ದೊಡ್ಡವ್ರು ಆಗಬೇಕು ಅಂದ್ರೆ ಶ್ರೀಮಂತರಿಗೇ ಹೊಡಿಬೇಕು ಸಾರ್ -ಕಾರು ಸುಟ್ಟ ಆರೋಪಿಗಳಿಂದ ಶಾಕಿಂಗ್ ಹೇಳಿಕೆ

ದೊಡ್ಡವ್ರು ಆಗಬೇಕು ಅಂದ್ರೆ ಶ್ರೀಮಂತರಿಗೇ ಹೊಡಿಬೇಕು ಸಾರ್ -ಕಾರು ಸುಟ್ಟ ಆರೋಪಿಗಳಿಂದ ಶಾಕಿಂಗ್ ಹೇಳಿಕೆ

ಬೆಂಗಳೂರು: ಇತ್ತೀಚಿಗೆ ಬೊಮ್ಮನಳ್ಳಿ ಬಿಜೆಪಿ ಶಾಸಕ ಸತೀಶ್​ ರೆಡ್ಡಿಗೆ ಸಂಬಂಧಿಸಿದ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ದಿನ ಕಳೆದಂತೆ ರೋಚಕ ತಿರುವುಗಳಿಗೆ ಕಾರಣವಾಗುತ್ತಿದೆ. ನಿನ್ನೆ ಈ ಕೃತ್ಯದ ಹಿಂದೆ ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದೆ ಕಾರಣ ಎನ್ನಲಾಗ್ತಿತ್ತು. ಅಷ್ಟರಲ್ಲಿ ಪ್ರಕರಣದ ಬಂಧಿತ ಆರೋಪಿಗಳು ಚಿತ್ರ ವಿಚಿತ್ರ ಹೇಳಿಕೆಗಳನ್ನು ನೀಡುವುದರ ಮೂಲಕ ಪೊಲೀಸರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಶ್ರೀಧರ್, ಸಾಗರ್ ಮತ್ತು ನವೀನ್ ಬಂಧಿತ ಆರೋಪಿಗಳು. ಇವರನ್ನು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆಯಲ್ಲಿ ತರಹೇವಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ

ಆರೋಪಿಗಳ ಹೇಳಿಕೆ 1: 
ಬಡವ ಬಡವರಾಗೇ ಇರ್ತಾರೆ, ಶ್ರೀಮಂತ ಶ್ರೀಮಂತನಾಗೇ ಇರ್ತಾನೆ. ನಾನು ಸಾಗರ್ ಒಂದಲ್ಲ ಮೂರು ಸಲ ಕೆಲಸ ಕೇಳ್ಕೊಂಡ್ ಸತೀಶ್ ರೆಡ್ಡಿ ಮನೆಗೆ ಬಂದಿದ್ದೆ. ಆದ್ರೆ ಅವರು ಮನೆ ಹತ್ರ ಒಂದ್ಸಲನೂ ಭೇಟಿ ಆಗಲಿಲ್ಲ. ಗೇಟ್ ಬಳಿಯಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಕಾದು ವಾಪಸ್ ಹೋಗಿದ್ದೆ. ಹಣವಿದ್ದವರು ಮತ್ತೆ ಹಣ ಮಾಡುತ್ತ ದೊಡ್ಡ ಕಾರಿನಲ್ಲಿ ತಿರುಗ್ತಾರೆ. ನಾವು ಬಡವರು ಬಡವರಾಗಿಯೇ ಇರ್ಬೇಕಾ ಸರ್..? ಇವರೆಲ್ಲರಿಗೆ ಬುದ್ಧಿ ಕಲಿಸಬೇಕು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

blank

ಇದನ್ನೂ ಓದಿ: ಸತೀಶ್ ರೆಡ್ಡಿ ಕಾರ್​ಗೆ ಬೆಂಕಿ; ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು

ಹೇಳಿಕೆ 2: ದೊಡ್ಡವರಿಗೆ ಹೊಡೆದರೆ ದೊಡ್ಡ ಹೆಸರು ಮಾಡಬಹುದು. ಹೀಗೆ ಏನು ಇಲ್ಲದವರಂತೆ ಎಷ್ಟು ದಿನ ಬದುಕೋದು. ನಾವು ದೊಡ್ಡವರಂತೆ ಆಗಬೇಕು ಅಂದರೆ ದೊಡ್ಡವರಿಗೇ ಹೊಡೆಯಬೇಕು. ದೊಡ್ಡವರು ನಮ್ಮನ್ನ ಕಂಡ್ರೆ ಭಯ ಪಡಬೇಕು ಎಂದು ಆರೋಪಿಗಳು ಮಾತನಾಡಿಕೊಂಡಿದ್ರು ಎನ್ನಲಾಗಿದೆ. ಇದಕ್ಕೆ ಬೆಂಗಳೂರಿನಲ್ಲಿ ದೊಡ್ಡ ರೌಡಿಯಾಗಿ ರಾಜಕೀಯದಲ್ಲಿ ಇರುವ ಓರ್ವನ ಹೆಸರು ಪ್ರಸ್ತಾಪಿಸಿ ನಾವು ಅವರಂತೆ ಆಗಬೇಕು ಅಂದುಕೊಂಡಿದ್ದರು ಎನ್ನಲಾಗಿದೆ.

ಹೇಳಿಕೆ 3: ಯಾರಿಗೂ ಸಹಾಯ ಮಾಡದೇ ಇರೋರು ದೊಡ್ಡವರಾ? ಸತೀಶ್​ ರೆಡ್ಡಿ ಯಾರಿಗೂ ಸಹಾಯ ಮಾಡಲಿಲ್ಲ. ಅದಕ್ಕೆ ಎಲ್ಲರೂ ಜೈಲಿಗೆ ಹೋದ್ರು. ಹೀಗೆ ಅನುಮಾನಾಸ್ಪದ ರೀತಿಯಲ್ಲಿ ಆರೋಪಿಗಳು ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಮೂರು ಹೇಳಿಕೆಗಳನ್ನು ಮರು ಪರಿಶೀಲನೆ ಮಾಡಲು ತನಿಖಾ ತಂಡ ನಿರ್ಧಾರ ಮಾಡಿದ್ದು, ಪೊಲೀಸರು ಈ ಹೇಳಿಕೆಗಳ ಆಧಾರದ ಮೇಲೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿಯ ಫಾರ್ಚೂನರ್ ಸೇರಿ 2 ಕಾರಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

Source: newsfirstlive.com Source link