ಮಕ್ಕಳಲ್ಲಿ ಸೋಂಕು, ಭಯಪಡುವ ಅಗತ್ಯವಿಲ್ಲ – ತಜ್ಞರ ಸಮಿತಿ ನೀಡಿರುವ ಸ್ಪಷ್ಟನೆ ಏನು?

ಬೆಂಗಳೂರು: ಈಗ ಮಕ್ಕಳಿಗೆ ಬಹಳ ವೇಗದಲ್ಲಿ ಕೊರೊನಾ ಹರಡುತ್ತಿದೆ ಎಂಬ ವರದಿಗೆ ಸಂಬಂಧಿಸಿದಂತೆ ಪೋಷಕರು ಭಯಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಮಕ್ಕಳ ತಜ್ಞರ ಸಮಿತಿ ಸ್ಪಷ್ಟನೆ ನೀಡಿದೆ.

ಕೋವಿಡ್ ಪ್ರಕರಣ ಕಂಡುಬಂದ ಮಕ್ಕಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಅಗತ್ಯವಿಲ್ಲ. ಕೋವಿಡ್ ಸೊಂಕು ಕಂಡುಬಂದ ಬಹುತೇಕ ಮಕ್ಕಳಲ್ಲಿ ಸೌಮ್ಯ ರೋಗಲಕ್ಷಣಗಳಿರಲಿದ್ದು, ತಮ್ಮಷ್ಟಕ್ಕೆ ತಾವೇ ಚೇತರಿಸಿಕೊಳ್ಳುತ್ತಾರೆ ಎಂದು ಮಕ್ಕಳ ತಜ್ಞರ ಸಮಿತಿಯು ಅಭಿಪ್ರಾಯಪಟ್ಟಿದೆ.

ತಜ್ಞರು ಹೇಳಿದ್ದೇನು?
ಕಳೆದ 20 ದಿನಗಳಿಂದ ಒಟ್ಟಾರೆ ಕೋವಿಡ್ ಪ್ರಕರಣಗಳು ದಿನಕ್ಕೆ ಸರಾಸರಿ 388 ಕಂಡುಬರುತ್ತಿದ್ದು, ಯಾವುದೇ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಮಕ್ಕಳ ಪ್ರಕರಣಗಳ ಮೌಲ್ಯಮಾಪನ ಮಾಡಿದ್ದು(0-18 ವರ್ಷಗಳು), ಕಳೆದ 4 ತಿಂಗಳಲ್ಲಿ ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ ಸರಾಸರಿ ಪ್ರಕರಣಗಳು ಸುಮಾರು ಶೇ.11 ರಷ್ಟಿದೆ.

ತಿಂಗಳಿನಿಂದ ತಿಂಗಳಿಗೆ ಹೋಲಿಸಿದರೆ ಕೋವಿಡ್ ಸೋಂಕು ಅಲ್ಪ ಏರಿಕೆಯನ್ನು ಮಾತ್ರ ಗಮನಿಸಬಹುದಾಗಿದೆ. ಆದರೆ ಇನ್ನೂ ಒಟ್ಟು ಪ್ರತಿನಿತ್ಯದ ಸೋಂಕಿನಲ್ಲಿ ಶೇ.11.5 ಕ್ಕಿಂತ ಕಡಿಮೆಯಿದೆ. ಆದಾಗ್ಯೂ, ಪಾಲಿಕೆಯು 0-12 ವಯಸ್ಸಿನವರನ್ನು ಗಮನಿಸಿದರೆ, ಜೂನ್ ತಿಂಗಳಲ್ಲಿ 2,643 ಪ್ರಕರಣಗಳು, ಜುಲೈ ತಿಂಗಳಲ್ಲಿ 778 ಪ್ರಕರಣಗಳು ಮತ್ತು 2021ರ ಆಗಸ್ಟ್ 13 ರವರೆಗೆ 309 ಪ್ರಕರಣಗಳು ಕಂಡುಬಂದಿದ್ದು, ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗಿದೆ.

ಆಗಸ್ಟ್ ತಿಂಗಳಲ್ಲಿ 0-18 ವರ್ಷದ ಮಕ್ಕಳಲ್ಲಿ ಇಲ್ಲಿಯವರೆಗೆ 511 ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿಯಲ್ಲಿ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಕಳೆದ 10 ದಿನಗಳಲ್ಲಿ ಕಂಡುಬಂದಿರುವ ಪಾಸಿಟಿವ್ ಕೇಸ್‍ಗಳಲ್ಲಿ ಕೇವಲ 5 ಮಕ್ಕಳು ಮಾತ್ರ ಸರ್ಕಾರಿ ಕೋಟಾದಡಿ ದಾಖಲಾಗಿದ್ದು, 24 ಮಕ್ಕಳು ಖಾಸಗಿ ಕೋಟಾದಲ್ಲಿ ದಾಖಲಾಗಿರುತ್ತಾರೆ. ಒಟ್ಟಾರೆ ಶೇ.5.7 ರಷ್ಟು ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾತಿಯಾಗಿದ್ದು, ಬೇರೆ ವಯೋಮಾನದ ಪಾಸಿಟಿವ್ ರೋಗಿಗಳಿಗೆ ಹೋಲಿಸಿದರೆ ಇದು ಕಡಿಮೆಯಾಗಿರುತ್ತದೆ. ಇತರೆ ವಯೋಮಾನದವರಿಗೆ ಹೋಲಿಸಿದರೆ, ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಗಳು ತುಂಬಾ ಕಡಿಮೆ ಮತ್ತು ಎಚ್‍ಡಿಯುನಲ್ಲಿ 3/29 ಮತ್ತು ಐಸಿಯು/ ಐಸಿಯು-ವಿಗೆ ಶೂನ್ಯ ಪ್ರವೇಶಗಳಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ – ಸೋಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ, ಕಾಲೇಜು ಆರಂಭ 

 

ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟು, ಮರಣ ಹೊಂದಿರುವ ಸಂಖ್ಯೆಯನ್ನು ಗಮನಿಸಿದಾಗ ಏಪ್ರಿಲ್ ನಿಂದ ಜೂನ್ ವರೆಗೆ 14 ಮಕ್ಕಳ ಮೃತಪಟ್ಟಿರುವುದು ವರದಿಯಾಗಿದ್ದು, ಕಳೆದ ಎರಡು ತಿಂಗಳಿನಲ್ಲಿ(ಜುಲೈ, ಆಗಸ್ಟ್) ಯಾರೂ ಮೃತಪಟ್ಟಿಲ್ಲ.

ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಟಿಸಿದ ಜಾಗತಿಕ ದತ್ತಾಂಶವನ್ನು ಪರಿಶೀಲಿಸಿದಾಗ, ಮಕ್ಕಳು ಸಾಂಕ್ರಾಮಿಕ ರೋಗದ ಆರಂಭದಿಂದಲೂ ಒಟ್ಟಾರೆ ಶೇ.14.3 ಪ್ರಕರಣಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಕೇವಲ ಶೇ.0.1-1.9 ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದು ಬೆಂಗಳೂರಿಗೂ ಹೋಲುತ್ತದೆ.

blank

ಕೋವಿಡ್ ಸೋಂಕುಲಕ್ಷಣಗಳು ಕಂಡುಬಂದರೆ, ಅವುಗಳನ್ನು ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಬಿಬಿಎಂಪಿ ದೈಹಿಕ ಚಿಕಿತ್ಸಾ ಕೇಂದ್ರಗಳಿಗೆ(ಪಿಟಿಸಿ) ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ(ಪಿಎಚ್‍ಸಿ) ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಿಗೆ(ಸಿಎಚ್‍ಸಿಎ) ಕರೆದುಕೊಂಡುಬರಹುದು.

ಪ್ರಸ್ತುತ ಬೆಂಗಳೂರಿನಲ್ಲಿ ಮಕ್ಕಳ ಆರೈಕೆಗಾಗಿ 7 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯೂ ಸೇರಿದೆ. ಅಲ್ಲದೆ ಬಿಬಿಎಂಪಿಯು ಮಕ್ಕಳ ಆರೈಕೆಗಾಗಿ ಶೀಘ್ರದಲ್ಲೇ 30 ಹಾಸಿಗೆಗಳ ಸಾಮರ್ಥ್ಯ ದ ವ್ಯವಸ್ಥೆ ಮಾಡಲಿದೆ.

ಮುನ್ನೆಚ್ಚರಿಕಾ ಕ್ರಮವಾಗಿ, 3 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಕ್ಕಳು ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು.(ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮತ್ತು ಹೆಚ್ಚು ಜನಸೇರುವ ಕಡೆ ಹೋಗದಿರುವುದು) ಮತ್ತು ಚಿಕ್ಕ ಮಕ್ಕಳು ಯಾವಾಗಲೂ ಪೋಷಕರ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಸೂಕ್ತ.

blank

ಮಕ್ಕಳ ತಜ್ಞರ ಸಮಿತಿ ಸದಸ್ಯರ ಪಟ್ಟಿ:
ಗೌರವ್ ಗುಪ್ತ, ಐಎಎಸ್, ಮುಖ್ಯ ಆಯುಕ್ತರು, ಬಿಬಿಎಂಪಿ.
ರಂದೀಪ್.ಡಿ, ಐಎಎಸ್, ವಿಶೇಷ ಆಯುಕ್ತರು, ಆರೋಗ್ಯ, ಬಿಬಿಎಂಪಿ.
ವಿಜೇಂದ್ರ.ಬಿ.ಕೆ, ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ), ಬಿಬಿಎಂಪಿ.
ನಿರ್ಮಲಾ ಬುಗ್ಗಿ, ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್), ಬಿಬಿಎಂಪಿ.
ರಕ್ಷಯ್, ಪೀಡಿಯಾಟ್ರಿಕ್ ಇನ್‍ಟೆನ್ಸಿವಿಸ್ಟ್, ರೈಂಬೋ ಚಿಲ್ಡ್ರನ್ಸ್ ಹಾಸ್ಪಿಟಲ್, ವೈಟ್‍ಫೀಲ್ಡ್.
ವಿಶ್ವನಾಥ ಕಾಮೋಜಿ, ಸಮಾಲೋಚಕ ಮಕ್ಕಳ ತಜ್ಞ, ಕೊಲಂಬಿಯಾ ಏಷ್ಯಾ, ಹೆಬ್ಬಾಳ.
ಪ್ರಶಾಂತ್ ಉರ್ಸ್, ಕನ್ಸಲ್ಟೆಂಟ್ ಪೀಡಿಯಾಟ್ರಿಶಿಯನ್, ಅಪೋಲೋ ಆಸ್ಪತ್ರೆಗಳು.
ಮಲ್ಲಿಕಾರ್ಜುನ್, ಮಕ್ಕಳ ತಜ್ಞರ ಸಮಾಲೋಚಕರು, ಭಾರತೀಯ ಮಕ್ಕಳ ಅಕಾಡೆಮಿ ಅಧ್ಯಕ್ಷರು.
ಸೆಂಥಿಲ್, ಕನ್ಸಲ್ಟೆಂಟ್ ಪೀಡಿಯಾಟ್ರಿಶಿಯನ್, ಕೊಲಂಬಿಯಾ ಏಷ್ಯಾ, ವೈಟ್ ಫೀಲ್ಡ್.
ನರೇಶ್.ಪಿ, ಕನ್ಸಲ್ಟೆಂಟ್ ಪೀಡಿಯಾಟ್ರಿಶಿಯನ್, ಮಣಿಪಾಲ್ ನಾರ್ತ್ ಸೈಡ್.
ಆನಂದ್, ಮಕ್ಕಳ ತಜ್ಞ, ನೋಡಲ್ ಅಧಿಕಾರಿ – ಪೀಡಿಯಾಟ್ರಿಕ್ಸ್, ಬಿಬಿಎಂಪಿ.
ಸರಸ್ವತಿ, ಮಕ್ಕಳ ತಜ್ಞೆ, ಆರೋಗ್ಯ ಅಧಿಕಾರಿ – ಕ್ಲಿನಿಕಲ್, ಬಿಬಿಎಂಪಿ ದಕ್ಷಿಣ.
ಲಲಿತಾ, ಮಕ್ಕಳ ವೈದ್ಯರು, ಆರೋಗ್ಯ ಅಧಿಕಾರಿ – ಕ್ಲಿನಿಕಲ್, ಬಿಬಿಎಂಪಿ ಪಶ್ಚಿಮ.
ಭಾರತಿ, ಮಕ್ಕಳ ತಜ್ಞರು, ಶ್ರೀರಾಂಪುರ ರೆಫರಲ್ ಆಸ್ಪತ್ರೆ, ಬಿಬಿಎಂಪಿ.
ರಮೇಶ್, ಮಕ್ಕಳ ತಜ್ಞ, ಹಲಸೂರು ರೆಫರಲ್ ಆಸ್ಪತ್ರೆ, ಬಿಬಿಎಂಪಿ.

Source: publictv.in Source link