‘ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ನೀವು ಹಾಕಿ’ -ಮಾದರಿಯಾದ ಸಿಎಂ ಬೊಮ್ಮಾಯಿ

‘ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ನೀವು ಹಾಕಿ’ -ಮಾದರಿಯಾದ ಸಿಎಂ ಬೊಮ್ಮಾಯಿ

ಉಡುಪಿ: ವಿಶ್ವ ಅಂಗಾಂಗ ದಾನ ದಿನಾಚರಣೆಯ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಾವು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ ಎಂದು ಹೇಳುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಇತ್ತೀಚಿಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅಂಗಾಂಗ ದಾನ ಮಾಡುವುದರಿಂದ ಜೀವ ಉಳಿಸಬಹುದು. ಅಂಗಾಂಗ ಕಸಿ ಯಶಸ್ವಿಯಾಗುತ್ತಿದೆ. ಹೆಚ್ಚಿನ ಜನ ಅಂಗಾಂಗ ದಾನಕ್ಕೆ ಮುಂದೆ ಬರಬೇಕು. ಇದರಿಂದ ಸಾವಿರಾರು ಜೀವ ಉಳಿಸಲು ಸಾಧ್ಯವಿದೆ. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಸಹಿ ಹಾಕಬೇಕೆಂದು ಕರೆ ಕೊಡುತ್ತೇನೆ. ನಿಮ್ಮಿಂದ ಇನ್ನೊಂದು ಜೀವ ಉಳಿಸಲು ಸಾಧ್ಯವಿದ್ದರೆ ಯಾಕೆ ಮಾಡಬಾರದು. ಎಲ್ಲರೂ ಕೂಡ ಈ ಕುರಿತು ಸಂಕಲ್ಪ ಮಾಡೋಣ. ನಮ್ಮ ಕಿಡ್ನಿ, ಹೃದಯ, ಲಿವರ್ ಇನ್ನೊಬ್ಬರ ಉಪಯೋಗಕ್ಕೆ ಬರಲಿ ಎಂದು ಕರೆ ನೀಡಿದರು.

blank

ಈ ಕುರಿತು ಟ್ವಿಟರ್​​​ನಲ್ಲೂ ಮಾಹಿತಿ ಹಂಚಿಕೊಂಡಿರುವ ಸಿಎಂ, ಜೀವವನ್ನು ಉಳಿಸಿ, ಹೊಸ ಜೀವನ ಕಟ್ಟಿ ಕೊಡುವ ಅಂಗಾಂಗ ದಾನದ ಮಹತ್ವ ಮತ್ತು ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಎಲ್ಲರೂ ಪ್ರಯತ್ನಿಸೋಣ. ಈ ವಿಶ್ವ ಅಂಗಾಂಗ ದಾನ ದಿನದಂದು, ಅಂಗಾಂಗ ದಾನದ ಬಗ್ಗೆ ಇರುವ ಸಂಶಯಗಳನ್ನು, ಹಿಂಜರಿಕೆಯನ್ನು ನಿವಾರಿಸುವ ದೃಢ ಸಂಕಲ್ಪ ತಾಳೋಣ.

‘ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಿದೆ. ನಾನೂ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸುತ್ತಿದ್ದೇನೆ. ನಾವೆಲ್ಲರೂ ಅಂಗಾಂಗ ದಾನ ಮಾಡಲು ಮುಂದೆ ಬರುವ ಸಂಕಲ್ಪ ಮಾಡೋಣ’ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link