ಮುಳ್ಳಯ್ಯನಗಿರಿಗೆ ಲಿಮಿಟೆಡ್ ಟೂರಿಸ್ಟ್- ದಿನಕ್ಕೆ 300 ಗಾಡಿ, 1,200 ಪ್ರವಾಸಿಗರಿಗಷ್ಟೇ ಅವಕಾಶ

ಚಿಕ್ಕಮಗಳೂರು: ಕಾಫಿನಾಡ ಮುಳ್ಳಯ್ಯನಗಿರಿ ಭಾಗಕ್ಕೆ ಬರುವ ಪ್ರವಾಸಿಗರು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬರಬೇಕು. ಇಲ್ಲವಾದರೆ, ತಾಲೂಕಿನ ಕೈಮರ ಚೆಕ್‍ಪೋಸ್ಟ್ ಬಳಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಬೆಳ್ಳಂಬೆಳಗ್ಗೆ ಮೊದಲು ಬರುವ 150 ಗಾಡಿ, 600 ಪ್ರವಾಸಿಗರಷ್ಟೆ ಪಾಸ್ ಆಗುತ್ತಾರೆ. ಲೇಟಾಗಿ ಬಂದವರು ಚೆಕ್‍ಪೋಸ್ಟ್ ಬಳಿ ಲಾಕ್ ಆಗಬೇಕಾಗುತ್ತೆ. ಯಾಕೆಂದರೆ, ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ದಿನಕ್ಕೆ 300 ವಾಹನಗಳು ಹಾಗೂ 1,200 ಪ್ರವಾಸಿಗರನ್ನಷ್ಟೆ ಬಿಡಬೇಕೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಇಂದಿನಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ಪ್ರವಾಸಿಗರು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬರಬೇಕಾಗಿದೆ. ಬೆಳಗ್ಗೆ 6-9 ಗಂಟೆವರೆಗೆ 150 ಗಾಡಿಗಳು, 600 ಜನ. ಮಧ್ಯಾಹ್ನ 2-4 ಗಂಟೆಯವರೆಗೆ 150 ಗಾಡಿ, 600 ಪ್ರವಾಸಿಗರಿಗೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಎರಡು ಬೈಕ್‍ಗಳನ್ನು ಒಂದು ಕಾರು ಎಂದು ಪರಿಗಣಿಸಿ ದಿನಕ್ಕೆ 300 ವಾಹನ, 1,200 ಪ್ರವಾಸಿಗರನ್ನು ಮಾತ್ರ ಬಿಡಬೇಕು ಎಂದು ಚೆಕ್‍ಪೋಸ್ಟ್ ಸಿಬ್ಬಂದಿಗೆ ಸೂಚಿಸಿದೆ.

ಇಂದು ಕೂಡ ತಡವಾಗಿ ಬಂದ ಪ್ರವಾಸಿಗರನ್ನ ರಸ್ತೆ ಮಧ್ಯೆಯೇ ಅಡ್ಡಗಟ್ಟಿದ ಪೊಲೀಸರು, ಮಧ್ಯಾಹ್ನ ಬನ್ನಿ ಎಂದು ತಡೆದು ವಾಪಸ್ ಕಳಿಸಿದರು. ಆದ್ದರಿಂದ ಮುಳ್ಳಯ್ಯನಗಿರಿ ಮಾರ್ಗದ ಕೈಮರ ಚೆಕ್‍ಪೋಸ್ಟ್ ಬಳಿ ತಡವಾಗಿ ಬಂದ ಪ್ರವಾಸಿ ವಾಹನಗಳು ಅಲ್ಲಲ್ಲೇ ನಿಂತು ಮಧ್ಯಾಹ್ನವಾಗೋದನ್ನೇ ಕಾಯುತ್ತಿದ್ದರು. ತಡವಾಗಿ ಬಂದ ಪ್ರವಾಸಿಗರು ದೂರದಿಂದ ಬಂದಿದ್ದೇವೆ. ಮಧ್ಯಾಹ್ನದವರೆಗೂ ಸುಮ್ಮನೆ ಕಾಯುವುದು ಹೇಗೆಂದು ಜಿಲ್ಲಾಡಳಿತದ ತಕ್ಷಣದ ನಿರ್ಧಾರದ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದರು.

blank

ಕೆಲವರು ಮಧ್ಯಾಹ್ನದವರೆಗೆ ಇಲ್ಲಿ ನಿಂತು ಏನು ಮಾಡುವುದು ಎಂದು ಕಲ್ಲತ್ತಿಗರಿ, ಕೆಮ್ಮಣ್ಣುಗುಂಡಿ, ಅಯ್ಯನಕೆರೆ ಸೇರಿದಂತೆ ಸುತ್ತಮುತ್ತಲಿನ ಬೇರೆ ಪ್ರವಾಸಿ ತಾಣಗಳತ್ತ ಮುಖಮಾಡಿದರು. ಆದರೆ ಕೆಲವರು ನಾವು ಬೇರೆ ಕಡೆ ಹೋಗಿ ಬರುವುದು ಸ್ವಲ್ಪ ತಡವಾದರೂ ಮಧ್ಯಾಹ್ನ ಕೂಡ ಹೋಗಲಾಗುವುದಿಲ್ಲ. ಹಾಗಾಗಿ ಎಲ್ಲೂ ಹೋಗುವುದು ಬೇಡವೆಂದು ನಿಂತಲ್ಲೇ ನಿಂತು ಮಧ್ಯಾಹ್ನವಾಗೋದನ್ನ ಕಾಯುತ್ತಿದ್ದರು.

blank

ಕೇವಲ ಮುಳ್ಳಯ್ಯನಗಿರಿಗಷ್ಟೇ ಅಲ್ಲದೆ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೂ ಪ್ರವಾಸಿ ತಾಣದ ವಿಸ್ತೀರ್ಣದ ಆಧಾರದ ಮೇಲೆ ಪ್ರವಾಸಿಗರನ್ನ ನಿರ್ಬಂಧಿಸಲಾಗಿದೆ. ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ಕಡಿಮೆಯಾದರೂ ಜಿಲ್ಲೆಯಲ್ಲಿ ಆಗಿರಲಿಲ್ಲ. ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಪ್ರತಿ ದಿನ ನೂರರ ಸಮೀಪವೇ ಕೇಸ್‍ಗಳು ಪತ್ತೆಯಾಗುತ್ತಿದ್ದವು. ಈ ಮಧ್ಯೆ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಕಂಡ ಜಿಲ್ಲೆಯ ಜನ ಕೂಡ ಆತಂಕಕ್ಕೀಡಾಗಿದ್ದರು. ಮಳೆ, ಶೀತದ ವಾತಾವರಣ. ಪ್ರವಾಸಿಗರಿಂದ ಕೊರೊನಾ ಹೆಚ್ಚಾದರೆ ಮತ್ತಷ್ಟು ಸಮಸ್ಯೆಯಾಗುತ್ತೆ. ಹಾಗಾಗಿ, ಕೂಡಲೇ ಜಿಲ್ಲೆಗೆ ಪ್ರವಾಸಿಗರನ್ನ ನಿಷೇಧಿಸಬೇಕೆಂದು ಜಿಲ್ಲಾದ್ಯಂತ ಜನ ಕೂಡ ಒತ್ತಾಯಿಸಿದ್ದರು. ಈಗ ಜಿಲ್ಲಾಡಳಿತದ ಪ್ರವಾಸಿಗರ ಮೇಲೆ ಹೇರಿರುವ ನಿರ್ಬಂಧವನ್ನ ಜಿಲ್ಲೆಯ ಜನ ಕೂಡ ಸ್ವಾಗಿತಿಸಿದ್ದಾರೆ.

Source: publictv.in Source link