ಜಿಲ್ಲೆಗಳಲ್ಲಿ ಶಾಲೆ, ಕಾಲೇಜ್ ಆರಂಭಕ್ಕೆ ಗ್ರೀನ್‍ಸಿಗ್ನಲ್ – ಎಲ್ಲಿ ಓಪನ್? ಎಲ್ಲಿ ಕೋಸ್?

ಬೆಂಗಳೂರು: ಶಾಲೆ ಕಾಲೇಜು ಓಪನ್ ಮಾಡುವ ವಿಚಾರದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು, ಕಡಿಮೆ ಸೋಂಕು ಇರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಕೋವಿಡ್ ಮೂರನೇ ಅಲೆ ರಾಜ್ಯದ ಹೊಸ್ತಿಲಲ್ಲಿ ಇರುವಾಗಲೇ ಆಗಸ್ಟ್ 23ರಿಂದ ಶಾಲೆ ಕಾಲೇಜು ಆರಂಭಕ್ಕೆ ಸರ್ಕಾರ ತೀರ್ಮಾನಿಸಿತ್ತು. ಇದರ ಸಾಧಕ ಬಾಧಕಗಳ ಬಗ್ಗೆ ಮುಖ್ಯಮಂತ್ರಿಗಳ ಇವತ್ತಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ನಿಗದಿಯಂತೆ ಶಾಲೆ ಕಾಲೇಜು ಓಪನ್ ಮಾಡಲು ಕೆಲ ತಜ್ಞರು ಸಲಹೆ ನೀಡಿದರೆ ಇನ್ನೂ ಕೆಲವರು ಸೆಪ್ಟೆಂಬರ್ 15ರ ತನಕ ಕಾಯುವುದು ಉತ್ತಮ ಎಂದರು. ಕೊನೆಗೆ ನಿಗದಿಯಂತೆ 9, 10, 11, 12ನೇ ತರಗತಿ ತೆರೆಯಬಹುದು. ಒಂದು ವೇಳೆ ಎಲ್ಲಾದರೂ ಸೋಂಕು ಕಂಡು ಬಂದರೆ ಅಂತಹ ಶಾಲೆಗಳನ್ನು ಒಂದು ವಾರ ಮುಚ್ಚಿ, ಸ್ಯಾನಿಟೇಷನ್ ನಂತರ ಓಪನ್ ಮಾಡಬಹುದು. ಆದರೆ ಪಾಸಿಟಿವಿಟಿ ದರ ಶೇ. 2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲೆ ಕಾಲೇಜು ತೆರೆಯುವುದು ಬೇಡ ಎಂಬ ತೀರ್ಮಾನಕ್ಕೆ ಸಭೆ ಬಂತು.

ಶಾಲೆ ಕಾಲೇಜ್ ಓಪನ್ ಮಾಡುವ ಸಂಬಂಧ ರಾಜ್ಯ ಸರ್ಕಾರ ಸೋಮವಾರ ಮಾರ್ಗಸೂಚಿ ಪ್ರಕಟಿಸಲಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ಸುಳಿವಿನ ಪ್ರಕಾರ, ಕಳೆದ ಸೆಪ್ಟೆಂಬರ್ ನಲ್ಲಿ ಪ್ರಕಟಿಸಲಾಗಿದ್ದ ಮಾರ್ಗಸೂಚಿಯನ್ನೇ ಹೆಚ್ಚು ಕಡಿಮೆ ಮತ್ತೆ ಜಾರಿ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಳ್ಳಯ್ಯನಗಿರಿಗೆ ಲಿಮಿಟೆಡ್ ಟೂರಿಸ್ಟ್- ದಿನಕ್ಕೆ 300 ಗಾಡಿ, 1,200 ಪ್ರವಾಸಿಗರಿಗಷ್ಟೇ ಅವಕಾಶ 

ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳು:
ದಕ್ಷಿಣ ಕನ್ನಡ(3.88%), ಚಿಕ್ಕಮಗಳೂರು(3.31%), ಕೊಡಗು (2.75%), ಉಡುಪಿ (2.41%), ಹಾಸನ(2.25%)

ಕಡಿಮೆ ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳು:
ಯಾದಗಿರಿ(0.04%), ಬಾಗಲಕೋಟೆ(0.13%), ಗದಗ(0.14%), ವಿಜಯಪುರ (0.07%), ಬೀದರ್ (0.11%), ಹಾವೇರಿ (0.15%) ಚಿಕ್ಕಬಳ್ಳಾಪುರ(0.20%), ರಾಮನಗರ(0.20%), ರಾಯಚೂರು (0.22%), ಧಾರವಾಡ(0.30%), ಕೊಪ್ಪಳ (0.26%), ಬಳ್ಳಾರಿ(0.30%), ಕಲಬುರುಗಿ(0.24%), ದಾವಣಗೆರೆ (0.60%), ಬೆಂಗಳೂರು ನಗರ (0.61%), ಬೆಳಗಾವಿ(0.73%), ಮಂಡ್ಯ (0.63%), ಚಿತ್ರದುರ್ಗ(0.82%), ತುಮಕೂರು(0.83%), ಶಿವಮೊಗ್ಗ (1.18%), ಉತ್ತರ ಕನ್ನಡ(1.13%), ಮೈಸೂರು(1.18%), ಬೆಂಗಳೂರು ಗ್ರಾ.(1.09%), ಕೋಲಾರ (1.03%), ಚಾಮರಾಜನಗರ (1.35%)

Source: publictv.in Source link