ಬೇಂದ್ರೆ ಖಾಸಗಿ ಬಸ್ ಸಂಚಾರಕ್ಕಿಲ್ಲ ಬ್ರೇಕ್-ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶ

ಧಾರವಾಡ/ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಂಚರಿಸುತ್ತಿದ್ದ ಬೇಂದ್ರೆ ಬಸ್‍ಗೆ ಪರ್ಯಾಯ ಮಾರ್ಗ ಸೂಚಿಸಿದ್ದನ್ನು ಆಕ್ಷೇಪಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ತಾತ್ಕಾಲಿಕ ಆದೇಶ ನೀಡಿದ್ದು. ಇದರಿಂದಾಗಿ ಮಹಾನಗರ ಮಧ್ಯೆ ಬೇಂದ್ರೆ ಬಸ್‍ಗೆ ಸದ್ಯಕ್ಕೆ ಬ್ರೇಕ್ ಇಲ್ಲದಂತಾಗಿದ್ದು, ಯಥಾಪ್ರಕಾರ ಸಂಚರಿಸಬಹುದಾಗಿದೆ.

2003ರಿಂದ ಹುಬ್ಬಳ್ಳಿ-ಧಾರವಾಡ ಮಧ್ಯೆ ಬೇಂದ್ರೆ ಬಸ್ ಸಂಚರಿಸುತ್ತಿದ್ದವು. ಇತ್ತೀಚಿಗೆ ಇಲ್ಲಿ ಆರಂಭವಾದ ಬಹು ನಿರೀಕ್ಷಿತ ಬಿಆರ್​ಟಿಎಸ್ ಗೆ ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ. ಇದಕ್ಕೆ ಬೇಂದ್ರೆ ಬಸ್ ಸಂಚಾರವೇ ಕಾರಣವೆಂದು ಅದರ ಸೇವೆ ಸ್ಥಗಿತಗೊಳಿಸಬೇಕೆಂಬ ಬೇಡಿಕೆ ಬಿಆರ್​ಟಿಎಸ್ ಸಂಸ್ಥೆಯದಾಗಿತ್ತು. ಆದರೆ ಬೇಂದ್ರೆ ಸಾರಿಗೆ ಸಂಸ್ಥೆ ಪರ್ಯಾಯ ಮಾರ್ಗವಾದರೂ ಸೂಚಿಸಿ ಅಥವಾ ಇಲ್ಲೇ ಮುಂದುವರಿಯಲು ಅವಕಾಶ ಕಲ್ಪಿಸಿ ಎಂಬ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಕಳೆದ ತಿಂಗಳು ಇಲ್ಲಿ ಸಂಚರಿಸುತ್ತಿದ್ದ 41 ಬೇಂದ್ರೆ ಬಸ್‍ಗಳಿಗೆ ಪರ್ಯಾಯ ಮಾರ್ಗ ಸೂಚಿಸಿ ಆದೇಶಿಸಿತ್ತು.

ಎಲ್ಲೆಲ್ಲಿ ಪರ್ಯಾಯ ಮಾರ್ಗ:
ಬೆಳಗಾವಿ-ಅಥಣಿ-ವಿಜಯಪುರ-15, ಹುಬ್ಬಳ್ಳಿ-ಬಾಗಲಕೋಟ-ವಿಜಯಪುರ-15, ಹಾಗೂ ಹುಬ್ಬಳ್ಳಿ-ಗದಗ ನಡುವೆ 11 ಒಟ್ಟು 41 ವಾಹನಗಳಿಗೆ ಸಂಚರಿಸಲು ಅನುಮತಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ವಿರೋಧಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಸೂಚಿಸಿರುವ ಪರ್ಯಾಯ ಮಾರ್ಗಗಳು ಆದಾಯ ಗಳಿಸುವ ಮಾರ್ಗಗಳಾಗಿವೆ. ಮೊದಲೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಹಾನಿಯಲ್ಲಿದೆ. ಖಾಸಗಿ ವಾಹನಗಳಿಗೆ ಅನುಮತಿಸಿದರೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ತನ್ನ ವಾದ ಮಂಡಿಸಿತ್ತು.

blank

ಎರಡೂ ಕಡೆಯ ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮನವಿಯನ್ನು ಪುರಸ್ಕರಿಸಿದೆ. ಅಲ್ಲದೇ ಸದ್ಯಕ್ಕೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ಮಿಕನಂತೆ ಲಾರಿಯಿಂದ ಅಕ್ಕಿ ಚೀಲ ಇಳಿಸಿದ ಮಾಜಿ ಸಚಿವ ಸಂತೋಷ್ ಲಾಡ್

ಇದರಿಂದಾಗಿ ಪರ್ಯಾಯ ಮಾರ್ಗಗಳಲ್ಲಿ ಬೇಂದ್ರೆ ಬಸ್‍ಗಳು ಸಂಚರಿಸುವುದಿಲ್ಲ. ಜೊತೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿರುವುದರಿಂದ ಹುಬ್ಬಳ್ಳಿ-ಧಾರವಾಡ ಮಧ್ಯೆ ಇನ್ನಷ್ಟು ದಿನ ಬೇಂದ್ರೆ ಬಸ್ ಸಂಚಾರ ಅಬಾಧಿತ ಎಂಬಂತಾಗಿದೆ.

Source: publictv.in Source link