‘ಎದೆತುಂಬಿ ಹಾಡುವೆನು’ ಬಗ್ಗೆ 2018 ರಲ್ಲಿ ಪತ್ರ ಬರೆದಿದ್ದ ಎಸ್​ಪಿಬಿ.. ಏನು ಹೇಳಿದ್ರು ಗೊತ್ತಾ..?

‘ಎದೆತುಂಬಿ ಹಾಡುವೆನು’ ಬಗ್ಗೆ 2018 ರಲ್ಲಿ ಪತ್ರ ಬರೆದಿದ್ದ ಎಸ್​ಪಿಬಿ.. ಏನು ಹೇಳಿದ್ರು ಗೊತ್ತಾ..?

ಎಸ್​​ಪಿ ಬಾಲಸುಬ್ರಮಣ್ಯಂ ಅವರ ಸಾರಥ್ಯದಲ್ಲಿ ಎದೆ ತುಂಬಿ ಹಾಡುವೆನು ಶೋ ಈ ಹಿಂದೆಯೇ ಪ್ರಾರಂಭವಾಗಬೇಕಿತ್ತು .. ಈ ಬಗ್ಗೆ ಎಸ್​ಪಿಬಿ ಪತ್ರ ಕೂಡಾ ಬರೆದಿದ್ದರು.

ಕನ್ನಡಿಗರ ಮನ ಗೆದ್ದಿದ್ದ ಸಿಂಗಿಂಗ್‌ ರಿಯಾಲಿಟಿ ಶೋ ಎದೆ ತುಂಬಿ ಹಾಡುವೆನು. ಸ್ವತಃ ಎಸ್​.ಪಿ ಬಾಲಸುಬ್ರಮಣ್ಯಂ ಅವರೇ ನಿರೂಪಕರಾಗಿ, ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ ಸಿಂಗಿಂಗ್​ ಶೋ. ಒಂದು ಕಾಲದಲ್ಲಿ ಈ ಶೋ ನೋಡಲೆಂದೇ ಅದೆಷ್ಟೋ ಜನ ಕಾಯುತ್ತಿದ್ದರು. ಅಷ್ಟು ಚಂದವಾಗಿ ಎಸ್​ಪಿಬಿ ಅವರು ಮಕ್ಕಳೊಟ್ಟಿಗೆ ಮಗುವಾಗಿ ಸ್ನೇಹದಿಂದ ತಪ್ಪುಗಳನ್ನು ತಿದ್ದುತಿದ್ದರು. ಚಿಕ್ಕವರಿರಲಿ ದೊಡ್ಡವರಿರಲಿ ಅಷ್ಟೇ ಪ್ರೀತಿಯಿಂದ ಗೆಸ್ಟ್​ಗಳನ್ನ ತಾವೇ ಬರಮಾಡಿಕೊಳ್ಳುತ್ತಿದ್ದರು. ಒಟ್ನಲ್ಲಿ ಎಸ್​ಪಿಬಿ ಅವರೇ ಈ ಶೋನ ಜೀವಾಳವಾಗಿದ್ದರು.

blank

ಈಗ ಸಂಗೀತ ದಂತ ಕತೆ ಎಸ್​ಪಿಬಿ ಅವರು ಬರಿ ನೆನಪು ಮಾತ್ರ. ಆದರೆ ಅವರು ಪ್ರಾರಂಭಿಸಿದ ಎದೆ ತುಂಬಿ ಹಾಡುವೆನು ಪರಂಪರೆಯನ್ನು ಮತ್ತೆ ಕಲರ್ಸ್​ ಕನ್ನಡ ವಾಹಿನಿ ಪ್ರಸ್ತುತ ಪಡೆಸಲಿರುವ ಬಗ್ಗೆ ಈಗಾಗಲೇ ನಿಮಗೆ ತಿಳಿದೆ. ಈಗ ಮತ್ತೆ ಈ ಶೋ ಬಗ್ಗೆ ಮಾತ್ನಾಡಲು ಕಾರಣ ಎಸ್​ಪಿಬಿ ಅವರು ಬರೆದ ಪತ್ರ.

blank

ಈಗಲೇ ಹಲವು ಆವೃತ್ತಿಗಳಲ್ಲಿ ಪ್ರಸಾರವಾಗಿರುವ ಈ ಶೋ ಪುನಃ ಲಾಂಚ್ ಆಗ್ತಿರೋದು ಖುಷಿಯ ವಿಚಾರ. ಆದ್ರೆ 2018 ರಲ್ಲಿಯೇ ಎಸ್​ಪಿಬಿ ಅವರ ಸಾರಥ್ಯದಲ್ಲಿ ಶೋ ಆರಂಭವಾಗಬೇಕಿತ್ತು. ಹೌದು, ಈ ಬಗ್ಗೆ ವಾಹಿನಿ ಮಾತುಕತೆ ಕೂಡ ನಡೆಸಿ, ಕಾರ್ಯಕ್ರಮಕ್ಕೆ ಸಿದ್ಧತೆ ಕೂಡ ನಡೆದಿತ್ತು. ಆದರೆ ಸ್ವತಃ ಎಸ್​ಪಿಬಿ ಅವರೇ ವೈಯಕ್ತಿಕ ಕಾರಣದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಕೈ ಬರಹದಲ್ಲಿ ಪತ್ರ ಬರೆದಿದ್ದರು.

ಪ್ರೀತಿಯ ಗೆಳೆಯರೇ, ನಿಮ್ಮನ್ನು ಇಷ್ಟು ದಿನ ಕಾಯುವಂತೆ ಮಾಡಿದ್ದಕ್ಕೆ ಕ್ಷಮೆ ಇರಲಿ. ಇದಕ್ಕೆ ಕಾರಣಗಳನ್ನು ಹೇಳಲು ನನಗೆ ಇಷ್ಟವಿಲ್ಲ. ಅವು ಖಾಸಗಿಯಾದವು ಮತ್ತು ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮತ್ತೆ ಶುರು ಮಾಡಲು ನಾವು ಮಾಡಿದ ಚರ್ಚೆಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲ. ನನ್ನ ಖಾಸಗಿ ವಿಷಯ ಮತ್ತು ಕೌಟುಂಬಿಕ ಕೆಲಸಗಳೇ ಅವುಗಳಿಗೆ ಕಾರಣ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು 2019 ರಲ್ಲಷ್ಟೇ ಈ ಕಾರ್ಯಕ್ರಮ ಪುನರಾರಂಭ ಮಾಡಲು ನನಗೆ ಸಾಧ್ಯ. ನಿಮಗೆ ಇದರಿಂದ ಆಗಿರಬಹುದಾದ ಅನಾನುಕೂಲಗಳಿಗೆ ಕ್ಷಮೆ ಇರಲಿ.. ನಿಮ್ಮ ಪ್ರೀತಿಯ ಎಸ್ ಪಿ ಬಾಲಸುಬ್ರಹ್ಮಣ್ಯಂ

ಹೀಗೆ ಬಿಳಿ ಹಾಳೆ ಮೇಲೆ ಅವರು ಬರೆದಿದ್ದ ಈ ಪತ್ರದಲ್ಲಿ ಅವರ ಹಾಡುಗಳಲ್ಲಿ ಇರುವಷ್ಟೇ ಜೀವಂತಿಕೆ ಇತ್ತು. ಅದನ್ನು ಅವರು ಸ್ಕ್ಯಾನ್ ಮಾಡಿ ಇ-ಮೇಲ್ ಮೂಲಕ ಕಳುಹಿಸಿಕೊಟ್ಟಿದ್ದರು. ಇವತ್ತಿನ ಜಗತ್ತಿನ ಸಂವಹನವಾದ ಇ-ಮೇಲ್ ನಲ್ಲಿ ಕೈಯ್ಯಲ್ಲಿ ಬರೆದಿರುವ ಪತ್ರ ಸ್ಕ್ಯಾನ್ ಆಗಿ ಬರುವ ಅಪರೂಪದ ಸಂದರ್ಭ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಒಂದು ಕಾರ್ಯಕ್ರಮ ಶುರುಮಾಡಲು ಸಾಧ್ಯವಿಲ್ಲ ಎನ್ನುವುದನ್ನು ದೂರವಾಣಿಯಲ್ಲಿ ಚರ್ಚೆ ಮಾಡಿದ ನಂತರವೂ ಪ್ರೀತಿಯಿಂದ ಪತ್ರವನ್ನೂ ಅವರು ಕಳಿಸಿಕೊಟ್ಟಿದ್ದು ಈ ಕಾರ್ಯಕ್ರಮದ ಬಗ್ಗೆ ಅವರಿಗಿದ್ದ ಪ್ರೀತಿಯನ್ನು ಹೇಳುತ್ತದೆ.

blank

ಎಸ್​ಪಿಬಿ ಅವರ ಕನಸಿನ ಕೂಸಾದ ಕಾರ್ಯಕ್ರಮ ಈಗ ಆರಂಭವಾಗುತ್ತಿದೆ. ಮೊದಲ ಸಂಚಿಕೆಯಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮಗ ಎಸ್ ಪಿ ಚರಣ್ ಭಾಗಿಯಾಗಲಿದ್ದಾರೆ. ಜೊತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಎಸ್​ಪಿಬಿ ಈ ಕಾರ್ಯಕ್ರಮದ ಭಾಗವಾಗಿ ಇದ್ದೇ ಇರುತ್ತಾರೆ.

ಇನ್ನೂ ಈ ದೊಡ್ಡ ಶೋನಲ್ಲಿ ವಿ. ಹರಿಕೃಷ್ಣ, ರಘುದೀಕ್ಷಿತ್​ ಹಾಗೂ ರಾಜೇಶ್​ಕೃಷ್ಣನ್​ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.. ಹಾಗೂ ನಮ್ಮನೆ ಯುವರಾಣಿ ಧಾರವಾಹಿಯ ನಟಿ ಅಂಕಿತಾ ಅಮರ್​ ಹೋಸ್ಟ್​ ಆಗಿ ಶೋನ ನಡೆಸಿಕೊಡಲಿದ್ದಾರೆ.. ಇನ್ನೂ ಈ ಶೋ ಅಗಸ್ಟ್​ 14 ಅಂದ್ರೆ ಇಂದು ರಾತ್ರಿ 9 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಅದ್ದೂರಿಯಾಗಿ ಶೋ ಲಾಂಚ್​ ಆಗಲಿದೆ. ಈಗಾಗಲೇ ಪ್ರೋಮೋ ಕೂಡಾ ರಿಲೀಸ್​ ಆಗಿದ್ದು ಸಖತ್​ ಸದ್ದು ಮಾಡ್ತಾಯಿದೆ. ಒಟ್ನಲ್ಲಿ ಎಸ್​ಪಿಬಿ ಅವರ ಅನುಪಸ್ಥಿತಿಯಲ್ಲಿ ಭಾರಿ ಮಟ್ಟದ ನಿರೀಕ್ಷೆ ಹುಟ್ಟು ಹಾಕಿರುವ ಶೋ ಹೇಗೆ ಮೂಡಿಬರಲಿದೆ, ಕಂಟೆಸ್ಟೆಂಟ್​ಗಳು ಯಾರೆಲ್ಲಾ ಇರಲಿದ್ದಾರೆ ಎಂಬುವುದನ್ನ ಕಾದು ನೋಡಬೇಕು.

Source: newsfirstlive.com Source link