ಬೆಂಗಳೂರು ಸುತ್ತ ಪ್ರವಾಸಿ ತಾಣ ಬಂದ್- ಬನ್ನೇರುಘಟ್ಟಕ್ಕೆ ಸಾವಿರಾರು ಪ್ರವಾಸಿಗರ ಲಗ್ಗೆ

ಬೆಂಗಳೂರು: ರಾಜಧಾನಿ ಸುತ್ತ ಪ್ರವಾಸಿತಾಣಗಳ ನಿರ್ಬಂಧ ಹಿನ್ನಲೆಯಲ್ಲಿ ಮನರಂಜನಾ ಮನುಸ್ಸುಗಳು ಉದ್ಯಾನದತ್ತ ಮುಖಮಾಡಿವೆ. ಸಾವಿರಾರು ಪ್ರವಾಸಿಗರು ಬನ್ನೇರುಘಟ್ಟ ಉದ್ಯಾನವನಕ್ಕೆ ಲಗ್ಗೆ ಇಡುತ್ತಿದ್ದಾರೆ.

ಭಾನುವಾರ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ರಜಾದಿನ, ಮುಂದೆ ಶಾಲಾರಂಭ ಸಹ ಘೋಷಣೆಯಾಗಿದೆ ಮತ್ತು ರಜೆಯ ಅಂತಿಮ ದಿನಗಳ ಲೆಕ್ಕಚಾರದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿ ಪ್ರಿಯರು ಮತ್ತು ಪೋಷಕರು ಆಗಮಿಸುತ್ತಿದ್ದಾರೆ.

ಬೆಳಗ್ಗೆಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಗೇಟ್ ಮುಂಭಾಗದಲ್ಲಿ ಸರತಿ ಸಾಲಿನಲ್ಲಿನಿಂತಿರುವ ಸಾವಿರಾರು ಪ್ರಾಣಿ ಪ್ರಿಯರು, ಜೀವ ಸಂಕುಲವನ್ನು ಕಾಣಲು ಮುಗಿಬಿದ್ದಿದ್ದಾರೆ. ಆನ್‍ಲೈನ್ ಸೇರಿದಂತೆ ಕೌಂಟರ್ ಗಳಲ್ಲಿ ಸಹ ಮಧ್ಯಾಹ್ನದವರೆಗೆ ಟಿಕೆಟ್ ಜೋರಾಗಿ ಮಾರಾಟವಾಗಿವೆ. ಬೆಳಗ್ಗೆಯಿಂದ ಸಂಜೆವರೆಗೆ 10,000 ಪ್ರವಾಸಿಗರು ಭೇಟಿ ನೀಡಿದ್ದಾರೆ.

ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಗುಂಪು ಗುಂಪಾಗಿ ಜನ ಸೇರುತ್ತಿರುವುದು ಆತಂಕ ಮೂಡಿಸಿದೆ. ಜೊತೆಗೆ ಪಾರ್ಕ್ ನ ಸಿಬ್ಬಂದಿ ಮೈಕ್‍ನಲ್ಲಿ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚನೆ ನೀಡುತ್ತಿದ್ದರು. ಯಾವುದೇ ಪ್ರವಾಸಿಗರು ಆದೇಶ ಪಾಲನೆ ಮಾಡದೆ ಗುಂಪುಗುಂಪಾಗಿ ಸೇರಿ ಕೊರೊನಾ ಮತ್ತಷ್ಟು ಸ್ಫೋಟ ಆಗಲು ದಾರಿ ಮಾಡಿದಂಗೆ ಕಾಣುತ್ತಿತ್ತು.

Source: publictv.in Source link