ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಐಎಲ್‍ಎಸ್ ಕಾರ್ಯಾರಂಭ- ಇನ್ನು ಲ್ಯಾಂಡಿಂಗ್ ಸುಲಭ

ಹುಬ್ಬಳ್ಳಿ: ಹವಾಮಾನ ವೈಪರಿತ್ಯದಲ್ಲೂ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್‍ಗೆ ಅನುಕೂಲವಾಗುವ ಐಎಲ್‍ಎಸ್ (ಇನ್‍ಸ್ಟ್ರೂಮೆಂಟಲ್ ಲ್ಯಾಂಡಿಂಗ್ ಸಿಸ್ಟ್‍ಂ) ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಯ ಆರಂಭಿಸಿದೆ.

ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಒಂದನೇ ಕೆಟಗರಿಯ ಐಎಲ್‍ಎಸ್‍ನ್ನು ಅಳವಡಿಸಿದೆ. ವಿಶ್ವದರ್ಜೆಯ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ರೂಪಸಿದ ಐಎಲ್‍ಎಸ್ ಇದಾಗಿದ್ದು, ಇಂದ್ರ ಏರ್ ನ್ಯಾವಿಗೇಶನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಒಟ್ಟಾರೆ 6.50 ಕೋಟಿ ರೂ. ವೆಚ್ಚದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲೇ ಐಎಲ್‍ಎಸ್ ಸಂಪೂರ್ಣವಾಗಿ ಅಳವಡಿಕೆಯಾಗಿತ್ತು. ಆಗಲೇ ಪರೀಕ್ಷೆಗಳೂ ನಡೆದಿದ್ದವು. ಜೂನ್‍ನಲ್ಲಿ ಪ್ರಾಯೋಗಿಕವಾಗಿ ಇದರ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಅದರೆ ಕೊರೊನಾ ಕಾರಣಕ್ಕಾಗಿ ಸಂಪೂರ್ಣ ಬಳಕೆ ವಿಳಂಬವಾಗಿತ್ತು. ಎಲ್ಲ ಪರವಾನಗಿ ದೊರೆತ ಬಳಿಕ ಇದೀಗ ಆ.12ರಿಂದ ಇದರ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಎಎಐ ರೇಡಿಯೊ ಕನ್‍ಸ್ಟ್ರಕ್ಷನ್ ಆ್ಯಂಡ್ ಡೆವಲಪ್‍ಮೆಂಟ್ ಯೂನಿಟ್ ಹಾಗೂ ಫ್ಲೈಟ್ ಇನ್‍ಸ್ಪೆಕ್ಷನ್ ಯುನಿಟ್ (ಆರ್‍ಸಿಡಿಯು, ಎಫ್‍ಐಯು) ತಂಡವು ಹುಬ್ಬಳ್ಳಿಯ ವಿಮಾನ ನಿಲ್ದಾಣದ ಸಿಎನ್‍ಎಸ್ (ಕಮ್ಯೂನಿಕೇಶನ್, ನ್ಯಾವಿಗೇಶನ್ ಆ್ಯಂಡ್ ಸರ್ವೈವಲೆನ್ಸ್) ತಂಡದ ಮುಖ್ಯಸ್ಥ ಎನ್.ಎಂ.ಮಂಜುನಾಥ ಅವರ ನೇತೃತ್ವದಲ್ಲಿ ಅಳವಡಿಕೆ ಮತ್ತು ಪರೀಕ್ಷೆಗಳನ್ನು ನೆರವೇರಿಸಿದೆ. ಕೊರೊನಾ ಸಂದರ್ಭದಲ್ಲಿಯೇ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ನಡೆಸಲಾಗಿದೆ. ಐಎಲ್‍ಎಸ್ ಕಾರ್ಯಾಚರಣೆಗೆ ವಿಮಾನ ನಿಲ್ದಾಣದಲ್ಲಿ ಪ್ರಮೋದ್ ಕುಮಾರ್ ಠಾಕರೆ ಚಾಲನೆ ನೀಡಿದರು. ಈ ವೇಳೆ ನಿಲ್ದಾಣದ ಸಿಬ್ಬಂದಿ ಇದ್ದರು.

ಈ ವರೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಡಿವಿಒಆರ್ ವ್ಯವಸ್ಥೆ ಬಳಸಿ ವಿಮಾನ ಲ್ಯಾಂಡಿಂಗ್ ಮಾಡಲಾಗುತ್ತಿತ್ತು. ಇದೀಗ ಖಚಿತವಾಗಿ ಎಟಿಸಿ ಮೂಲಕ ಐಎಲ್‍ಎಸ್ ರೇಡಿಯೋ ಸಿಗ್ನಲ್‍ಗಳನ್ನು ಪೈಲಟ್‍ಗಳಿಗೆ ರವಾನಿಸುತ್ತದೆ. ಇದು ಲೊಕಲೈಸರ್ ಆ್ಯಂಡ್, ಗ್ಲೈಡ್ ಪಾತ್ ಸಿಸ್ಟ್‍ಂ ಹಾಗೂ ಡಿಸ್ಟೆನ್ಸ್ ಮೆಶರಿಂಗ್ ಇಕ್ಯುಪ್‍ಮೆಂಟ್ ಎಂಬ ಎರಡು ಪ್ರಮುಖ ವಿಭಾಗ ಹೊಂದಿದೆ. ಹವಾಮಾನ ವೈಪರಿತ್ಯದ ನಡುವೆ ಐಎಲ್‍ಎಸ್ ಸಿಗ್ನಲ್ ಟಾವರ್ ರನ್‍ವೇ ಸನಿಹದ ಆ್ಯಂಟೆನಾಗಳಿಗೆ ರವಾನಿಸುವ ಸಂದೇಶದಿಂದ ರನ್‍ವೇ ಉದ್ದಕ್ಕೂ ಇರುವ ಲೈಟ್‍ಗಳು ಬೆಳಗುತ್ತವೆ. ಇದು ವಿಮಾನ ಲ್ಯಾಂಡಿಂಗ್‍ಗೆ ಅನುಕೂಲವಾಗುತ್ತದೆ.

blank

ಸಮಸ್ಯೆ ಪರಿಹಾರ ನಿರೀಕ್ಷೆ:
ದಟ್ಟವಾದ ಮೋಡ, ಭಾರೀ ಮಳೆ, ಮಂಜು ಮುಸುಕಿದ ವಾತಾವರಣದ ಕಾರಣ ಹುಬ್ಬಳ್ಳಿ ವಿಮಾನ ನಿಲ್ದಾಣ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ತೊಂದರೆ ಇನ್ನು ತಕ್ಕಮಟ್ಟಿಗೆ ನಿವಾರಣೆ ಆಗುವ ನಿರೀಕ್ಷೆಯಿದೆ. ಕಳೆದ ಜೂ.15ರಂದು ಕೂಡ ಹವಾಮಾನ ವೈಪರಿತ್ಯದ ಕಾರಣಕ್ಕೆ ಕೇರಳದ ಕಣ್ಣೂರಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಇಂಡಿಗೋ ನಾಗರಿಕ ವಿಮಾನ ಸಂಕಷ್ಟಕ್ಕೆ ಸಿಲುಕಿತ್ತು. ಲ್ಯಾಂಡಿಂಗ್ ವೇಳೆ ಮುಂಭಾಗದ ಎರಡೂ ಟೈರ್‍ಗಳು ಬ್ಲಾಸ್ಟ್ ಆಗಿದ್ದವು. ಅದೃಷ್ಟವಶಾತ್ 11 ಜನರು ಸುರಕ್ಷಿತವಾಗಿ ಹೊರಬಂದಿದ್ದರು. ಇದಕ್ಕೂ ಮುನ್ನವೂ ಲ್ಯಾಂಡ್ ಆಗಲಾರದೆ ವಿಮಾನಗಳು ಬೇರೆ ನಿಲ್ದಾಣಕ್ಕೆ ತೆರಳಬೇಕಾಗಿತ್ತು. ಐಎಲ್‍ಎಸ್ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುಲಭವಾಗಿ, ಸುರಕ್ಷಿತವಾಗಿ ಇಳಿಸಬಹುದು.

Source: publictv.in Source link