ಪ್ರವಾಸದ ನೆಪದಲ್ಲಿ ಚಾಲಕನ ದರೋಡೆ ಮಾಡಿದ್ದ ಅಪರಾಧಿಗಳಿಗೆ 8 ವರ್ಷ ಕಠಿಣ ಜೈಲು ಶಿಕ್ಷೆ

ಪ್ರವಾಸದ ನೆಪದಲ್ಲಿ ಚಾಲಕನ ದರೋಡೆ ಮಾಡಿದ್ದ ಅಪರಾಧಿಗಳಿಗೆ 8 ವರ್ಷ ಕಠಿಣ ಜೈಲು ಶಿಕ್ಷೆ

ಹುಬ್ಬಳ್ಳಿ: ಗೋಡು ಜಲಪಾತ ಪ್ರವಾಸಕ್ಕೆ ಹೋಗುವ ನೆಪದಲ್ಲಿ ಕಾರು ಬಾಡಿಗೆ ಪಡೆದು, ಚಾಲಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರ್ಸ್, ಮೊಬೈಲ್, ವಾಹನ ದೋಚಿಕೊಂಡು ಹೋಗಿದ್ದ ಮೂವರು ಅಪರಾಧಿಗಳಿಗೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 8 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಹಾಗೂ ತಲಾ 20,000 ರೂ. ದಂಡ ವಿಧಿಸಿದೆ.

ಅಹ್ಮದ ಪಣಿಬಂದ, ಅವಿನಾಶ ಪವಾರ, ಮಂಜುನಾಥ ಪವಾರ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ. 2014ರ ಜುಲೈ 5ರಂದು ಚನ್ನಮ್ಮ ವೃತ್ತದ ಬಳಿಯ ಇದ್ಗಾ ಮೈದಾನದಲ್ಲಿ ಗಿರಣಿಚಾಳ ನಿವಾಸಿ ಗಣೇಶ ಜುಮ್ಹಾಪುರ ಎಂಬಾತ ಬಾಡಿಗೆಗಾಗಿ ಕಾರು ನಿಲ್ಲಿಸಿದ್ದ. ಈ ವೇಳೆ ಓರ್ವ ಯುವತಿಯೊಂದಿಗೆ ಬಂದ ಸಿರಾಜ್ ಪಣಿಬಂದ ಎಂಬಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತಕ್ಕೆ ತೆರಳಲು ಬಾಡಿಗೆ ಮಾತನಾಡಿದ್ದ. ಬಳಿಕ ಇಬ್ಬರೂ ಕಾರಿನಲ್ಲಿ ಹೊರಟಿದ್ದರು. ಮಾರ್ಗ ಮಧ್ಯ ಹಳೆ ಹುಬ್ಬಳ್ಳಿ ಶಿಮ್ಲಾ ನಗರದ ಬಳಿ ಸಿರಾಜ್ ತನ್ನ ಸಹಚರರಾದ ಅವಿನಾಶ ಪವಾರ, ಮಂಜುನಾಥ ಪವಾರ ಹಾಗೂ ಓರ್ವ ಬಾಲಾಪರಾಧಿಯನ್ನು ಹತ್ತಿಸಿಕೊಂಡಿದ್ದ.

blank

ಮಾಗೋಡು ಫಾಲ್ಸ್ 10 ಕಿ.ಮೀ. ದೂರ ಇದ್ದಾಗ ಕಾರು ನಿಲ್ಲಿಸಲು ಸೂಚಿಸಿದ್ದ ಆರೋಪಿಗಳು, ಚಾಲಕ ಗಣೇಶ್ ಮೇಲೆ ಹಲ್ಲೆ ನಡೆಸಿ, ಕೈಕಾಲುಗಳನ್ನು ಕಟ್ಟಿ ಹಿಂದಿನ ಸೀಟಿನಲ್ಲಿ ಹಾಕಿದ್ದರು. ಬಳಿಕ ಕಾರು ಚಲಾಯಿಸಿಕೊಂಡು ಹುಬ್ಬಳ್ಳಿ ಸಮೀಪ ಅಂಚಟಗೇರಿ ಬಳಿ ಬಂದು, ಚಾಲಕ ಗಣೇಶನನ್ನು ಹೊರಕ್ಕೆ ಎಸೆದು ವಾಹನ ಸಮೇತ ಪರಾರಿಯಾಗಿದ್ದರು.

ಘಟನೆ ಕುರಿತಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಸಚಿನ್ ಚಲವಾದಿ ಪ್ರಕರಣ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.

blank

ದಂಡದ ಮೊತ್ತದಲ್ಲಿ 50 ಸಾವಿರ ರೂ. ಚಾಲಕ ಗಣೇಶನಿಗೆ, 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ಪಾವತಿಸಲು ಸೂಚಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.

Source: newsfirstlive.com Source link