ಹೊರ ಜಿಲ್ಲೆಗಳಿಂದ ಕೊರೊನಾ ಹೆಚ್ಚಳ ಭೀತಿ- ಚಾಮರಾಜನಗರದಲ್ಲಿ ಅಂತರ್ ಜಿಲ್ಲಾ ಚೆಕ್‍ಪೋಸ್ಟ್

ಚಾಮರಾಜನಗರ: ಹೊರ ಜಿಲ್ಲೆಗಳಿಂದ ಕೊರೊನಾ ಹರಡುವ ಭೀತಿ ಹಿನ್ನೆಲೆ ಜಿಲ್ಲಾಡಳಿತ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ತೆರೆದಿದ್ದು, ಹೊರ ಜಿಲ್ಲೆಗಳಿಂದ ಬರುವವರಿಗೆ ಕೊರೊನಾ ರ್ಯಾಂಡಮ್ ಟೆಸ್ಟ್ ಮಾಡಲಾಗುವುದು. ಸೋಂಕಿನ ಲಕ್ಷಣ ಕಂಡು ಬಂದರೆ ಚೆಕ್ ಪೋಸ್ಟ್ ಗಳಲ್ಲೇ ಆರ್‍ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು. ಸೋಂಕಿತರನ್ನು ಚೆಕ್ ಪೋಸ್ಟ್ ನಿಂದ ವಾಪಸ್ ಕಳುಹಿಸುವ ನಿರ್ಧಾರ ಮಾಡಲಾಗಿದೆ.

ನೆರೆಯ ಕೇರಳ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಎಂಟು ಗಡಿ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್ ಕಫ್ರ್ಯೂ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಈ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳನ್ನೂ ತೆರೆದಿದೆ. ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಗಡಿ ಪ್ರದೇಶಗಳಲ್ಲಿ ಈಗಾಗಲೇ ಆರು ಅಂತರ್‍ರಾಜ್ಯ ಪೋಸ್ಟ್ ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಹೊಸದಾಗಿ ಐದು ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗಿದೆ.

ಹೊರ ರಾಜ್ಯಗಳಿಗಿಂತ ಅಂತರ್ ಜಿಲ್ಲೆಗಳಿಂದಲೇ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು, ಮಂಡ್ಯ ಸೇರಿದಂತೆ ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಗುಂಡ್ಲುಪೇಟೆ ತಾಲೂಕಿನ ಬೇಗೂರು, ಚಾಮರಾಜನಗರ ತಾಲೂಕಿನ ಹೆಗ್ಗವಾಡಿ, ಬಾಣಹಳ್ಳಿ, ಕೊಳ್ಳೇಗಾಲ ತಾಲೂಕಿನ ಟಗರಪುರ ಹಾಗೂ ಸತ್ತೇಗಾಲದಲ್ಲಿ ಅಂತರ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಈ ಚೆಕ್ ಪೋಸ್ಟ್ ಗಳಿಗೆ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ನೌಕರರನ್ನು ನಿಯೋಜನೆ ಮಾಡಲಾಗಿದೆ.

ಜಿಲ್ಲೆಯ ಮಹದೇಶ್ವರ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಿಳಿಗಿರಿರಂಗನ ಬೆಟ್ಟ, ಬಂಡೀಪುರ, ಭರಚುಕ್ಕಿ ಜಲಪಾತ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಬರುವುದು ಸಾಮಾನ್ಯವಾಗಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಹೊರ ಜಿಲ್ಲೆಯಿಂದ ಬಂದವರಿಂದಲೇ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿರುವುದು ಕಂಡು ಬಂದಿದೆ. ಈ ಹಿನ್ನಲೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ತೆರೆದಿರುವ ಬಗ್ಗೆ ಡಿಸಿ ಎಂ.ಆರ್.ರವಿ ತಿಳಿಸಿದ್ದಾರೆ.

Source: publictv.in Source link