ಇಂದಿರಾ ಕ್ಯಾಂಟೀನ್ ಹೆಸ್ರು ಬದಲಾಯಿಸಿ ಅನ್ನೋದು ಬಿಜೆಪಿಯ ಚಿಲ್ಲರೆ ವಿಚಾರ: ಎಸ್.ಆರ್.ಪಾಟೀಲ್

– ಆನಂದ್ ಸಿಂಗ್ ಭಿನ್ನಮತಕ್ಕೆ ತ್ಯಾಪೆ ಹಾಕಲಾಗಿದೆ

ಯಾದಗಿರಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕು ಎನ್ನುವುದು ಬಿಜೆಪಿಯವರ ಚಿಲ್ಲರೆ ವಿಚಾರ. ಇಂದಿರಾ ಗಾಂಧಿಯವರನ್ನು ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರೇ ಸಾಕ್ಷಾತ್ ದುರ್ಗೆ ಎಂದು ಕರೆದಿದ್ದರು. ಇಂತಹ ಸಣ್ಣ ಕೆಲಸಕ್ಕೆ ಬಿಜೆಪಿಯವರು ಇಳಿಯಬಾರದು ಎಂದು ಬಿಜೆಪಿ ನಾಯಕರ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರ ಹೆಸರಿನಲ್ಲಿ ಕ್ರೀಡಾಂಗಣ, ಮೇಲ್ಸೇತುವೆಗಳಿವೆ ಅವರ ಹೆಸರನ್ನು ತೆಗೆಯಿರಿ ಎಂದು ನಾವು ಹೇಳಲ್ಲ. ಸಚಿವ ಈಶ್ವರಪ್ಪನವರ ಮಾತು ಅವರ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ, ಅವರ ನಾಲಿಗೆಗೆ ಮತ್ತು ಮೆದುಳಗೆ ಕನೆಕ್ಷನ್ ಕಟ್ ಆಗಿದೆ. ಸಚಿವ ಆನಂದ್ ಸಿಂಗ್ ಗೆ ತ್ಯಾಪೆ ಹಚ್ಚಿದ್ದಾರೆ. ನನ್ನ 24 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹಲೋ ಎಲ್ಲಿದ್ದೀಯಾ? ನಿನ್ನ ಮೇಲೆ ಡೌಟ್ ಇಲ್ಲ, ಬಾ ಮನೆಗೆ ಮಾತಾಡೋಣ: ಜಮೀರ್​​​ಗೆ ಸಿದ್ದರಾಮಯ್ಯ ಬುಲಾವ್

ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ:
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್‍ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ಬಾರ್ ತೆರೆಯಲಿ, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ತೆರೆಯಲಿ. ಈಗ ಇಂದಿರಾ ಕ್ಯಾಂಟೀನ್ ಅನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಬೇಕು ಅಂತಾ ಪ್ರಸ್ತಾಪಿಸಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ನಾನು ಮೊದಲು ಕನ್ನಡಿಗ, ಅಮೇಲೆ ಭಾರತೀಯ: ಸಿ.ಟಿ.ರವಿಗೆ ಹೆಚ್‍ಡಿಕೆ ಟಾಂಗ್

Source: publictv.in Source link