ಟಿಎಂಸಿ​ ನಾಯಕನಿಗೆ ಗುಂಡಿಕ್ಕಿ ಹತ್ಯೆ; ಬಿಜೆಪಿ ಮಾಡಿದ ಕೊಲೆ ಎಂದು ಆರೋಪ

ಟಿಎಂಸಿ​ ನಾಯಕನಿಗೆ ಗುಂಡಿಕ್ಕಿ ಹತ್ಯೆ; ಬಿಜೆಪಿ ಮಾಡಿದ ಕೊಲೆ ಎಂದು ಆರೋಪ

ಕೋಲ್ಕತ್ತಾ: ಸದ್ಯದಲ್ಲೇ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಖರ್ದಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಈ ಚುನಾವಣೆ ಗೆಲ್ಲಲು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ವಿಪಕ್ಷಗಳು ಭಾರೀ ಸರ್ಕಸ್​​ ನಡೆಸುತ್ತಿವೆ. ಹೀಗಿರುವಾಗ ಇದೇ ಕ್ಷೇತ್ರದ ತೃಣಮೂಲ ಕಾಂಗ್ರೆಸ್​​ ಯುವ ಘಟಕದ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಹೌದು, ಇತ್ತೀಚೆಗೆ ಖರ್ದಾ ಟಿಎಂಸಿ ಶಾಸಕ ಕಾಜಲ್ ಸಿನ್ಹಾ ಕೋವಿಡ್​​ನಿಂದ ಮೃತಪಟ್ಟಿದ್ದರು. ಇವರ ಅಗಲಿಕೆಯಿಂದ ತೆರವಾದ ಖರ್ದಾ ವಿಧಾನಸಭಾ ಕ್ಷೇತ್ರದಲ್ಲೀಗ ಉಪಚುನಾವಣೆ ನಡೆಯಲಿದೆ. ಇಂತಹ ಹೊತ್ತಲ್ಲೇ ಟಿಎಂಸಿ ಗೆಲುವಿಗಾಗಿ ಓಡಾಡುತ್ತಿದ್ದ ಪಕ್ಷದ ಯುವ ನಾಯಕ ಮತ್ತು ಮೃತ ಶಾಸಕ ಕಾಜಲ್ ಸಿನ್ಹಾ ಆಪ್ತ ರಣಜೋಯ್ ಶ್ರೀವಾಸ್ತವ ಎಂಬುವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ರಣಜೋಯ್ ಶ್ರೀವಾಸ್ತವ (33) ತನ್ನ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಖರ್ದಾದ ಬಿಟಿ ರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇದುವರೆಗೂ ಶ್ರೀವಾಸ್ತವನನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿಲ್ಲ.

ಇದನ್ನೂ ಓದಿ: ಕೃಷಿ ಮಾರುಕಟ್ಟೆ ಸುಧಾರಣೆಯಿಂದ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದೆ- ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮಾತು

ಇನ್ನೊಂದೆಡೆ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್​ ಈ ಕೊಲೆಗೆ ಬಿಜೆಪಿಯೇ ನೇರ ಹೊಣೆ ಎಂದು ಆರೋಪಿಸಿದೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ನಮಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

Source: newsfirstlive.com Source link