ಸಿಲಿಂಡರ್ ಹೊತ್ತ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡು ಹೊತ್ತಿ ಉರಿಯಿತು

ಜೈಪುರ: ಸಿಲಿಂಡರ್ ಹೊತ್ತು ಸಾಗುತ್ತಿದ್ದ ಟ್ರಕ್ ಪಲ್ಟಿಯಾಗಿ ಒಂದಾದ ಮೇಲೊಂದು ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಜೈಪುರ್‌ನಲ್ಲಿ ನಡೆದಿದೆ.

ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಈ ಅವಘಡ ಉಂಟಾಗಿದ್ದು, NH-48 ರಲ್ಲಿ ಸಿಲಿಂಡರ್ ತುಂಬಿದ್ದ ಟ್ರಕ್ ಪಲ್ಟಿಯಾಗಿ ಬೆಂಕಿ ಹೊತ್ತಿ ಉರಿದಿದೆ. ಟ್ರಕ್ ನೆಲಕ್ಕೆ ಉರುಳುತ್ತಿದ್ದಂತೆಯೇ ಬೆಂಕಿ ತಗುಲಿದ್ದು, ಸಿಲಿಂಡರ್‌ಗಳು ಸ್ಫೋಟಿಸಲಾರಂಭಿಸಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆದ್ದಾರಿಯಲ್ಲಿ ಎರಡೂ ಬದಿಗಳಿಂದ ವಾಹನಗಳ ನಿಲ್ಲಿಸಿದ್ದು, ಏಕಾಏಕಿ ಸಂಚಾರ ನಿರ್ಬಂಧಿಸಿದ ಕಾರಣ ಸುಮಾರು 5  ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ವಾಹನ ದಟ್ಟಣೆ ಉಂಟಾಗಿದೆ. ಅಗ್ನಿಶಾಮಕದಳದ ತಂಡವೂ ಸ್ಥಳಕ್ಕೆ ತಲುಪಿದ್ದು, ಸದ್ಯ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಿಲಿಂಡರ್ ಒಂದರ ನಂತರ ಒಂದರಂತೆ ಸಿಡಿಯತೊಡಗಿತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ:  54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ

 

ದುಡು ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಅಪಘಾತಕ್ಕೆ ಕಾರಣ ಹುಡುಕುತ್ತಿದ್ದಾರೆ. ಸ್ಫೋಟ ಅನೇಕ ಕಿಲೋಮೀಟರ್ ತನಕ ಕೇಳಿದ್ದರಿಂದ ಸುತ್ತಮುತ್ತಲ ಊರಿನ ಜನರೂ ಗಾಬರಿಯಾಗಿದ್ದು, ಇದೀಗ ಎಲ್ಲರಿಗೂ ವಿಷಯ ತಲುಪಿದೆ. ಅಗ್ನಿ ಅವಘಡ ದೊಡ್ಡದಾಗಿ ಸಂಭವಿಸಿದ್ದರೂ ಅದೃಷ್ಟವಶಾತ್ ಯಾವುದೇ ಸಾವು, ನೋವು ಘಟಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Source: publictv.in Source link