕ್ಷದ ಒಳಗಿರಲಿ, ಹೊರಗಲ್ಲ ಅನ್ನೋ ಮೂಲಕ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ 2008 ರಿಂದ 2013ರ ನಡುವೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದಿದ್ದರು. ಆಗ ಸಿಎಂ ಆಗಿದ್ದ ಸದಾನಂದಗೌಡ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಈಗ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದು ಬೊಮ್ಮಾಯಿ ಸಿಎಂ ಆಗಿದ್ದಾರೆ. ಅತ್ತ ಜೆಡಿಎಸ್ ನಾಯಕರು ಬೊಮ್ಮಾಯಿ‌ ನಮ್ಮ ಸಿಎಂ ಎಂಬ ಹೇಳಿಕೆಯನ್ನ ನೀಡಿದ್ದಾರೆ.

ಪ್ರೀತಂಗೌಡಗೂ ಪಾಠ
ಜೆಡಿಎಸ್ ನಾಯಕರು ಈ ಹೇಳಿಕೆ ನೀಡಿದ ಬೆನ್ನಲ್ಲೇ ದೇವೇಗೌಡರನ್ನ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಹೀಗಾಗಿ ಬೊಮ್ಮಾಯಿ‌ ವಿಚಾರದಲ್ಲಿ ಇತಿಹಾಸ ಮರುಕಳಿಸಬಾರದು ಎಂಬ ಭವಿಷ್ಯದ ಮುನ್ನೆಚ್ಚರಿಕೆಯ ಸಂದೇಶವನ್ನ ಸಿ.ಟಿ. ರವಿ ನೀಡಿದ್ದಾರೆ. ಅದೇ ರೀತಿ ಸಿಎಂ ಹಿರಿಯರ ಆಶೀರ್ವಾದ ಪಡೆದರೆ ಆಕ್ಷೇಪ ಇಲ್ಲ, ಆದರೆ ಪಕ್ಷದ ಹಿತಾಸಕ್ತಿಯ ವಿಚಾರ ಬಂದರೆ ನಾನು ನಿನ್ನ ಪರ ಅನ್ನೋ ಮೂಲಕ ತಮ್ಮ ಹಳೆಯ ಶಿಷ್ಯ ಪ್ರೀತಂಗೆ ಸಂದೇಶವನ್ನ ರವಾನಿಸಿದ್ದಾರೆ ಎನ್ನಲಾಗುತ್ತಿದೆ.

ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link