ಗಣೇಶ ಮೂರ್ತಿ ತಯಾರಿಕೆಯಿಂದ ಬದುಕು ಕಟ್ಟಿಕೊಂಡಿದ್ದವರು ಬೀದಿ ಪಾಲು

ರಾಯಚೂರು: ಕೊರೊನಾ ಮೂರನೇ ಅಲೆಯ ಆತಂಕ ಹಿನ್ನೆಲೆ ಸರ್ಕಾರ ಸಾಮೂಹಿಕ ಗಣೇಶೋತ್ಸವಕ್ಕೆ ನಿಷೇಧ ಹೇರಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ತಯಾರಿಕೆ , ಮಾರಾಟಕ್ಕಂತೂ ಸಂಪೂರ್ಣ ಬ್ರೇಕ್ ಬಿದ್ದಿದೆ. ಗಣೇಶ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ರಾಯಚೂರಿನ ಕೆಲ ಕುಟುಂಬಗಳು ಈಗ ಅಕ್ಷರಶಃ ಬೀದಿಗೆ ಬಂದಿವೆ.

ನಗರದ ಲಿಂಗಸುಗೂರು ರಸ್ತೆ ಬಳಿ ಸುಮಾರು ವರ್ಷಗಳಿಂದ ಗಣೇಶ ಮೂರ್ತಿ, ಬೊಂಬೆಗಳನ್ನ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವ ರಾಜಸ್ಥಾನ ಮೂಲದ ನಾಲ್ಕೈದು ಕುಟುಂಬಗಳು ಈಗ ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ. ಜಲಮೂಲಗಳ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪಿಓಪಿ ಗಣೇಶ ಸಂಪೂರ್ಣ ನಿಷೇಧ ಮಾಡಿದೆ. ಹೀಗಾಗಿ ಮೂರು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚುಮಾಡಿ ತಯಾರಿಸಿದ ಗಣೇಶ ಮೂರ್ತಿಗಳಿಗೆ ಬಣ್ಣ ಹಚ್ಚಿ ಮಾರಾಟ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಅಲ್ಲದೆ ಇನ್ನೊಂದೆಡೆ ಸಾಮೂಹಿಕ ಗಣೇಶೋತ್ಸವಕ್ಕೆ ಬ್ರೇಕ್ ಬಿದ್ದಿರುವುದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಪಿಓಪಿ ಗಣೇಶ ಮೂರ್ತಿ ಮಾರಾಟ ಸಾಧ್ಯವಿಲ್ಲವಾದ್ದರಿಂದ ಜಿಲ್ಲಾಡಳಿತವೇ ಸಹಾಯ ಮಾಡಬೇಕು ಎಂದು ಗಣೇಶ ಮೂರ್ತಿ ತಯಾರಕರು ಅಂಗಲಾಚಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಈ ಕುಟುಂಬಗಳು ಪ್ರತಿ ದಿನ ಊಟಕ್ಕೂ ಪರದಾಡಿದ್ದು, ಪಕ್ಕದ ಮನೆಗಳ ಜನರೇ ಇವರಿಗೆ ಅಕ್ಕಿ, ಬೇಳೆ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಅತ್ತ ರಾಜಸ್ಥಾನಕ್ಕೆ ಮರಳಲು ಆಗದೇ, ಇಲ್ಲೇ ಇದ್ದು ಬದುಕು ಕಟ್ಟಿಕೊಳ್ಳಲಾಗದೇ ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ಪರದಾಡುತ್ತಿದ್ದಾರೆ.

blank

Source: publictv.in Source link