ಭಾರೀ ಕಡಿಮೆ ಮೊತ್ತಕ್ಕೆ ಹರಾಜಾದ ವಿಜಯ್​ ಮಲ್ಯ ಮನೆ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಭಾರೀ ಕಡಿಮೆ ಮೊತ್ತಕ್ಕೆ ಹರಾಜಾದ ವಿಜಯ್​ ಮಲ್ಯ ಮನೆ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

1. ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

blank
ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು ಕೊರೊನಾ ಹಿನ್ನೆಲೆ ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಗ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಬಾರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಒಲಿಂಪಿಕ್ಸ್ ವಿಜೇತರು ಭಾಗಿಯಾಗಿದ್ದು ವಿಶೇಷವಾಗಿತ್ತು. ಇನ್ನು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ದೇಶಾದ್ಯಂತ ಅಲರ್ಟ್​ ಘೋಷಿಸಲಾಗಿದ್ದು ಕೆಂಪುಕೋಟೆ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

2. ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ
ಇನ್ನು ನಾಡಿನಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಲಿದ್ದಾರೆ. 100 ಮಂದಿ ಕೋವಿಡ್ ವಾರಿಯರ್ಸ್ ಹಾಗೂ ಕೊರೊನಾ ಸೋಂಕಿನಿಂದ ಗುಣಮುಖರಾದ 25 ಜನರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಮುಂಜಾಗ್ರತಾ ಕ್ರಮ ಪಾಲಿಸಬೇಕೇಂದು ಎಚ್ಚರಿಕೆ ನೀಡಲಾಗಿದೆ.

3. ರಾಷ್ಟ್ರಗೀತೆ ಹಾಡಿ ದಾಖಲೆ ಬರೆದ ಜನತೆ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಒಟ್ಟಾಗಿ ರಾಷ್ಟ್ರಗೀತೆ ಹಾಡುವಂತೆ ಪ್ರಧಾನಿ ಮೋದಿ ಕೊಟ್ಟ ಕರೆಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಈವರೆಗೆ 1.5 ಕೋಟಿ ಮಂದಿ ರಾಷ್ಟ್ರಗೀತೆ ಹಾಡಿ ವಿಡಿಯೊಗಳನ್ನು ಸರ್ಕಾರದ ವೆಬ್‌ಸೈಟ್‌ rashtragaan.inಗೆ ಅಪ್ಲೋಡ್‌ ಮಾಡಿದ್ದಾರೆ. ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕಿ ಬಾತ್ ನಲ್ಲಿ’, ದೇಶದ ನಾಗರಿಕರು ರಾಷ್ಟ್ರಗೀತೆಯನ್ನು ಒಟ್ಟಿಗೆ ಹಾಡಲು ಕರೆ ನೀಡಿದ್ದರು. ಮೋದಿ ನೀಡಿದ ಕರೆಗೆ ಓಗೊಟ್ಟ ಜನತೆ ಒಟ್ಟಾಗಿ ರಾಷ್ಟ್ರಗೀತೆ ಹಾಡಿ ದಾಖಲೆ ಬರೆದಿದ್ದಾರೆ.

4. ಕೊರೊನಾ ಪಾಸಿಟಿವಿಟಿ ದರ ಕಡಿಮೆ ಇದ್ರೆ ತರಗತಿ ಪ್ರಾರಂಭ
ರಾಜ್ಯದಲ್ಲಿ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಪಿಯುಸಿ ತರಗತಿ ಆರಂಭಿಸಲು ಮುಂದಾಗಿದೆ. ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ 9, 10, ಪಿಯುಸಿ ತರಗತಿ ಪ್ರಾರಂಭಿಸಲು ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಾಲೆಗಳಲ್ಲಿ ಶೇ. 2ಕ್ಕಿಂತ ಹೆಚ್ಚು ಪ್ರಕರಣ ವರದಿಯಾದರೆ, ಒಂದು ವಾರ ಕಾಲ ಶಾಲೆ ಮುಚ್ಚಿ ಸ್ವಚ್ಛಗೊಳಿಸಿದ ನಂತರ ತೆರೆಯಲು ಕ್ರಮ ವಹಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

5. 54 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ವಿತರಣೆ

blank
ಭಾರತದಲ್ಲಿ ಕೊರೊನಾ ಸೋಂಕು ವಿರುದ್ದ ಹೋರಾಡಲು ಲಸಿಕೆ ಒಂದೇ ಮಾರ್ಗ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಈ ಹಿನ್ನಲೆ ಕೇಂದ್ರ ಸರ್ಕಾರ ಸೋಂಕು ನಿಯಂತ್ರಿಸಲು ಹಂತ ಹಂತವಾಗಿ ಲಸಿಕೆ ವಿತರಣೆ ಮಾಡುತ್ತಿದೆ. ಸದ್ಯ 211 ದಿನಗಳಲ್ಲಿ 54 ಕೋಟಿಗಿಂತಲೂ ಅಧಿಕ ಕೊರೊನಾ ಲಸಿಕೆ ಡೋಸ್​ ನೀಡಲಾಗಿದೆ. ನಿನ್ನೆ ಒಂದೇ ದಿನ 37 ಲಕ್ಷ ಮಂದಿಗೆ ಮೊದಲ ಡೋಸ್​ ಲಸಿಕೆ ನೀಡಿದ್ರೆ 14 ಲಕ್ಷಕ್ಕಿಂತ ಹೆಚ್ಚಿನ ಮಂದಿಗೆ ಎರಡನೇ ಡೋಸ್​ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

6. ₹52 ಕೋಟಿಗೆ ಮಾರಾಟವಾದ ಮಲ್ಯ ಮನೆ
ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿಹೋದ ಭ್ರಷ್ಟ ಉದ್ಯಮಿ ವಿಜಯ್​ ಮಲ್ಯ ನಿವಾಸ ಬರೋಬ್ಬರಿ 52 ಕೋಟಿಗೆ ಮಾರಾಟವಾಗಿದೆ. ಮುಂಬೈನ ವೈಲ್​ ಪಾರ್ಲೆ ಬಳಿ ಇದ್ದ ಐಷಾರಾಮಿ ಮನೆ ಕಿಂಗ್​ಫಿಶರ್​ನ್ನು ಡಿಆರ್​ಟಿ ಸಂಸ್ಥೆ ಹರಾಜಿಗೆ ಇಟ್ಟಿದ್ದು, ಹೈದರಾಬಾದ್​ ಮೂಲದ ಸ್ಯಾತ್ರನ್​ ರಿಯಲೇಟರ್ಸ್​ 52 ಕೋಟಿಗೆ ಖರೀದಿ ಮಾಡಿದ್ದಾರೆ. ಈ ಮನೆಯ ಸರಾಸರಿ ಮೊತ್ತ 150 ಕೋಟಿ ಆಗಿದ್ದು, ಹರಾಜು ಪ್ರಕ್ರಿಯೆ ಪ್ರಾರಂಭ ಮಾಡುವ ಮುನ್ನ 135 ಕೋಟಿಗೆ ಮಾರಾಟ ಮಾಡುವುದಾಗಿ ಸಂಸ್ಥೆ ತಿಳಿಸಿತ್ತು.

7. ಅಫ್ಘಾನಿಸ್ತಾನ ಬಹುತೇಕ ತಾಲಿಬಾನಿಗಳ ವಶಕ್ಕೆ?

ಅಫ್ಘಾನಿಸ್ತಾನವನ್ನು ಬಹುತೇಕ ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿರುವುದು ಖಾತ್ರಿಯಾಗುತ್ತಿದೆ. ಈ ಹಿನ್ನೆಲೆ ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿದೇಶಕ್ಕೆ ತೆರಳುತ್ತಾರೆ ಎನ್ನಲಾಗ್ತಿದೆ. ತಾಲಿಬಾನ್​ಗಳು ದೇಶದಲ್ಲಿ ನಡೆಸುತ್ತಿರುವ ಅಟ್ಟಹಾಸವನ್ನು ನಿಲ್ಲಿಸುವಂತೆ ಕೋರಿ ತುರ್ತು ಶಾಂತಿ ಒಪ್ಪಂದ ಮಾಡಿಕೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ನಂತರ ಕುಟುಂಬ ಸಮೇತ ಅಧ್ಯಕ್ಷ ಅಶ್ರಫ್​ ಘನಿ ಬೇರೊಂದು ದೇಶಕ್ಕೆ ತೆರಳಲಿದ್ದಾರೆ ಅಂತ ಅಶ್ರಫ್​ ಆಪ್ತ ಮೂಲಗಳು ತಿಳಿಸಿವೆ.

8. ಹೈಟಿ ಭೂಕಂಪ ತೀವ್ರತೆಗೆ 304 ಮಂದಿ ಬಲಿ

blank
ಕೆರಿಬಿಯನ್​ ರಾಷ್ಟ್ರ ಹೈಟಿಯಲ್ಲಿ 7.2 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಈವರೆಗೂ 304 ಜನ ಸಾವನ್ನಪ್ಪಿದ್ದಾರೆ ಅಂತ ದೇಶದ ನಾಗರೀಕ ಸಂರಕ್ಷಣಾ ತಂಡ ಮಾಹಿತಿ ನೀಡಿದೆ. ಸುನಾಮಿ ಏಳುವ ಭೀತಿಯೂ ಸೃಷ್ಟಿಯಾಗಿದ್ದು, ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ನೆಲಸಮವಾಗಿದೆ. ಸಂರಕ್ಷಣಾ ತಂಡ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದು, ಕಡಲ ತೀರದಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರ ಮಾಡಲಾಗಿದೆ ಅಂತ ವಿಪತ್ತು ನಿರ್ವಹಣಾ ತಂಡ ಮಾಹಿತಿ ನೀಡಿದೆ.

9. ರೂಟ್ ಶತಕ, ಇಂಗ್ಲೆಂಡ್ 391 ರನ್​ಗೆ ಆಲೌಟ್

ನಾಯಕ ಜೋ ರೂಟ್ ಭರ್ಜರಿ 180 ರನ್​ಗಳ ನೆರವಿನಿಂದ ಇಂಗ್ಲೆಂಡ್, ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್​ನ ಮೂರನೇ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್​ನಲ್ಲಿ 391 ರನ್​ಗೆ ಆಲೌಟಾಗಿದೆ. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಕೇವಲ 27 ರನ್ ಮುನ್ನಡೆ ಪಡೆದಿದೆ. ಬೈರ್ ಸ್ಟೋವ್ ಔಟಾದ ಬಳಿಕ ಜೋಸ್ ಬಟ್ಲರ್23 ಅವರೊಂದಿಗೆ ಕೈಜೋಡಿಸಿದ ರೂಟ್ 5ನೇ ವಿಕೆಟ್ ಗೆ 54 ರನ್ ಹಾಗೂ ಆಲ್ ರೌಂಡರ್ ಮೊಯಿನ್ ಅಲಿ27 ಅವರೊಂದಿಗೆ 6ನೇ ವಿಕೆಟ್ ಗೆ 58 ರನ್ ಸೇರಿಸಿ ತಂಡ 391 ರನ್ ಗಳಿಸಲು ನೆರವಾದರು.

10. ಸ್ವಾತಂತ್ರ್ಯ ದಿನಾಚರಣೆಗೆ ‘ಜೇಮ್ಸ್’​ ಪೋಸ್ಟರ್​ ಗಿಫ್ಟ್​

blank
75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ಜೇಮ್ಸ್​ ಪೋಸ್ಟರ್​ ಇಂದು ರಿಲೀಸ್ ಆಗಲಿದೆ. ಸಿನಿಮಾಗೆ ನಿರ್ದೇಶಕ ಚೇತನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದು, ಪುನೀತ್​ಗೆ ಜೋಡಿಯಾಗಿ ಪ್ರಿಯಾ ಆನಂದ್​ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಬಹುದೊಡ್ಡ ತಾರಾಗಣವೇ ಹೊಂದಿರುವ ಜೇಮ್ಸ್​ ಸಿನಿಮಾ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ್ದು, ಇಂದು ಚಿತ್ರತಂಡ ಅಧಿಕೃತ ಪೋಸ್ಟರ್​ ರಿಲೀಸ್​ ಮಾಡೋದಾಗಿ ತಿಳಿಸಿದೆ.

Source: newsfirstlive.com Source link